Advertisement

ಕಂಬಳಿ ಬಿಟ್ಟು, ದಡ ಸೇರಿಕೋ…

07:50 PM Dec 27, 2019 | Lakshmi GovindaRaj |

ಅದೊಂದು ಜೋರು ಪ್ರವಾಹದ ದಿನ. ತುಸು ಮಳೆ ನಿಂತ ಮೇಲೆ, ಅಗಸ ಹೊಳೆಯಲ್ಲಿ ಬಟ್ಟೆಗಳನ್ನು ಒಗೆಯುತ್ತಿದ್ದ. ಅವನ ಕೈ ಜಾರಿ, ಒಂದು ಕಂಬಳಿ ನೀರಿನಲ್ಲಿ ಕೊಚ್ಚಿ ಹೋಯಿತು. “ಅಯ್ಯೋ, ಕಂಬಳಿ ಹೋಯಿತಲ್ಲಾ’ ಎಂದು ಹೊಳೆಗೆ ಧುಮುಕಿ, ಕಂಬಳಿಯನ್ನು ಹಿಂಬಾಲಿಸಿ, ಕೊನೆಗೂ ಹಿಡಿದೇಬಿಟ್ಟ. ಆದರೆ, ಪ್ರವಾಹದ ವೇಗ ಅದಾಗಲೇ ಮಿತಿ ಮೀರಿತ್ತು. ಕಂಬಳಿಸಮೇತ ಆತನೂ ನೀರಿನಲ್ಲಿ ಮುಂದಕ್ಕೆ ಹೋಗತೊಡಗಿದ.

Advertisement

ಕಂಬಳಿಯೋ, ಪ್ರಾಣವೋ ಎಂಬ ಪ್ರಶ್ನೆ. ಕಂಬಳಿಯನ್ನು ಕೈಬಿಟ್ಟರೆ ದಡ ಸೇರುವುದು ಸಲೀಸು. ದಡದಲ್ಲಿ ನಿಂತಿದ್ದ ಹಿತೈಷಿಗಳು, “ಕಂಬಳಿ ಬಿಟ್ಟು, ದಡ ಸೇರಿಕೋ’ ಎಂದು ಕೈಸನ್ನೆ ಮಾಡುತ್ತಾ, ಕೂಗುತ್ತಿದ್ದರು. ಅಗಸ ಹೇಳಿದ; “ನಾನೂ ಆಗಲಿಂದಲೂ ಅದನ್ನೇ ಪ್ರಯತ್ನಪಡುತ್ತಿದ್ದೇನೆ. ಆದರೆ, ನಾನು ಬಿಟ್ಟರೂ ಅದು ನನ್ನನ್ನು ಬಿಡುತ್ತಿಲ್ಲ. ಏನು ಮಾಡಲಿ?’! ವಾಸ್ತವ ಏನೆಂದರೆ, ಅವನು ಹಿಡಿದದ್ದು ಕಂಬಳಿಯನ್ನಲ್ಲ, ಒಂದು ಕರಡಿಯನ್ನು!! ಇವನು ಬಿಟ್ಟರೂ ಅದು ಇವನನ್ನು ಬಿಡುತ್ತಿಲ್ಲ ಎಂಬ ದುಃಸ್ಥಿತಿ.

ಅಗಸನ ಪರಿಸ್ಥಿತಿ ಏನಾಯಿತೋ ತಿಳಿಯದು. ಆದರೆ, ನಾವೂ ಜೀವನದ ಹೊಳೆಯಲ್ಲಿ ಸಿಲುಕುವುದು ದಿಟ. ಕೆಲವೊಮ್ಮೆ ಗುರಿಯನ್ನು ಮರೆತು ಯಾವುದನ್ನೋ ಹಿಂಬಾಲಿಸುತ್ತಲೇ ಕಾಲಕಳೆಯುತ್ತೇವೆ. ನೆರೆಹೊರೆಯವರೂ ಅದಕ್ಕೆ ಸೊಪ್ಪನ್ನು ಹಾಕಿ ಬೆಳೆಸಿಯಾರು. ಮತ್ತೂಂದು ಕಡೆ ಹಿತೈಷಿಗಳ ಮಾತುಗಳೂ ಹಿಡಿಸದು. ಕ್ರಮೇಣ, ಜೀವನದಲ್ಲಿ ಸುಳಿಗಳಂತಿರುವ ಘಟನೆಗಳು ಸಂಭವಿಸಿದಾಗ ಎಚ್ಚೆತ್ತುಕೊಂಡರೂ, ಕರಡಿಯಂತೆ ಅವು ನಮ್ಮನ್ನು ಬಿಡಲೊಲ್ಲವು.

ಇಂಥ ಪರಿಸ್ಥಿತಿಗೆ ತುತ್ತಾಗದಿರಲು ಜೀವನದ ಗುರಿಯನ್ನೂ ಅದನ್ನು ಸಾಧಿಸುವ ಹೆದ್ದಾರಿಯನ್ನೂ ಅರಿಯಲೇಬೇಕು. ಅಂಥ ಮಾರ್ಗವನ್ನು ತಪಸ್ಯೆಯಿಂದ ಅನ್ವೇಷಿಸಿ- ಅರಿತು ಪರಮಕರುಣೆಯಿಂದ ನಮ್ಮ ಮಹರ್ಷಿಗಳು ಉಪದೇಶಿಸಿದರು. ಧರ್ಮ- ಅರ್ಥ- ಕಾಮ- ಮೋಕ್ಷವೆಂಬ ಚತುರ್ಭದ್ರಮಯವಾದ ಜೀವನವೇ ಆ ಹೆದ್ದಾರಿ ಎಂದು ಸಾರಿದರು. ಕೇವಲ ಅರ್ಥ- ಕಾಮಗಳನ್ನೇ ಅವಲಂಬಿಸಿದರೆ ಆರಂಭದಲ್ಲಿ ಕಂಬಳಿಯಾಗಿ ಕಾಣಿಸಿ, ಕ್ರಮೇಣ ಅದೇ ಕರಡಿಯಾಗುವುದು ನಿಸ್ಸಂಶಯ. ಆದರೆ, ಮೋಕ್ಷವನ್ನೇ ಧ್ಯೇಯವಾಗಿಸಿಕೊಂಡರೆ ದಡ ಸೇರುವುದು ನಿಶ್ಚಯ.

ಅಂದಮಾತ್ರಕ್ಕೆ, ಜೀವನದಲ್ಲಿ ಅರ್ಥ- ಕಾಮಗಳು ಬೇಡವೇಬೇಡ ಎಂದೇನಲ್ಲ. ಅವುಗಳನ್ನು ಧರ್ಮದ ಜೊತೆಯಲ್ಲಿ ಸೇವಿಸಿದರೆ ಕಂಬಳಿಯೂ ಸಿಗುವುದು, ಕರಡಿಯ ಹಿಂಸೆಯೂ ಕಾಣದು ಎಂಬಂತೆ ಐಹಿಕ ಸುಖವನ್ನೂ ದೊರಕಿಸಿ, ಮೋಕ್ಷದ ಕಡೆಯೂ ಒಯ್ಯುವುದು. “ತುಂಟ ಹಸುವಿನಂಥ ಅರ್ಥ- ಕಾಮಗಳನ್ನು, ಧರ್ಮ- ಮೋಕ್ಷಗಳ ಹದ್ದುಬಸ್ತಿನಲ್ಲಿ ಇಟ್ಟುಕೊಂಡರೆ ಅಮೃತವನ್ನೇ ಕರೆಯಬಹುದು’ ಎಂಬ ಯೋಗಿವರೇಣ್ಯರಾದ ಶ್ರೀರಂಗ ಮಹಾಗುರುವಿನ ನುಡಿಮುತ್ತನ್ನು ಇಲ್ಲಿ ಸ್ಮರಿಸೋಣ.

Advertisement

* ಡಾ. ಸಿ.ಆರ್‌. ರಾಮಸ್ವಾಮಿ, ಸಂಸ್ಕೃತಿ ಚಿಂತಕರು ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ

Advertisement

Udayavani is now on Telegram. Click here to join our channel and stay updated with the latest news.

Next