Advertisement

ಅಡಿಕೆ ತೋಟಗಳಲ್ಲಿ ಲೀಸ್‌ ವ್ಯವಹಾರ

01:13 AM Mar 26, 2019 | sudhir |

ಬೆಳ್ತಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಕೃಷಿಯಾದ ಅಡಿಕೆ ತೋಟಗಳನ್ನು ಗುತ್ತಿಗೆ/ಲೀಸ್‌ಗೆ ಕೊಡುವ ಪ್ರಕರಣಗಳು ಹೆಚ್ಚುತ್ತಿದ್ದು, ಲೀಸ್‌ಗೆ ಪಡೆದುಕೊಂಡವರು ನಿಧಾನವಾಗಿ ಬೆಳೆಗಾರರನ್ನು ಮೋಸದ ಬಲೆಯಲ್ಲಿ ಬೀಳಿಸುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿವೆ.

Advertisement

ಯುವಜನಾಂಗ ಕೃಷಿಯಿಂದ ದೂರವಾಗುತ್ತಿದ್ದು, ಹಳ್ಳಿಗಳಲ್ಲಿ ಹಿರಿಯರೇ ಅಡಿಕೆ ತೋಟ ನೋಡಿ ಕೊಳ್ಳಬೇಕಾದ ಸ್ಥಿತಿ ಇದೆ. ಬೆಲೆ ಕುಸಿತ, ಕಾರ್ಮಿಕರ ಕೊರತೆ, ಕೊಳೆರೋಗ ಹೀಗೆ ಅಡಿಕೆ ಬೆಳೆಗಾರರು ನಾನಾ ಸಮಸ್ಯೆಗಳ ನಡುವೆ ಇದ್ದಾರೆ. ಇದರಿಂದ ಬೇಸತ್ತು ತೋಟವನ್ನು ಲೀಸ್‌ಗೆ ನೀಡುತ್ತಿದ್ದಾರೆ.

ತೋಟವನ್ನು ಲೀಸ್‌ಗೆ ಪಡೆದುಕೊಂಡವರಲ್ಲಿ ಕೆಲವರು ಪ್ರಾರಂಭದಲ್ಲಿ ಪ್ರಾಮಾಣಿಕರಂತೆ ವರ್ತಿಸಿ, ಬಳಿಕ ಯಾಮಾರಿಸಿದ ಘಟನೆಗಳು ವರದಿಯಾಗಿವೆ.

ಹೀಗಿರುತ್ತದೆ ವ್ಯವಹಾರ
ಲೀಸ್‌ಗೆ ಪಡೆದುಕೊಳ್ಳುವವರು ದಲ್ಲಾಳಿಗಳ ಮೂಲಕ ಬೆಳೆಗಾರನ ಬಳಿ ಬರುತ್ತಾರೆ. ಬಳಿಕ ಮೊತ್ತ ನಿಗದಿಪಡಿಸಿ ಒಪ್ಪಂದ (ಎಗ್ರಿಮೆಂಟ್‌) ಮಾಡಿಕೊಳ್ಳುತ್ತಾರೆ. ಮುಂಗಡವನ್ನೂ ನೀಡುತ್ತಾರೆ. ದಲ್ಲಾಳಿ ಊರಿನವನೇ ಆಗಿರುವುದರಿಂದ ಬೆಳೆಗಾರನಲ್ಲಿ ವಿಶ್ವಾಸ ಮೂಡಿಸುತ್ತದೆ.

ಮುಂದೆ ಲೀಸ್‌ಗೆ ಪಡೆದಾತ ಬೆಳೆಯ ಮೊದಲ ಕೊçಲು ಕೊಂಡು ಹೋಗುತ್ತಾನೆ. ಎರಡನೇ ಕೊçಲಿನ ವೇಳೆ ವಿಶ್ವಾಸಕ್ಕಾಗಿ ಚೆಕ್‌ ನೀಡುತ್ತಾನೆ. ವಿಶ್ವಾಸದಿಂದ ಮೂರನೇ ಕೊçಲಿನ ಅಡಿಕೆಯನ್ನು ಒಯ್ಯುವಾಗಲೂ ಬೆಳೆಗಾರ ಸುಮ್ಮನಿರುತ್ತಾನೆ. ಬಾಕಿ ಹಣವನ್ನು ನಾಳೆ ಕೊಡುತ್ತೇನೆ, ನಾಡಿದ್ದು ಕೊಡುತ್ತೇನೆ ಎಂದು ಸತಾಯಿಸಲು ಆರಂಭಿಸಿದಾಗಲೇ ಮೋಸ ಹೋಗಿರುವ ಅರಿವಾಗುವುದು.

Advertisement

ಅಲೆಯಬೇಕಾದ ಸ್ಥಿತಿ!
ಚೆಕ್ಕನ್ನು ಬ್ಯಾಂಕಿಗೆ ಹಾಕಿದರೂ ಅದು ಅಮಾನ್ಯವಾ ಗುವುದರಿಂದ ಚೆಕ್‌ ಅಮಾನ್ಯ ಪ್ರಕರಣಕ್ಕೆ ಅಲೆಯ ಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ದಾಖಲೆಗಳು ಸರಿಯಿಲ್ಲದಿದ್ದಾಗ ಚೆಕ್‌ ಅಮಾನ್ಯ ಪ್ರಕರಣ ಕೂಡ ಹಳ್ಳ ಹಿಡಿಯುವ ಸಾಧ್ಯತೆ ಇರುತ್ತದೆ. ಈ ಕುರಿತು ಅನೇಕ ಬೆಳೆಗಾರರಿಗೆ ಮಾಹಿತಿಯೂ ಇರುವುದಿಲ್ಲ!

ಎಲ್ಲರೂ ಹಾಗಿಲ್ಲ; ಎಚ್ಚರ ಅಗತ್ಯ
ತೋಟವನ್ನು ಒಂದು ವರ್ಷ, ಐದು ವರ್ಷ-ಹೀಗೆ ಬೇರೆ ಬೇರೆ ಅವಧಿಗೆ ಲೀಸ್‌ಗೆ ಪಡೆಯಲಾಗುತ್ತದೆ. ಈ ರೀತಿ ಪಡೆದುಕೊಂಡವರು ಎಲ್ಲರೂ ಮೋಸಗಾರರಲ್ಲ. ವಂಚಕರು ಒಬ್ಬರಾದರೂ ಬೆಳೆಗಾರರು ಎಚ್ಚರದಿಂದಿರಬೇಕಾಗುತ್ತದೆ.

ವಂಚನೆ ಹೀಗಿದೆ …
ಗುತ್ತಿಗೆದಾರ ವಾರ್ಷಿಕ ಒಂದು ಮರಕ್ಕೆ 500ರಿಂದ 1 ಸಾವಿರ ರೂಪಾಯಿ ನಿಗದಿಪಡಿಸುತ್ತಾನೆ. ಮೊದಲ ಕೊçಲಿನ ಫ‌ಸಲಿಗೆ ಮೂರನೇ ಒಂದಂಶ ಹಣವನ್ನೂ ನೀಡುತ್ತಾನೆ. ಮುಂದಿನ ಹಂತಗಳಲ್ಲಿ ಹಣ ನೀಡದೆ ಸತಾಯಿಸುತ್ತಾನೆ. ಪೊಲೀಸರಿಗೆ ದೂರು ನೀಡಿದಲ್ಲಿ ಆತ ಮುಂದೆ ಹಣ ನೀಡದೇ ಇದ್ದರೆ ಎಂಬ ಭೀತಿಯಿಂದ ಬೆಳೆಗಾರ ಅಧಿಕೃತವಾಗಿ ಯಾರಲ್ಲೂ ಹೇಳಲಾಗದೆ ತೊಳಲಾಡುತ್ತಾನೆ.

ಅನಿವಾರ್ಯ ಸ್ಥಿತಿ
ಪ್ರಸ್ತುತ ದಿನಗಳಲ್ಲಿ ತೋಟಗಳನ್ನು ವೃದ್ಧರಿಗೆ ಮೀಸಲಿಟ್ಟು ಯುವಕರು ಪೇಟೆ ಕಡೆ ಮುಖ ಮಾಡಿದ್ದಾರೆ. ಅನಿವಾರ್ಯವಾಗಿ ತೋಟಗಳನ್ನು ಲೀಸ್‌ಗೆ ನೀಡಬೇಕಾದ ಸ್ಥಿತಿ ಇದೆ. ಇದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯೂ ಇರಬಹುದು. ಈ ತನಕ ಲೀಸ್‌ಗೆ ಪಡೆದವರು ಮೋಸ ಮಾಡಿದ ಕುರಿತು ನಮ್ಮ ಗಮನಕ್ಕೆ ಬಂದಿಲ್ಲ.
– ರವಿಕಿರಣ್‌ ಪುಣಚ,
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ

ಅಡಿಕೆ ತೋಟಗಳನ್ನು ಲೀಸ್‌ಗೆ ಪಡೆದು ಮೋಸ ಮಾಡಿರುವ ಕುರಿತು ಮೌಖೀಕ ದೂರುಗಳು ಬಂದಿವೆ. ಆದರೆ ನಮ್ಮ ವ್ಯಾಪ್ತಿಯ ಯಾವುದೇ ಠಾಣೆಯಲ್ಲಿ ಇಂತಹ ಪ್ರಕರಣ ದಾಖಲಾಗಿಲ್ಲ.
– ಸಂದೇಶ ಪಿ.ಜಿ., ಸರ್ಕಲ್‌ ಇನ್ಸ್‌ಪೆಕ್ಟರ್‌, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next