Advertisement

ಪ್ಲಾಸ್ಟಿಕ್‌, ಪಾಲಿಥಿನ್‌ ಬಳಕೆ ಕೈಬಿಡಿ

02:12 PM May 28, 2018 | Harsha Rao |

ಹೊಸದಿಲ್ಲಿ: ದೇಶದ ಜನರು ಪ್ಲಾಸ್ಟಿಕ್‌ ಮತ್ತು ಪಾಲಿಥಿನ್‌ ಬಳಕೆಯನ್ನು ಕೈಬಿಡಬೇಕು ಎಂದು  ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ರವಿವಾರ 44ನೇ ಆವೃತ್ತಿಯ “ಮನ್‌ ಕಿ ಬಾತ್‌’ನಲ್ಲಿ ಮಾತನಾಡಿದ ಅವರು, ಅದರಿಂದಾಗಿ ಪರಿಸರ, ಜೀವ ವೈವಿಧ್ಯ ಮತ್ತು ಆರೋಗ್ಯಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ. ಅದಕ್ಕಾಗಿ ಜೂ.5ರಂದು ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಕರೆ ನೀಡಿದ್ದಾರೆ. ಆ ದಿನ ಕೇವಲ ಸಸಿ ನೆಟ್ಟರೆ ಸಾಲದು, ಅದು ಬೆಳೆದು ಮರವಾಗುವ ತನಕ ಜೋಪಾನವಾಗಿ ಕಾಪಾಡಬೇಕು ಎಂದಿದ್ದಾರೆ. ಪ್ರಸಕ್ತ ಸಾಲಿನ ವಿಶ್ವ ಪರಿಸರ ದಿನವನ್ನು ಭಾರತವೇ ಆಯೋಜಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು. 

Advertisement

ಇತ್ತೀಚೆಗೆ ಉತ್ತರ ಭಾರತದಲ್ಲಿ ಮಳೆ ಸಹಿತ ಧೂಳು ಬಿರುಗಾಳಿ ಬೀಸಿದೆ. ಇದು ಹವಾಮಾನದಲ್ಲಿ ಬದಲಾವಣೆಯಾ ಗಿರುವುದನ್ನು ತೋರಿಸುತ್ತದೆ. ಅದರಿಂದಾಗಿಯೇ ಜೀವ ಹಾನಿ ಉಂಟಾಗಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸಾಂಪ್ರದಾಯಿಕ ಕ್ರೀಡೆಗಳ ಮರೆ: ದೇಹದ ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡೆ ಅಗತ್ಯ ಎಂದು ಹೇಳಿರುವ ಪ್ರಧಾನಿ ಮೋದಿ, ಸಾಂಪ್ರದಾಯಿಕ ಕ್ರೀಡೆಗಳನ್ನು ಮರೆಯಬಾರದು. ಖೋಖೋ, “ಪಿತ್ತು’, “ಲತ್ತು’, “ಗಿಲ್ಲಿ ದಾಂಡು’ ಸೇರಿದಂತೆ ಹಲವು ಸಾಂಪ್ರದಾಯಿಕ ಆಟಗಳು ಮರೆಯಾಗುತ್ತಿವೆ. ಇದು ಸರಿಯಲ್ಲ. ಸಾಂಪ್ರದಾಯಿಕ ಆಟಗಳು ನಾಶವಾದರೆ ಬಾಲ್ಯವೇ ನಷ್ಟವಾದಂತೆ. ಶಾಲೆಗಳು, ಯುವ ಸಂಘಟನೆಗಳು, ನೆರೆಹೊರೆಯವರು ಸೇರಿಕೊಂಡು ಅವುಗಳನ್ನು ರಕ್ಷಿಸಲು ಮುಂದಾಗಬೇಕು. ಜನರ ಬೆಂಬಲದಿಂದ ಸಾಂಪ್ರದಾಯಿಕ ಕ್ರೀಡೆಗಳನ್ನು ರಕ್ಷಿಸಿ ಅವುಗಳನ್ನು ಪೋಷಿಸಿಕೊಂಡು ಬರಲು ಸಾಧ್ಯವಿದೆ ಎಂದು ಹೇಳಿದ್ದಾರೆ. ಅವುಗಳನ್ನು ಆಡುವ ಬಗೆ ಮತ್ತು ನಿಯಮಗಳ ಬಗ್ಗೆ ವೀಡಿಯೋ ಚಿತ್ರೀಕರಣ ಮಾಡಿಕೊಳ್ಳಬಹುದು. ಜತೆಗೆ ಅನಿಮೇಷನ್‌ ಸಿನಿಮಾಗಳನ್ನೂ ಮಾಡಿಕೊಳ್ಳಬಹುದು ಎಂದು ಸಲಹೆ ಮಾಡಿದ್ದಾರೆ.

ಇದೇ ವೇಳೆ, ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯಿಂದ ಫಿಟ್‌ನೆಸ್‌ ಚಾಲೆಂಜ್‌ ಸ್ವೀಕರಿಸಿದ್ದು ಸಂತೋಷವಾಗಿದೆ ಎಂದು ಹೇಳಿದ್ದಾರೆ ಪ್ರಧಾನಿ. ಜತೆಗೆ, 250 ದಿನಗಳ ಕಾಲ ಐಎನ್‌ಎಸ್‌ ತಾರಿಣಿಯಲ್ಲಿ ವಿಶ್ವ ಪರ್ಯಟನೆ ಮಾಡಿದ ನೌಕಾಪಡೆಯ ಮಹಿಳಾ ಯೋಧರನ್ನೂ ಅವರು ಕೊಂಡಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಮತ್ತು ವೀರ ಸಾವರ್ಕರ್‌ ಅವರನ್ನೂ ಸ್ಮರಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next