Advertisement
ಅದು ವ್ಯಕ್ತಿತ್ವ ವಿಕಸನದ ಕ್ಲಾಸು. ಅವನು ತಡವಾಗಿ ತರಗತಿಗೆ ಬಂದಿದ್ದ. ಕ್ಲಾಸು ಭರ್ತಿ ಇದ್ದಿದ್ದರಿಂದ, ನನ್ನ ಪಕ್ಕದ ಖಾಲಿ ಸೀಟಿನಲ್ಲಿ ಬಂದು ಕುಳಿತ. ಅವನ ನಿಸ್ತೇಜ ಕಣ್ಣುಗಳು ಏನೋ ಕತೆ ಹೇಳುತ್ತಿದ್ದವು. ಹಾಗೇ ಮಾತಿಗಿಳಿದ. ಅದೇ ಸಿನಿಮಾಗಳ ಕತೆಯೇ, ಅವನಿಗೆ ಆಸ್ತಿಯಂತಿತ್ತು. ಅದೆಷ್ಟು ದುಬಾರಿ ವಸ್ತುವಾಗಿದ್ದರೂ ಸರಿ, ಬೆಳಗ್ಗೆ ಕೇಳಿದರೆ ರಾತ್ರಿ ಕಣ್ಮುಂದೆ ಬರುವಷ್ಟು ಸಿರಿವಂತಿಕೆ ಅವನದ್ದು. ಅದ್ಯಾವುದೋ ದೊಡ್ಡ ಪರೀಕ್ಷೆ ಕಟ್ಟಿ ಕಟ್ಟಿ ಸೋತಿದ್ದಾನೆ. ಏನೋ ಗುಂಗನ್ನು ತಲೆಗೇರಿಸಿಕೊಂಡಿದ್ದಾನೆ. ಒಂದಷ್ಟು ಮಾತಾಡುತ್ತಿದ್ದಂತೆ, ಆತನಿಗೆ ಆಪ್ತವೆನಿಸಿತೋ ಏನೋ, ಸ್ವಲ್ಪ ಹಗುರಾದಂತೆ ವರ್ತಿಸಲು ಶುರುಮಾಡಿದ. “ಅಕ್ಕ ಎಂದು ಕರೆಯಬಹುದು’ ಎಂದೆ. ಹಲವು ವರ್ಷಗಳ ಪರಿಚಿತ ನಗೆಬೀರಿದ.
Related Articles
Advertisement
ವರ್ಷಕ್ಕೆ ಎರಡು ಸಲ ಮಾತ್ರವೇ ಹೊಸ ಬಟ್ಟೆ. ಆದರದು ಮತ್ತೂಂದು ಹೊಸದು ಬರುವವರೆಗೂ ಹೊಸದಾಗಿಯೇ ಇರುತ್ತಿತ್ತು. ನಾಲ್ಕೆçದು ಮೈಲು ದೂರದಿಂದ ದೊಡ್ಡ ಮಣ್ಣಿನ ಗಡಿಗೆಗಳಲ್ಲಿ ನೀರು ಹೊತ್ತು ತರುವಾಗ ಅಮ್ಮನಿಗೆ ಆಯಾಸ ಎನ್ನುವುದು ಎಲ್ಲಿತ್ತು? ನಾನಾದರೂ ಎಂದು ದಣಿದಿದ್ದೆ? ಇಂದು ಎರಡನೇ ಕ್ಲಾಸ್‌ನ ಮಕ್ಕಳಿಗೆ ಟ್ಯಾಬ್, ಪಾಕೇಟ್ ಮನಿ, ವಾರಾಂತ್ಯಕ್ಕೆ ಪೂರ್ತಿಯಾಗುವ ಅವರ ಎಲ್ಲಾ ಬೇಕುಗಳು… ಇಲ್ಲಗಳೇ ಇಲ್ಲದ ಬದುಕು ಇವರದ್ದೆಲ್ಲ. ಜೀವನಕ್ಕೆ ಈ ಅಗತ್ಯಗಳೇ ಹೆಚ್ಚಾಗಿ, ಇಂದು ನಗರಜೀವಿಗಳು ಕೌನ್ಸೆಲಿಂಗ್ ಸೆಂಟರ್‌ನ ಕದ ಬಡಿಯುತ್ತಿದ್ದಾರೆ. “ದಮ್ಮಯ್ಯ, ನಮ್ಮನ್ನು ಸರಿಮಾಡಿ…’ ಅಂತ ಕಾಲಿಗೆ ಬೀಳ್ಳೋದನ್ನು ನೋಡಿ, ಮನಸ್ಸೋಮ್ಮೆ ಖಾಲಿ ಆಗುತ್ತೆ.
ಈ ಆಲೋಚನೆಗಳಲ್ಲಿ ಹೆಜ್ಜೆ ಹಾಕುತ್ತಿದ್ದವಳು ಹೋಗಿ, ಹಳ್ಳಿಯ ಹೆಂಗಸೊಬ್ಬಳಿಗೆ ಡಿಕ್ಕಿಯಾದೆ. ಅವಳು ದುರುಗುಟ್ಟಲಿಲ್ಲ. ಬಯ್ಯಲೂ ಇಲ್ಲ. ನಕ್ಕಳಷ್ಟೇ. ಆ ನಗುವಿನಲ್ಲಿ ಏನಿತ್ತೋ ಮದ್ದು? ಮತ್ತೆ ತಾಜಾತನಕ್ಕೆ ಮರಳಿದೆ. ಅವಳ ಮುಖದಲ್ಲಿ “ಅಗತ್ಯಕ್ಕಿಂತ ಅತಿಯಾದದ್ದು’ ಏನೂ ಕಾಣಿಸಲಿಲ್ಲ. ಬದುಕಿನ ಕನಿಷ್ಠ ಅಗತ್ಯವೇ ತನಗಿನ್ನೂ ಸಿಕ್ಕಿಲ್ಲವೆಂಬ ನೋವು ಅವಳಲ್ಲಿತ್ತಾದರೂ, ಅದನ್ನು ಆಕೆ ತೋರಿಸಿಕೊಳ್ಳಲು ಹೋಗಲಿಲ್ಲ.
ಅಸಲಿಗೆ, ಮನುಷ್ಯರನ್ನು ಜೀವಂತವಾಗಿರಿಸುವುದೇ ಈ ಆಸೆಗಳು. ಬೆಳಗನ್ನು ಕಾಯುವುದೇ ನಿತ್ಯದ ಅದ್ಯಾವುದೋ ಕನವರಿಕೆಗಳು. ಬೆಳಗಿನ ಕೋರಿಕೆ ಸಂಜೆ ಕಣ್ಮುಂದೆ ಸಿಗುವುದಾದರೆ, ಆ ಬದುಕಿನಲ್ಲಿ ಅಂಥ ಜೋಶ್ ಏನಿರುತ್ತೆ? ಎಲ್ಲವೂ ಪಿತ್ರಾರ್ಜಿತವಾಗಿ ಬಂದರೆ, ನಮ್ಮ ಪಯಣದಲ್ಲಿ ಹೆಜ್ಜೆಗಳೇ ಮೂಡುವುದಿಲ್ಲ. ಹಾರಿ ಮುಂದೆ ಹೋಗಿ ಹಿಂತಿರುಗಿ ನೋಡಿದಾಗ, ಬಂದ ಹಾದಿಯೂ ಕಾಡುವಂತಿರುವುದಿಲ್ಲ.
“ತೋಡಾ ಹೈ ತೋಡೆ ಜರೂರತ್ ಹೈಜಿಂದಗೀ ಫೋಟೋ ಭೀ ಯಹಾ
ಖೂಬ್‌ಸೂರತ್ ಹೈ…’
ಕೊರತೆಗಳಿರಬೇಕು. ಶ್ರಮದಿಂದಲೇ ಅವನ್ನು ನೀಗಿಸಿಕೊಳ್ಳಬೇಕು. ಹಾಗಾಗಿ, ಬದುಕನ್ನು ಸೊನ್ನೆಯಿಂದ ಕಟ್ಟಲು ಶುರುಮಾಡಿ. ಬದುಕು ಎಲ್ಲವನ್ನೂ ಕೊಟ್ಟುಬಿಟ್ಟರೆ, ಬಯಕೆಗೆ ಬೆಲೆ ಬರುವುದೆಂತು? ಮಂಜುಳಾ ಡಿ.