ರಾಣೆಬೆನ್ನೂರು: ಮನುಷ್ಯನಿಗೆ ಕಾಯಿಲೆಗಳು ಬರುವಂತೆ ಸಮಾಜಕ್ಕೂ ಜಾಡ್ಯಗಳು ಬಡಿಯುವುದನ್ನು ಶರಣರು ಗುರುತಿಸುತ್ತಾರೆ. ಮೂಢನಂಬಿಕೆಗಳು ಮೈಮೇಲಿನ ಉಣ್ಣೆಗಳಿದ್ದಂತೆ. ಅವುಗಳನ್ನು ಕತ್ತರಿಸಿ ಒಗೆಯಬೇಕೆಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ಬಸವ ಕೇಂದ್ರ ಹೊಸಮಠ ಹಾಗೂ ದಲಿತ ಸಮಾಜದ ಆಶ್ರಯದಲ್ಲಿ ಏರ್ಪಡಿಸಿದ್ದ ಮನೆಯಲ್ಲಿ ಮಹಾಮನೆಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಧರ್ಮದಲ್ಲಿ ಜಾತಿಯಿಲ್ಲ. ಜೀವನದ ಸತ್ಯಗಳನ್ನು, ಆಧ್ಯಾತ್ಮಿಕ ನಿಧಿಯ ರತ್ನಗಳನ್ನು ನಿರೂಪಿಸಿ, ಅದನ್ನು ಪಡೆಯುವ ವಿಧಾನವನ್ನು ತಿಳಿಸಿಕೊಡುವ ಧರ್ಮ ಯಾರೊಬ್ಬರ ಆಸ್ತಿ ಅಲ್ಲ. ಸಂಸ್ಕಾರ, ಸತ್ಕಾರ್ಯ, ದಾಸೋಹ ತತ್ವ, ಸದಾಚಾರ, ಶಿವಾಚಾರ ಇರುವ ಮನೆಗಳು ಮಹಾಮನೆಗಳು. ಸದ್ಗುಣ, ಸದಾಚಾರ, ಕಿಂಖರತೆ, ಸನ್ನಡತೆ, ಸದ್ಭಾವನೆ ಇರುವ ಮನುಷ್ಯ ಮಹಾತ್ಮನಾಗುತ್ತಾನೆ ಎಂದರು.
ಇದನ್ನೂ ಓದಿ:ವಿದ್ಯುತ್-ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಲೋಕದ ಡೊಂಕು ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನಾವು ದುರ್ಬಲವಾದಾಗ ಎಲ್ಲ ಬಾಹ್ಯ ಶಕ್ತಿಗಳು ನಮ್ಮ ಮೇಲೆ ದಾಳಿ ಮಾಡುತ್ತವೆ. ಆದ್ದರಿಂದ ನಾವು ಬೇರೆಯವರನ್ನು ದೂಷಿಸುವುದನ್ನು ಬಿಟ್ಟು ನಮ್ಮ ನಮ್ಮನ್ನು ನಾವು ಸರಿಪಡಿಸಿಕೊಳ್ಳೋಣ ಎಂದು ಶರಣರು ಹೇಳಿದ್ದಾರೆ ಎಂದರು.
ರಾಣೆಬೆನ್ನೂರಿನ ವಿರಕ್ತಮಠದಗುರುಬಸವ ಸ್ವಾಮೀಜಿ, ಶಾಸಕ ಅರುಣಕುಮಾರ ಪೂಜಾರ, ಜಿಪಂ ಮಾಜಿಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಇತರರು ಪಾಲ್ಗೊಂಡಿದ್ದರು.