ಪಿರಿಯಾಪಟ್ಟಣ: ತಾಲ್ಲೂಕಿನ ಕಿರಂಗೂರು ಗ್ರಾಮದ ಹಿರಿಯ ಮುಖಂಡ ತಮ್ಮಣ್ಣೇಗೌಡ (ಕಲ್ಲಹಳ್ಳಿ ಕರೀಗೌಡ)ರ ಕುಟುಂಬಸ್ಥರು ಹಾಗೂ ಅವರ ಬೆಂಬಲಿಗರು ಮಾಜಿ ಶಾಸಕ ಕೆ.ವೆಂಕಟೇಶ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ತಾಲ್ಲೂಕಿನ ಕಿರಂಗೂರು ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಲ್ಲಹಳ್ಳಿ ಕರೀಗೌಡ, ಜೆಡಿಎಸ್ ಯುವ ಮುಖಂಡರಾದ ಕುಮಾರ್, ಗಿರೀಶ್, ರಾಮಚಂದ್ರ, ನವೀನ್ ಸೇರಿದಂತೆ ಅವರ ಕುಟುಂಬ ವರ್ಗದವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ವೆಂಕಟೇಶ್ ಮಾತನಾಡಿ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರ ಇದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದೆ. ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿ ದೇಶ ಕಟ್ಟಲು ಪಣತೊಟ್ಟಿದೆ. ಜಾತ್ಯತೀತ ನಿಲುವು ಹೊಂದಿರುವ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ನಂಬಿ ಪಕ್ಷಕ್ಕೆ ಬಂದಿರುವುದು ಅತೀವ ಸಂತಸವಾಗಿದೆ. ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲಾಗುತ್ತಿದ್ದು, ಎಲ್ಲರೂ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ:ಅಧಿವೇಶನದ ಬಳಿಕ ದೇವಸ್ಥಾನಗಳಲ್ಲಿ ಭಕ್ತರಿಗೆ ಆಗುವ ಸಮಸ್ಯೆಗಳ ಕುರಿತು ಕ್ರಮ : ಶಶಿಕಲಾ ಜೊಲ್ಲೆ
ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ, ಎಪಿಎಂಸಿ ಸದಸ್ಯ ಚಂದ್ರೇಗೌಡ, ಪಿರಿಯಾಪಟ್ಟಣ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಜೆ.ಬಸವರಾಜು, ರಾಹುಲ್ ಗಾಂಧಿ ವಿಚಾರ ಮಂಚ್ ತಾಲ್ಲೂಕು ಅಧ್ಯಕ್ಷ ಕಿರಂಗೂರು ಮಂಜು, ಮುಖಂಡರಾದ ಭೂತನಹಳ್ಳಿ ಕರಿಗೌಡ, ಪುನಾಡಹಳ್ಳಿ ಸ್ವಾಮಿಗೌಡ, ಬಿ.ಎಸ್.ರಾಮಚಂದ್ರು, ಸುರೇಶ್, ಜೆ.ಮೋಹನ್, ಮಹೇಂದ್ರಕುಮಾರ್, ಪರಶಿವ ಮೂರ್ತಿ, ಮುರುಳೀಧರ್, ಗಂಗಾಧರ್, ಮಂಜು, ಗಿರೀಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.