Advertisement

ಅಸ್ತಿತ್ವ ಕಳೆದುಕೊಳ್ಳುತ್ತಿರುವ ಚರ್ಮದ ಹಲಗೆಗಳು

09:00 PM Mar 04, 2023 | Team Udayavani |

ರಬಕವಿ-ಬನಹಟ್ಟಿ: ಜಾಗತೀಕರಣದ ಪ್ರಭಾವದಿಂದಾಗಿ ನಾವು ನಮ್ಮ ಹಬ್ಬಗಳ ಸಂದರ್ಭದಲ್ಲಿ ಅನೇಕ ಸಾಂಪ್ರದಾಯಕ ವಸ್ತುಗಳನ್ನು ಕಳೆದುಕೊಂಡಿದ್ದೇವೆ. ಹೋಳಿ ಹುಣ್ಣಿಮೆಯ ಸಂದರ್ಬದಲ್ಲಿ ಚರ್ಮದ ಹಲಿಗೆಗಳನ್ನು ಬಳಸುತ್ತಿದ್ದರು. ಆದರೆ ಈಗ ಮಾರುಕಟ್ಟೆಯಲ್ಲಿ ಫೈಬರ್ ಹಲಗೆಗಳ ಮಾರಾಟ ಜೋರಾಗಿರುವುದರಿಂದ ಚರ್ಮದ ಹಲಗೆಗಳು ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ.

Advertisement

ಫೈಭರ್ ಹಲಗೆಗಳು ಮಾರುಕಟ್ಟೆ ಪ್ರವೇಶ ಮಾಡಿದ್ದರಿಂದ ಚರ್ಮದ ಹಲಗೆಗಳ ಮಾರಾಟ ಕಡಿಮೆಯಾಗಿದೆ. ನಮ್ಮ ಗ್ರಾಮೀಣ ಪ್ರದೇಶದ ಜನರು ಸಹಿತ ಆಧುನಿಕ ಪೈಬರ್ ಹಲಗೆಗಳನ್ನು ಖರೀದಿಗೆ ಮಾರು ಹೋಗಿರುವುದರಿಂದ ಚರ್ಮದ ಹಲಗೆಯನ್ನು ಕೇಳುವವರೇ ಇಲ್ಲದಂತಾಗಿದೆ.

ಮೂರು ತಲೆಮಾರುಗಳಿಂದ ಚರ್ಮ ವಾದ್ಯಗಳನ್ನು ತಯಾರು ಮಾಡುವುದನ್ನು ತಮ್ಮ ಕುಟುಂಬದ ವೃತ್ತಿಯನ್ನಾಗಿಸಿಕೊಂಡಿರುವ ನಗರದ ಕೆಲವು ಕುಟುಂಬಗಳು ಇಂದು ಕೂಡಾ ತಮ್ಮ ಮನೆಯಲ್ಲಿ ಚರ್ಮದ ಹಲಗೆಗಳನ್ನು ತಯಾರು ಮಾಡಿ ತಮ್ಮ ಉಪಜೀವನವನ್ನು ಸಾಗಿಸುತ್ತಿದ್ದಾರೆ. ಈ ಬಾರಿ ಚರ್ಮದ ಹಲಗೆಗಳನ್ನು ಕೇಳುವವರೆ ಇಲ್ಲ ಎನ್ನುತ್ತಾರೆ.

ಹೋಳಿ ಹುಣ್ಣಿಮೆ ಸಮೀಪಿಸುತ್ತಿದ್ದು, ಎಲ್ಲೆಂದರಲ್ಲಿ ತಡ ರಾತ್ರಿವರೆಗೆ ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ವಿವಿಧ ಶೈಲಿಯಲ್ಲಿ ಹಲಗೆಯನ್ನು ನುಡಿಸುತ್ತಾ ಹೋಳಿ ಸಂಭ್ರಮದಲ್ಲಿದ್ದಾರೆ. ಮೊದಲು ಹಲಗೆಗಳು ಕಡಿಮೆ ಇದ್ದವು ಈಗ ಪ್ರತಿಯೊಂದು ಮನೆಯಲ್ಲಿಯೂ ಪೈಬರ್ ಹಲಗೆ ಎರಡ ರಿಂದ ಮೂರು ಹಲಗೆಗಳು ಕಂಡು ಬರುತ್ತವೆ.
ಆಧುನಿಕತೆಯ ಪೈಬರ್ ಹಲಗೆಗಳು ಈಗಾಗಲೇ ಚರ್ಮದ ಹಲಗೆಗಳ ಮರುಕಟ್ಟೆಯನ್ನು ಸಂಪೂರ್ಣವಾಗಿ ಕಸಿದುಕೊಂಡಿದ್ದು, ಬಣ್ಣ ಬಣ್ಣದ ಚರ್ಮದ ಹಲಗೆಯ ಸುಮಧುರ ನಾದ ಇಂದು ಪೈಭರ ಹಲಗೆಗಳ ಕರ್ಕಷ ನಾದಕ್ಕೆ ಕರಗಿ ಹೋಗುತ್ತಿದೆ. ಮುಂದೊಂದು ದಿನ ಸಂಪ್ರದಾಯದ ಚರ್ಮದ ಹಲಗೆಗಳು ಹೊಳಿ ಹುಣ್ಣಿಮೆಯ ನೆನಪುಗಳಾಗಿ ಉಳಿಯಲಿವೆ.

ಹೋಳಿ ಹಬ್ಬವು ಅತ್ಯಂತ ಪವಿತ್ರವಾಗಿದೆ. ಇಂದು ಫೈಬರ್ ಹಲಗೆಗಳು ಕರ್ಕಶ ಶಬ್ದಗಳನ್ನು ಉಂಟು ಮಾಡುತ್ತವೆ. ನಿಜವಾಗಿಯೂ ಚರ್ಮದ ವಾದ್ಯಗಳನ್ನು ಕೇಳುವುದು ಉತ್ತಮ. ನಮ್ಮಿಂದ ದೂರವಾಗುತ್ತಿರುವ ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನವಾಗಬೇಕಿದೆ.
– ಸಿದ್ದರಾಜ ಪೂಜಾರಿ ಹಿರಿಯ ಸಾಹಿತಿಗಳು, ರಬಕವಿ-ಬನಹಟ್ಟಿ

Advertisement

ಚರ್ಮದ ನಾದ ಕೇಳುವವರಿಗೆ ಗೊತ್ತು ಅದರ ನಾದ, ಪೈಬರ್ ಹಲಗೆಗಳಿಂದ ಅಂತಹ ನಾದ ಬರುವುದಿಲ್ಲ. ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ನಾವು ಕೂಡಾ ಪ್ರತಿ ವರ್ಷ ಹಲಗೆ ಹಬ್ಬ ಕಾರ್ಯಕ್ರಮ ಹಮ್ಮಿಕೊಂಡು ಪ್ರೋತ್ಸಾಹಿಸುತ್ತಾ ಬಂದಿದ್ದೇವೆ.
– ಡಾ. ಪದ್ಮಜೀತ ನಾಡಗೌಡಪಾಟೀಲ, ಖ್ಯಾತ ನೇತ್ರ ತಜ್ಞ ರು, ರಬಕವಿ

ಪೈಬರ್ ಹಲಗೆಗಳಿಂದ ನಮ್ಮ ಸಂಪ್ರದಾಯಗಳು ಮಾಯವಾಗುತ್ತಿವೆ. ಅದು ನೀಡುವ ಸಂದೇಶ ಮರೆಯಾಗುತ್ತಿದೆ. ಚರ್ಮದ ಹಲಗೆಯಿಂದ ಹೊರಡುವ ನಾದದ ಸೊಬಗೇ ಬೇರೆ ಆ ಮಾಧುರ್ಯ ಪೈಬರ ಹಲಗೆಗೆ ಇರುವುದಿಲ್ಲ. ಪೈಬರ್ ಹಲುಗೆಯಿಂದ ಪರಿಸರನಾಶವಾಗುತ್ತದೆ ಹೊರತು ಬೇರೆನಿಲ್ಲ.
– ಶಿವಾನಂದ ಗಾಯಕವಾಡ, ಹಿಂದೂ ಸಂಘಟನೆಗಳ ಮುಖಂಡರು, ಬನಹಟ್ಟಿ

– ಕಿರಣ ಶ್ರೀಶೈಲ ಆಳಗಿ

 

Advertisement

Udayavani is now on Telegram. Click here to join our channel and stay updated with the latest news.

Next