Advertisement

ಗುಂಪುಗಾರಿಕೆ ಬಿಡಿ, ಒಗ್ಗಟ್ಟಾಗಿರಿ: ಖರ್ಗೆ

07:42 AM Jun 25, 2019 | Team Udayavani |

ಕಲಬುರಗಿ: ಕಾಂಗ್ರೆಸ್‌ ಪಕ್ಷದಲ್ಲಿ ಗುಂಪುಗಾರಿಕೆ ಬಿಟ್ಟು ಬಿಡಬೇಕು. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಪಕ್ಷದ ಹೊರಗೆ ಮತ್ತು ಒಳಗೆ ಕುತಂತ್ರ ಮಾಡುವವರ ಮೇಲೆ ಕಾರ್ಯಕರ್ತರು ಕಣ್ಣಿಡಬೇಕು ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕಲಬುರಗಿ ಉತ್ತರ ಮತ್ತು ಕಲಬುರಗಿ ದಕ್ಷಿಣ ಮತಕ್ಷೇತ್ರದ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಳಗೊಳಗೆ ಕುತಂತ್ರ ಮಾಡುವವರಿಗೂ ತಮ್ಮ ಕೆಲಸ ನಡೆಯಲ್ಲ ಎಂಬ ರೀತಿಯಲ್ಲಿ ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತ ಒಗ್ಗಟಾಗಿರಬೇಕು ಎಂದು ಹೇಳಿದರು.

ಕಾಂಗ್ರೆಸ್‌ ಎಲ್ಲ ಧರ್ಮ, ಜಾತಿಗಳಿಗೂ ಸೇರಿದ ಪಕ್ಷ. ಒಂದೊಂದು ಜಾತಿಯವರು ಇಂತಿಷ್ಟು ಮತ ಕೊಡುತ್ತಾರೆ. ಇಲ್ಲವರೆಲ್ಲ ಸೇರಿದರೆ ಪಕ್ಷದ ಶಕ್ತಿ ಮತ್ತಷ್ಟು ಹೆಚ್ಚುತ್ತದೆ. ಒಬ್ಬರ ಮೇಲೆ ಒಬ್ಬರು ಚಾಡಿ ಹೇಳುವುದು ಬಿಡಬೇಕು. ನಮ್ಮಿಂದ ದೂರವಾದವರು ಯಾಕೆ ದೂರ ಹೋದರು? ದೂರ ಹೋದವರನ್ನು ಹತ್ತಿರಕ್ಕೆ ಕರೆತರುವ ಕೆಲಸವಾಗಬೇಕು ಎಂದು ಕರೆ ನೀಡಿದರು.

ಲೋಕಸಭಾ ಚುನಾವಣಾ ಇತಿಹಾಸದಲ್ಲಿ ಕಲಬುರಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ 2 ಬಾರಿ ಮಾತ್ರ ಸೋತಿತ್ತು. ಮೊದಲ ಬಾರಿಗೆ ‘ಜಖಂ’ ಹೊಡೆದಿದ್ದು ಸುಧಾರಿಸಿಕೊಳ್ಳುವುದು ಕಷ್ಟವಾಗುತ್ತದೆ. ಅದಕ್ಕೆ ಪದೇ, ಪದೇ ‘ಜಖಂ’ ನೆನಪಾಗುತ್ತದೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮುಂದೆ ಏನಾಗಬೇಕು ಎಂಬ ಕುರಿತು ಆಲೋಚಿಸಬೇಕು ಎಂದು ಹೇಳಿದರು.

ಈ ಹಿಂದೆ ಬಿಜೆಪಿ ಮತ್ತು ಕಮುನಿಸ್ಟ್‌ ಪಕ್ಷಗಳು ಸತತವಾಗಿ ಸೋಲುತ್ತಲೇ ಬಂದಿವೆ. ಅವರ್ಯಾರು ಸೋಲಿನ ಬಗ್ಗೆ ಚಿಂತಿಸಿಲ್ಲ. ಪಕ್ಷ ಬಿಟ್ಟು ಯಾರು ಹೋಗಿಲ್ಲ. ಮುಂದೆ ಯಾವುದೇ ಚುನಾವಣೆ ಬಂದರೂ ನಿಮ್ಮೊಂದಿಗೆ ನಾನಿದ್ದೇನೆ. ಯಾರೂ ಧೈರ್ಯ ಕಳೆದುಕೊಳ್ಳಬಾದರು. ಪ್ರತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಜಾಗೃತರಾಗಿ ಮುನ್ನಡೆಯಬೇಕೆಂದು ಸಲಹೆ ನೀಡಿದರು.

Advertisement

ಈ ಬಾರಿ ಚುನಾವಣೆ ಸೋಲು ನನ್ನದೋ ಅಥವಾ ನಿಮ್ಮದೋ ಅಲ್ಲ. ಕಾಂಗ್ರೆಸ್‌ ಪಕ್ಷದ ತತ್ವ-ಸಿದ್ಧಾಂತ ಧಾರೆ ಸೋಲು. ಮುಂದೆ ನಮ್ಮ ವಿಚಾರಗಳಿಗೆ ಸೋಲಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯಸಭಾ ಮಾಜಿ ಸದಸ್ಯ ಕೆ.ಬಿ. ಶಾಣಪ್ಪ ಮಾತನಾಡಿ, ಲೋಕಸಭಾ ಚುನಾವಣೆ ಸೋಲಿನ ಬಗ್ಗೆ ನಾವು ಮಂಥನ ಮಾಡಿಕೊಳ್ಳಬೇಕು. ಖರ್ಗೆ ಅವರು ತಮ್ಮ ಜೀವನದಲ್ಲೇ ಸೋಲು ಕಾಣುವುದಿಲ್ಲ ಎಂದು ನಾವು ತಿಳಿದುಕೊಂಡಿದ್ದೇವು. ಆದರೆ, ಅವರ ಸೋಲು ಹೇಗಾಯಿತು? ಸೋಲಿಗೆ ಕಾರಣವೇನು? ಎಲ್ಲಿ ತಪ್ಪಾಗಿದೆ ಎಂಬುವುದರ ಬಗ್ಗೆ ಆಲೋಚಿಸಬೇಕು ಎಂದು ಹೇಳಿದರು.

ನಾವು ಸೋತಿಲ್ಲ. ನಮ್ಮನ್ನು ನಾವು ಸೋಲಿಸಿಕೊಂಡಿದ್ದೇವೆ. ಡಾ| ಉಮೇಶ ಜಾಧವ ಅವರನ್ನು ತಯಾರು ಮಾಡಿಕೊಟ್ಟಿದ್ದು ಯಾರು? ವಿಶ್ವನಾಥ ಪಾಟೀಲ, ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ, ವೈಜನಾಥ ಪಾಟೀಲ ಪಕ್ಷದಿಂದ ಹೋಗಲು ಬಿಟ್ಟಿದ್ದು ಯಾಕೆ? ಚಿತ್ತಾಪುರ ಸೇರಿದಂತೆ ಕಾಂಗ್ರೆಸ್‌ ಶಾಸಕರ ಕ್ಷೇತ್ರದಲ್ಲೂ ಪಕ್ಷಕ್ಕೆ ಕಡಿಮೆ ಮತ ಬರಲು ಕಾರಣವೇನು? ಇವೆಲ್ಲದರ ಬಗ್ಗೆ ಚರ್ಚಿಸಬೇಕು ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಉತ್ತರ ಮತಕ್ಷೇತ್ರದ ಶಾಸಕಿ ಖನೀಜಾ ಫಾತೀಮಾ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಮಾತನಾಡಿದರು.

ಮುಖಂಡರಾದ ವಿಶ್ವನಾಥ ಮೂಲಗೆ, ಬಸವರಾಜ ಭೀಮಳ್ಳಿ, ಚಂದ್ರಶೇಖರ ಸುಲ್ತಾನಪುರ, ದೇವೇಂದ್ರ ಮಟ್ಟೂರು, ಸೈಯದ್‌ ಅಹ್ಮದ್‌, ಲತಾರವಿ ರಾಠೊಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next