ಹೊಸದಿಲ್ಲಿ/ಅಗರ್ತಲಾ: ಪಾಕಿಸ್ಥಾನದಲ್ಲಿ ಬಂಧನ ದಲ್ಲಿರುವ 356 ಭಾರತೀಯ ಮೀನುಗಾರರು ಮತ್ತು ಇಬ್ಬರು ಭಾರತೀಯ ನಾಗರಿಕರನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಪಾಕಿಸ್ಥಾನಕ್ಕೆ ಭಾರತ ಕೋರಿದೆ. ಜ.1 ಮತ್ತು ಜುಲೈ 1ರಂದು ನಡೆಯುವ ಬಂಧಿತರ ವಿವರ ಹಂಚಿಕೆ ಕಾರ್ಯ ಕ್ರಮದ ವೇಳೆ ಈ ಕೋರಿಕೆ ಸಲ್ಲಿಸಲಾಗಿದೆ.
ಭಾರತದಲ್ಲಿ ಪಾಕ್‌ನ 282 ನಾಗರಿಕರು ಹಾಗೂ 73 ಮೀನುಗಾರರು ಬಂಧನದಲ್ಲಿರುವುದಾಗಿ ಪಾಕಿ ಸ್ಥಾನಕ್ಕೆ ಮಾಹಿತಿ ನೀಡಲಾಗಿದೆ. ಹಾಗೆಯೇ ಪಾಕಿಸ್ಥಾನದಲ್ಲಿ ಭಾರತದ 51 ನಾಗರಿಕರು ಹಾಗೂ 577 ಮೀನುಗಾರರು ಬಂಧಿತರಾಗಿದ್ದಾರೆ ಎಂದು ಪಾಕ್ ಸರಕಾರ ತಿಳಿಸಿದೆ.
ಪಾಕ್ ವಶದಲ್ಲಿದ್ದು, ಭಾರತದವರೆಂದು ದೃಢೀಕರಿಸಲಾಗಿರುವ 356 ಮೀನುಗಾರರು ಮತ್ತು ಇಬ್ಬರು ನಾಗರಿಕರನ್ನು ಶೀಘ್ರವೇ ಬಿಡುಗಡೆ ಮಾಡಿ. ಹಾಗೆಯೇ 182 ಮೀನುಗಾರರು ಮತ್ತು 17 ನಾಗರಿಕರಿಗೆ ವಕೀಲರ ಸವಲತ್ತು ಒದಗಿಸಿಕೊಡಿ ಎಂದೂ ಪಾಕ್‌ಗೆ ಭಾರತ ಕೇಳಿದೆ.ಇದೇ ವೇಳೆ ಜಮ್ಮು, ಕಾಶ್ಮೀರದ ಪೂಂಛ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ಬಳಿ ಹೊಸ ವರ್ಷದ ಪ್ರಯುಕ್ತ ಪಾಕ್ ಮತ್ತು ಭಾರತದ ಯೋಧರು ಶನಿವಾರ ಪರಸ್ಪರ ಸಿಹಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್: ಕಾನ್ವೆ ಶತಕ; ಚೇತರಿಸಿದ ಕಿವೀಸ್
ಭಾರತ-ಪಾಕ್ ಅಣುಸ್ಥಾವರಗಳ ಮಾಹಿತಿ ವಿನಿಮಯ: 1991ರಲ್ಲಿ ಮಾಡಿಕೊಂಡ ಒಪ್ಪಂದದಂತೆ ಭಾರತ-ಪಾಕಿಸ್ಥಾನ ಶನಿವಾರ ತಂತಮ್ಮ ದೇಶದಲ್ಲಿರುವ ಅಣುಸ್ಥಾವರಗಳ ಮಾಹಿತಿಯನ್ನು ಹಂಚಿಕೊಂಡಿವೆ. ಸತತ 31 ವರ್ಷಗಳಿಂದ ಪ್ರತೀ ವರ್ಷ ಜ.1ಕ್ಕೆ ಈ ಮಾಹಿತಿ ಹಂಚಿಕೊಳ್ಳುವ ಪದ್ಧತಿ ಚಾಲ್ತಿಯಲ್ಲಿದೆ. ಇದಕ್ಕಾಗಿ ಎರಡೂ ದೇಶಗಳ ನಡುವೆ ಒಪ್ಪಂದವೇ ಆಗಿದೆ. ಪರಸ್ಪರ ಅಣುಸ್ಥಾವರಗಳ ಮೇಲೆ ಎರಡೂ ದೇಶಗಳು ದಾಳಿ ನಡೆಸಬಾರದೆನ್ನುವುದು ಇದರ ಹಿಂದಿನ ಉದ್ದೇಶ. ಪ್ರತಿ ವರ್ಷ ರಾಜತಾಂತ್ರಿಕ ಮಾರ್ಗವಾಗಿ ಈ ಮಾಹಿತಿ ವಿನಿಮಯವಾಗುತ್ತದೆ.
ಮುಂದಿನ ವರ್ಷದೊಳಗೆ ಗಡಿ ಬೇಲಿ ಕಾರ್ಯ ಸಂಪೂರ್ಣ
ಭಾರತ- ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯಲ್ಲಿ ಹಾಕಲಾಗುತ್ತಿರುವ ಬೇಲಿ ಕೆಲಸವನ್ನು ಮುಂದಿನ ವರ್ಷದೊಳಗೆ ಪೂರ್ಣಗೊಳಿ ಸುವುದಾಗಿ ಗಡಿ ಭದ್ರತಾ ಪಡೆಯ(ಬಿಎಸ್‌ಎಫ್) ಅಧಿಕಾರಿಗಳು ತಿಳಿಸಿದ್ದಾರೆ. “856 ಕಿ.ಮೀ ಉದ್ದದ ಬೇಲಿಯನ್ನು ಹಾಕಲಾಗುತ್ತಿದೆ. ಅದರಲ್ಲಿ ಈಗಾಗಲೇ ಶೇ.80-85 ಕೆಲಸ ಮುಗಿದಿದೆ. ಕಳೆದ ವರ್ಷ ತ್ರಿಪುರಾದ ಪೂರ್ವ ವಲಯದಲ್ಲಿ ಬೇಲಿ ಹಾಕುವ ಕೆಲಸ ಮಾಡಲಾಗಿದೆ. ಬೇಲಿ ಜತೆಜತೆಗೆ ಫ್ಲಡ್‌ಲೈಟ್‌ಗಳನ್ನೂ ಹಾಕುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ವರ್ಷದೊಳಗೆ ಈ ಎರಡೂ ಕೆಲಸ ಮುಗಿಸಲಿದ್ದೇವೆ’ ಎಂದು ಬಿಎಸ್‌ಎಫ್ ಪ್ರಧಾನ ಇನ್‌ಸ್ಪೆಕ್ಟರ್ ಸುಶಾಂತ್ ಕುಮಾರ್ ನಾಥ್ ತಿಳಿಸಿದ್ದಾರೆ.