ಬೆಂಗಳೂರು: ತಮ್ಮ ಮೇಲೆ ಈಗ ಎಫ್ ಐಆರ್ ದಾಖಲಿಸಿರುವುದರ ವಿರುದ್ಧ ಕಾನೂನಾತ್ಮಕ ಹಾಗೂ ರಾಜಕೀಯ ಹೋರಾಟ ನಡೆಸಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಡಾ. ಸಿ ಎನ್ ಅಶ್ವತ್ಥನಾರಾಯಣ ಗುರುವಾರ ಹೇಳಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ವಿವರಣೆ ನೀಡಿದ ಅವರು, ಕಳೆದ ಫೆಬ್ರುವರಿಯಲ್ಲಿ ನೀಡಿದ್ದ ಹೇಳಿಕೆ ಸಂಬಂಧವಾಗಿ ನಾನು ಈಗಾಗಲೇ ಸದನದಲ್ಲೇ ಸ್ಪಷ್ಟನೆ ನೀಡಿದ್ದೇನೆ. ಈ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದೂ ಹೇಳಿದ್ದೇನೆ. ಇಷ್ಟಾದರೂ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ನಾಲ್ಕು ತಿಂಗಳ ಹಿಂದಿನ ಹೇಳಿಕೆಯನ್ನು ನೆಪವಾಗಿಸಿಕೊಂಡು ಎಫ್ ಐಆರ್ ದಾಖಲಾಗುವಂತೆ ಮಾಡಿದೆ ಎಂದರು.
ನನಗೇನೂ ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕವಾಗಿ ದ್ವೇಷವಿಲ್ಲ. ಅವರ ಬಗ್ಗೆ ಗೌರವವಿದೆ. ಆದರೆ, ಸೈದ್ಧಾಂತಿಕವಾಗಿ ನಮ್ಮ ಹಾಗೂ ಅವರ ಪಕ್ಷಗಳ ನಡುವೆ ವ್ಯತ್ಯಾಸಗಳಿವೆ. ಈ ಹಿನ್ನೆಲೆಯಲ್ಲಿ ನಾನು ಮಂಡ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಹೇಳಿಕೆ ನೀಡಿದ್ದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ನನ್ನ ಉದ್ದೇಶ ಅದಾಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:Asia Cup ಆತಿಥ್ಯದ ಕುರಿತು ಐಪಿಎಲ್ ಫೈನಲ್ ಪಂದ್ಯದಂದು ಅಂತಿಮ ನಿರ್ಧಾರ: ಜಯ್ ಶಾ
Related Articles
ಜನ ಕಾಂಗ್ರೆಸ್ಸಿಗೆ ಅಧಿಕಾರ ಕೊಟ್ಟಿದ್ದಾರೆ. ಅದನ್ನು ತಿಳಿದು ಸಮಯ ಮತ್ತು ಶ್ರಮವನ್ನು ಜನಪರ ಕೆಲಸಗಳಿಗೆ ಬಳಸಬೇಕು. ಅದಕ್ಕೆ ಬದಲಾಗಿ ದ್ವೇಷದ ರಾಜಕಾರಣ ಮಾಡುವುದು ಒಳ್ಳೆಯದಲ್ಲ. ಎರಡೇ ವಾರದಲ್ಲಿ ಕಾಂಗ್ರೆಸಿಗೆ ಅಧಿಕಾರ ನೆತ್ತಿಗೇರಿರುವುದನ್ನು ಇದು ತೋರಿಸುತ್ತದೆ ಎಂದು ಅಶ್ವತ್ಥನಾರಾಯಣ ಟೀಕಿಸಿದ್ದಾರೆ.
ಇಷ್ಟಕ್ಕೂ ಹಿರಿಯ ಪೋಲಿಸ್ ಅಧಿಕಾರಿಗಳ ಸಭೆಯಲ್ಲಿ, ನನ್ನ ಹೇಳಿಕೆ ವಿರುದ್ಧ ದೂರು ಏಕೆ ದಾಖಲಿಸಲಿಲ್ಲ ಎಂದು ಡಿಸಿಎಂ ಧಮ್ಕಿ ಹಾಕಿದ ಮೇಲೆ ದೂರು ದಾಖಲಿಸಿರುವುದು ಕೂಡ ಇದೆಲ್ಲವೂ ರಾಜಕೀಯ ಪ್ರೇರಿತ ಎನ್ನುವುದನ್ನು ತೋರಿಸುತ್ತದೆ ಎಂದರು.
ಇದಲ್ಲದೆ ಅಧಿಕಾರಕ್ಕೆ ಬಂದು ಇನ್ನೂ ಒಂದು ವಾರ ಆಗಿಲ್ಲ, ಆಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ. ಇದು ಕೂಡ ಸರ್ಕಾರದ ಆದ್ಯತೆ ಏನು ಎನ್ನುವುದನ್ನು ತೋರಿಸುತ್ತದೆ. ಜನರಿಗೆ ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸುವುದರ ಕಡೆಗೆ ಸರ್ಕಾರ ಗಮನ ಕೊಡಲಿ. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದರು.