Advertisement

ತಪ್ಪಿತಸ್ಥರು ತಪ್ಪಿಸಿಕೊಳ್ಳಲು ಬಿಡೆವು: ಡಿಜಿಪಿ ಪ್ರವೀಣ್‌ ಸೂದ್

02:26 AM Sep 09, 2020 | mahesh |

ಮಂಗಳೂರು: ಕಾನೂನಿನ ಎದುರು ಎಲ್ಲರೂ ಸಮಾನರು. ತಪ್ಪು ಮಾಡಿದವರು ಯಾರೇ ಆಗಿದ್ದರೂ ಅವರು ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಜಾಮೀನು ದೊರೆಯದಂತೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಹೇಳಿದ್ದಾರೆ.

Advertisement

ಮಂಗಳವಾರ ಮಂಗಳೂರಿನ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಪೊಲೀಸರಿಗೆ ಹೈ ಪ್ರೊಫೈಲ್‌-ಲೋ ಪ್ರೊಫೈಲ್‌ ಪ್ರಕರಣಗಳು ಎಂಬುದಿಲ್ಲ. ಎಲ್ಲರೂ ಸಮಾನರು. ಮಾದಕ ವಸ್ತುಗಳನ್ನು ನಿಯಂತ್ರಿಸುವಲ್ಲಿ ಎಲ್ಲ ಪೊಲೀಸ್‌ ಠಾಣೆಗ ಳಿಗೂ ಜವಾಬ್ದಾರಿ ಇರುತ್ತದೆ. ಮಾದಕ ವಸ್ತುಗಳು ಅಂತಾರಾಷ್ಟ್ರೀಯವಾಗಿ ವಿಮಾನಗಳ ಮೂಲಕವೂ ಬರುವುದು, ಮಾದಕ ವಸ್ತು ಸಾಗಾಟಗಾರರು ಸೈಬರ್‌ ಅಪರಾಧಗಳಲ್ಲಿಯೂ ತೊಡಗಿಕೊಂಡಿ ರುವುದು ಮೊದಲಾದ ವಿಚಾರಗಳು ತಿಳಿದಿದೆ. ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ. ಕೇಂದ್ರದ ತನಿಖಾ ಸಂಸ್ಥೆಗಳ ಜತೆಗೂ ಕೈ ಜೋಡಿಸುತ್ತಿದ್ದೇವೆ ಎಂದರು.

ಮಂಗಳೂರು ನಂಟು ತನಿಖೆ ಬಳಿಕ ಬಹಿರಂಗ
ಬೆಂಗಳೂರಿನಲ್ಲಿ ಡ್ರಗ್ಸ್‌ ಪೆಡ್ಲರ್‌ಗಳ ಬಂಧನ ಪ್ರಕರಣಗಳು ಮತ್ತು ಮಂಗಳೂರಿಗೂ ನಂಟು ಇರುವ ಕುರಿತಾಗಿ ಪ್ರಶ್ನಿಸಿದಾಗ “ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಹೇಳಿಕೆ ನೀಡಲಾಗದು. ತನಿಖೆ ಪೂರ್ಣಗೊಂಡ ಅನಂತರ ಎಲ್ಲ ಮಾಹಿತಿ ನೀಡಲಾಗುವುದು’ ಎಂದು ಪೊಲೀಸ್‌ ಮಹಾನಿರ್ದೇಶಕರು ಹೇಳಿದರು.

ಸಾಮೂಹಿಕ ಹೊಣೆಗಾರಿಕೆ
ಡ್ರಗ್ಸ್ ನ್ನು ಸೇವಿಸುವವರು ಮೊದಲು ತಿಳಿಯದೆ ಸೇವಿಸಿರಬಹುದು, ಅದರೆ ಪೂರೈಕೆ ಮಾಡುವವರು (ಪೆಡ್ಲರ್‌ಗಳು) ಎಲ್ಲ ತಿಳಿದೇ ಮಾಡಿರುತ್ತಾರೆ. ಡ್ರಗ್ಸ್‌ ಸೇವನೆಯನ್ನು ತಡೆಯುವುದು ಪೊಲೀಸರ ಜವಾಬ್ದಾರಿ ಮಾತ್ರವಲ್ಲ, ಸಮಾಜದಲ್ಲಿರುವ ಎಲ್ಲರ ಸಾಮೂಹಿಕ ಹೊಣೆಗಾರಿಕೆಯಾಗಿದೆ. ಈ ಬಗ್ಗೆ ಜಾಗೃತಿಯೂ ಹೆಚ್ಚಾಗಬೇಕು ಎಂದರು.

ಪೊಲೀಸ್‌ ಕೆಲಸ ಶೇ. 100ರಷ್ಟು ಆರಂಭ
ಪೊಲೀಸರು ಕೊರೊನಾ ಸಂದರ್ಭ ಸ್ವಯಂ ರಕ್ಷಣೆ, ಜನರ ರಕ್ಷಣೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ದ.ಕ. ಜಿಲ್ಲೆಯ ಪೊಲೀಸರು ಕೂಡ ಅಭಿನಂದನಾರ್ಹರು. ಕೊರೊನಾ ಜತೆಗೆ ಪೊಲೀಸ್‌ ಕೆಲಸಗಳು ಶೇ. 100ರಷ್ಟು ಪುನರಾರಂಭಗೊಂಡಿವೆ. ಇಲಾಖೆಯಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಗತಗೊಳಿಸುವ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಪೊಲೀಸರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಪ್ರವೀಣ್‌ ಸೂದ್‌ ಹೇಳಿದರು.

Advertisement

ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀ ಪ್ರಸಾದ್‌, ಮಂಗಳೂರು ಪೊಲೀಸ್‌ ಆಯುಕ್ತ ವಿಕಾಸ್‌ ಕುಮಾರ್‌, ಐಜಿಪಿ ದೇವಜ್ಯೋತಿ ರಾಯ್‌, ಡಿಸಿಪಿಗಳಾದ ವಿನಯ್‌ ಗಾಂವ್ಕರ್‌, ಅರುಣಾಂಶುಗಿರಿ ಮೊದಲಾದ‌ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next