ರಾಯಚೂರು: ಒಂದೆಡೆ ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೂಂದೆಡೆ 60ರಿಂದ 73 ವರ್ಷದವರೆಗಿನ ಸೋಂಕಿತರು ಗುಣಮುಖರಾಗಿ ಮರಳಿ ಬಂದಿರುವುದು ಆಶಾಭಾವ ಮೂಡಿಸಿದೆ.ನಗರದ ಒಪೆಕ್ ಆಸ್ಪತ್ರೆ ಐಸೋಲೇಶನ್ ವಾರ್ಡ್‌ಗೆ ದಾಖಲಾಗಿದ್ದ 60 ವರ್ಷ ಮೇಲ್ಪಟ್ಟು 12 ಜನ ಗುಣಮುಖರಾಗಿ ಮನೆ ಸೇರಿದ್ದಾರೆ.
ವಿವಿಧ ಕಾರಣಗಳಿಂದ ಸೋಂಕು ತಗುಲಿದ್ದರಿಂದ ಐಸೋಲೇಶನ್ ವಾರ್ಡ್‌ಗೆ ದಾಖಲಿಸಲಾಗಿತ್ತು. ಆರು ದಿನಗಳಿಂದ ಹಿಡಿದು ಒಂದು ತಿಂಗಳು ಕಾಲ ಆಸ್ಪತ್ರೆಯಲ್ಲೇ ಉಳಿದಿದ್ದರು. ಕೊನೆಗೂ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಆದರೆ, ಐಸೋಲೇಶನ್‌ಗೆ ದಾಖಲಾದವರಲ್ಲಿ ಕೆಲವರು ವ್ಯವಸ್ಥೆ ಬಗ್ಗೆ ದೂರಿದರೆ ಕೆಲವರು ಉತ್ತಮ ವ್ಯವಸ್ಥೆ ಎಂದು ಬಣ್ಣಿಸಿದ್ದಾರೆ.ನಗರದ 65 ವರ್ಷದ ವ್ಯಕ್ತಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ನಾನು ಎಲ್ಲಿಗೂಹೋಗಿಲ್ಲ. ಯಾರ ಸಂಪರ್ಕ ಮಾಡಿರಲಿಲ್ಲ. ಆದರೂ ನೆಗಡಿ ಬಂದ ಕಾರಣ ಆಸ್ಪತ್ರೆಗೆ ತೋರಿಸಲು ಹೋದಾಗ ಕೋವಿಡ್ 19 ಪರೀಕ್ಷೆ ಮಾಡಲಾಗಿತ್ತು. ಆಗ ಪಾಸಿಟಿವ್ ಇರುವುದು ಗೊತ್ತಾಯಿತು. ಕೂಡಲೇ ನನ್ನನ್ನು ಐಸೋಲೇಶನ್‌ಗೆ ದಾಖಲಾಗುವಂತೆ ತಿಳಿಸಲಾಗಿತ್ತು.
ಅಲ್ಲಿ ಒಂದು ವಾರ ಕಾಲ ಇದ್ದು ಬಂದಿದ್ದೇನೆ. ಆತಂಕ ಪಡುವಂಥದ್ದು ಏನಿಲ್ಲ. ಆದರೆ, ಯಾವುದೇಕಾರಣಕ್ಕೂ ವೈರಸ್ ನಮಗೆ ಬರುವುದಿಲ್ಲ ಎಂಬ ಹುಂಬತನದಿಂದ ಮಾತ್ರ ಇರಬಾರದು ಎನ್ನುತ್ತಾರೆ. ಮಸ್ಕಿ ಬ್ಯಾಂಕ್ ನೌಕರನಿಂದ ಸೋಂಕು ಹರಡಿದ್ದರಿಂದ 70 ವರ್ಷದ ವೃದ್ಧನಿಗೆ ಪಾಸಿಟಿವ್ ಬಂದಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಮಾತ್ರ ಜಿಲ್ಲಾಡಳಿತ ಕನಿಷ್ಠ ವ್ಯವಸ್ಥೆ ಮಾಡಿಲ್ಲ. ನಮ್ಮನ್ನು ಅಲ್ಲಿ ಕೇಳುವವರೇ ಇರಲಿಲ್ಲ. ಹತ್ತಿರಕ್ಕೆ ಬರಲು ಕೂಡ ಸಿಬ್ಬಂದಿ ಯೋಚನೆ ಮಾಡುತ್ತಿದ್ದರು ಎಂದು ದೂರಿದ್ದಾರೆ.
ಹೊತ್ತು ಹೊತ್ತಿಗೆ ಊಟ ಬರುತ್ತಿರಲಿಲ್ಲ. ಆರಂಭದ ಎರಡು ದಿನ ಮಾತ್ರ ನೀಡಿದ್ದರು. ಬಳಿಕ ನಮ್ಮನ್ನು ಕೇಳುವವರೇರಲಿಲ್ಲ. ನಮಗೂ ರೋಗ ಲಕ್ಷಣಗಳು ಇರಲಿಲ್ಲ. ಆದರೂ 18 ದಿನಗಳ ಕಾಲ ಉಳಿಯಬೇಕಾಯಿತು. ಕೊನೆಗೆ ಬಿಡುಗಡೆಯಾಗಿ ಬಂದಾಗ ನಿಟ್ಟುಸಿರು ಬಿಡುವಂತಾಗಿದೆ ಎಂದರು.
ಕೋವಿಡ್ ಪಾಸಿಟಿವ್ ಬರಬೇಕಾದರೆ ಲಕ್ಷಣಗಳು ಇರಬೇಕು ಎಂದಿಲ್ಲ. ನನಗೆ ಯಾವುದೇ ಲಕ್ಷಣಗಳು ಇಲ್ಲದಿದ್ದರೂ ಪಾಸಿಟಿವ್ ಬಂದಿತ್ತು. ಆದರೆ, ಆತಂಕ ಪಡುವ ಅಗತ್ಯವಿಲ್ಲ. ಧೈರ್ಯವಾಗಿ ಎದುರಿಸಬೇಕು. ಅದಕ್ಕಿಂತ ಮುಖ್ಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವ ಮೂಲಕ ವೈರಸ್ ತಗುಲದಂತೆ ಎಚ್ಚರಿಕೆ ವಹಿಸುವುದು ಸೂಕ್ತ. –
ಆಸ್ಪತ್ರೆಯಿಂದ ಬಿಡಗಡೆಯಾದ ಸೋಂಕಿತ