Advertisement

ಭಾಷಣ ಬಿಟ್ಟು ಬಹಿರಂಗ ಚರ್ಚೆಗೆ ಬನ್ನಿ

12:27 PM Feb 05, 2018 | Team Udayavani |

ಹೊಸಕೋಟೆ/ಬೆಂಗಳೂರು: ಅಧಿಕಾರಕ್ಕೆ ಬಂದರೆ ನೀರಾವರಿಗೆ ಒಂದು ಲಕ್ಷ ಕೋಟಿ ಹಣ ಖರ್ಚು ಮಾಡುತ್ತೇನೆ ಎಂದು ಎಲ್ಲೋ ಭಾಷಣದಲ್ಲಿ ಹೇಳುವುದೇನು, ಬಹಿರಂಗವಾಗಿ ಚರ್ಚೆಗೆ ಬನ್ನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಸವಾಲು ಹಾಕಿದ್ದಾರೆ.

Advertisement

“ನಿಮ್ಮ (ಬಿಜೆಪಿ) ಸರ್ಕಾರದ ಐದು ವರ್ಷ ಅವಧಿಯಲ್ಲಿ ನೀರಾವರಿ ಖರ್ಚು ಮಾಡಿದ್ದು ಎಷ್ಟು, ನಮ್ಮ (ಕಾಂಗ್ರೆಸ್‌) ಸರ್ಕಾರದ ಅವಧಿಯಲ್ಲಿ ಖರ್ಚು ಮಾಡಲಾದ ಹಣ ಎಷ್ಟು ಎಂದು ಬಹಿರಂಗ ಚರ್ಚೆಗೆ ನಾನು ಸಿದ್ಧ. ತಾಕಿತ್ತದರೆ ಬನ್ನಿ ಎಂದು ಪಂಥಾಹ್ವಾನ ನೀಡಿದ ಸಿದ್ದರಾಮಯ್ಯ, “ಬರಲು ನಿಮಗೆ ದಮ್ಮು ಇಲ್ಲ ಬಿಡಿ’ ಎಂದೂ ಹೇಳಿದರು.

ಚನ್ನಬೈರವೇಶ್ವರ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಟೌನ್‌ ಬ್ಯಾಂಕ್‌ ಶತಮಾನೋತ್ಸವ, 10 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಹಳೆ ತಾಲೂಕು ಪಂಚಾಯಿತಿ ಆವರಣದಲ್ಲಿ ನಿರ್ಮಿಸಲಿರುವ  ಅಂಬೇಡ್ಕರ್‌ ಭವನಕ್ಕೆ ಶಂಕುಸ್ಥಾಪನೆ, ಮಿನಿ ವಿಧಾನಸೌಧದ ಆವರಣದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಹಾಗೂ ವಿವಿಧ ಇಲಾಖೆಗಳ ಫ‌ಲಾನು¸‌ವಿಗಳಿಗೆ ಸವಲತ್ತುಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಷಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರ ವಿರುದ್ಧ ವಾಗ್ಧಾಳಿ ನಡೆಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ 5 ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳು ಸೇರಿ ನೀರಾವರಿಗೆ ಬರೀ 18 ಸಾವಿರ ಕೋಟಿ ರೂ. ಖರ್ಚು ಮಾಡಿದ್ದರು. ಆದರೆ, ನಮ್ಮ ಸರ್ಕಾರದಲ್ಲಿ ಇಲ್ಲಿಯವರೆಗೆ 50 ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಲಾಗಿದೆ.

ಆದರೆ, ಈಗ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಸಮಗ್ರ ನೀರಾವರಿ ಯೋಜನೆಗಳಿಗೆ 1 ಲಕ್ಷ ಕೋಟಿ ರೂ. ಖರ್ಚು ಮಾಡುತ್ತೇವೆ. 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡುತ್ತೇವೆ ಎಂದು ಯಡಿಯೂರಪ್ಪ ವೀರಾವೇಷದ ಮಾತುಗಳನ್ನಾಡಿದ್ದಾರೆ. ಅಪ್ಪನಾಣೆಗೂ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದರು.

Advertisement

ಹಿಂದೆ 5 ವರ್ಷ ಅಧಿಕಾರದಲ್ಲಿದ್ದಾಗ ನೀರಾವರಿಗೆ ಖರ್ಚು ಮಾಡಲು ಯಾರಾದರೂ ಅವರ ಕೈ ಹಿಡಿದುಕೊಂಡಿದ್ದರಾ?, ರೈತರ ಸಾಲ ಮನ್ನಾ ಮಾಡಲು ಹಣ ಎಲ್ಲಿಂದ ತರಲಿ ಸರ್ಕಾರದ ಬಳಿ ನೋಟು ಮುದ್ರಣ ಮಾಡುವ ಯಂತ್ರವಿಲ್ಲ ಎಂದು ಹೇಳಿದ್ದ ಈ ಯಡಿಯೂರಪ್ಪನವರ ಮಾತು ರಾಜ್ಯದ ಜನ ನಂಬಲ್ಲ. ಯಡಿಯೂರಪ್ಪ ಸೇರಿ ಬಿಜೆಪಿಯ ಯಾವ ಮುಖಂಡರು ನಂಬಿಕೆಗೆ ಅರ್ಹರಲ್ಲ ಎಂದರು.

ಅಧಿಕಾರದಲ್ಲಿದ್ದಾಗ ಏನೂ ಮಾಡದೇ ಈಗ ಢೋಂಗಿತನ ತೋರುತ್ತಿದ್ದಾರೆ. 5 ವರ್ಷದಲ್ಲಿ ದಲಿತರ ಏಳಿಗೆಗೆ 21 ಸಾವಿರ ಕೋಟಿ ಖರ್ಚು ಮಾಡಿ ಈಗ ದಲಿತರ ಮನೆಯಲ್ಲಿ ಉಪಹಾರ ಸೇವಿಸುವ ನಾಟಕ ಆಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದ ಸಿದ್ದರಾಮಯ್ಯ ನಮ್ಮ ಸರ್ಕಾರ ದಲಿತರ ಅಭಿವೃದ್ಧಿಗೆ 80 ಸಾವಿರ ಕೋಟಿ ರೂ. ಖರ್ಚು ಮಾಡಿದೆ ಎಂದರು.

ಬಿಜೆಪಿಯಿಂದ ಅಧಿಕಾರ ದುರ್ಬಳಕೆ: ಪ್ರಧಾನಿ ಮೋದಿ, ಅಮಿತ್‌ಷಾ, ಯಡಿಯೂರಪ್ಪ ಮಾತೆತ್ತಿದ್ದರೆ, ಸಿದ್ದರಾಮಯ್ಯ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಹೇಳುತ್ತಾರೆ. ಆದರೆ, 4 ವರ್ಷ 9 ತಿಂಗಳಲ್ಲಿ ಯಾವುದೇ ಹಗರಣ ಇಲ್ಲದೇ ಭ್ರಷ್ಟಾಚಾರ ಮುಕ್ತ ಸರ್ಕಾರ ನಡೆಸಿದ್ದೇನೆ.

ಕಾಂಗ್ರೆಸ್‌ ಪಕ್ಷ ಈ ದೇಶವನ್ನು 60 ವರ್ಷ ಆಳಿದೆ. ಆದರೆ, ಯಾವತ್ತೂ ಐಟಿ, ಸಿಬಿಐ, ಇಡಿ ಅನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಆದರೆ, ಜಾರ್ಜ್‌, ಡಿ.ಕೆ. ಶಿವಕುಮಾರ್‌, ಎಂಟಿಬಿ ನಾಗರಾಜ್‌ ಮೇಲೆ ಐಟಿ ದಾಳಿ ನಡೆಸಿ, ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳಿದ ಮೋದಿ ಈಗ “ಪಕೋಡ’ ಮಾರಲು ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.

ಒಂದು ಕುಟುಂಬಕ್ಕೆ 40 ರೂ.: ದೇಶದ 10 ಕೋಟಿ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಆರೋಗ್ಯ ವಿಮೆ ಕೊಡುವುದಾಗಿ ಪ್ರಧಾನಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಆದರೆ, ಅದಕ್ಕಾಗಿ ಮೀಸಲಿಟ್ಟ ಹಣ ಬರೀ 2 ಸಾವಿರ ಕೋಟಿ ರೂ. ಮಾತ್ರ. ಈ ಹಣದಲ್ಲಿ ಒಂದು ಕುಟುಂಬಕ್ಕೆ 5 ಲಕ್ಷ ಅಲ್ಲ, ಕೇವಲ 40 ರೂ. ಸಿಗುತ್ತದೆ. ಇದನ್ನು ಜನಪರ ಕಾಳಜಿ ಎಂದು ಹೇಳಬೇಕಾ ಎಂದು ಇದೇ ವೇಳೆ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next