Advertisement

ವಿಶೇಷ ತರಗತಿಗಳ ಹೆಸರಿನಲ್ಲಿ ಸಜೆಯಾಗುತ್ತಿರುವ ಕಲಿಕೆ

06:00 AM May 18, 2018 | |

ಪ್ರಸ್ತುತ ನಮ್ಮ ಶೈಕ್ಷಣಿಕ ವ್ಯವಸ್ಥೆ ಹೇಗಿದೆಯೆಂದರೆ ಮಗು ಯಾವಾಗ ಶಾಲೆಗೆ ಹೋಗಲು ಆರಂಭಿಸಿತೊ ಅಲ್ಲಿಂದ ಅದು ಕಲಿಯುವುದನ್ನು ನಿಲ್ಲಿಸುತ್ತದೆ ಎಂಬ ಪರಿಸ್ಥಿತಿ. ನಮಗೇನು ಬೇಕು, ಶಿಕ್ಷಣ ಇಲಾಖೆ ಏನು ಹೇಳುತ್ತದೆ ಅದನ್ನು ಉರು ಹೊಡೆಸಿ, ಅತಿ ಬುದ್ಧಿವಂತನನ್ನಾಗಿಸಿ, ಹೆಚ್ಚೆಚ್ಚು ಅಂಕ ಪಡೆಯುವಂತೆ ಆ ಮೂಲಕ ಫ‌ಲಿತಾಂಶ ಬರುವಂತೆ ಮಾಡುವುದೇ ಗುಣಾತ್ಮಕ ಶಿಕ್ಷಣ. ಆಗ ಅಂತಹ ಶಾಲೆ ಶ್ರೇಷ್ಠ ಶಾಲೆ ಎನ್ನುವ ವಿಪರ್ಯಾಸಕರ ಪರಿಸ್ಥಿತಿಯಲ್ಲಿದ್ದೇವೆ.

Advertisement

ಕಾರ್ಯಕ್ರಮವೊಂದರಲ್ಲಿ ಓರ್ವ ಗೆಳೆಯನನ್ನು ಭೇಟಿ ಆಗುವ ಸಂದರ್ಭ ಸಿಕ್ಕಿತು. ಮಗ ಎಲ್ಲಿ ಎಂದು ಕೇಳಿದೆ. ಆತನಿಗೆ ವಿಶೇಷ ಕ್ಲಾಸು ನಡೆಯುತ್ತಿದೆ. ಮುಂದೆ ಅದೇ ಶಾಲೆಯಲ್ಲಿ ಬೇಗನೆ ತರಗತಿ ಆರಂಭವಾಗುತ್ತದೆ ಎಂದರು. ಮಗ ಯಾವ ತರಗತಿ ಎಂದು ಪ್ರಶ್ನಿಸಿದೆ. ಉತ್ತರ ಸಿಕ್ಕಾಗ ಹೌಹಾರಿದೆ. ಅದ್ಯಾಕೆ ಎಂದು ಕೇಳಿದಾಗ “ಏಳನೇ ತರಗತಿಯ ನಂತರ ಪ್ರೌಢಶಾಲೆಗೆ, ಅನಂತರ ಹತ್ತನೇ ತರಗತಿ, ಆಮೇಲೆ ಪಿ.ಯು.ಸಿ. ಮುಗಿಯುವಾಗ ಸಿ.ಇ.ಟಿ. ಯಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಬೇಕಾ ಗಿದೆ. ಅದೆಲ್ಲ ಈಸಿಯಾಗಬೇಕಾದರೆ ವಿಶೇಷ ಕ್ಲಾಸಿಗೆ ಕಳುಹಿಸ ಬೇಕಾಗುತ್ತದೆ. ಶಾಲೆ ಬೇಗ ಆರಂಭವಾದರೆ ಮಕ್ಕಳಿಗೇ ಒಳ್ಳೆಯ ದಲ್ಲವಾ?’ ಎಂಬ ವಿವರಣೆ, ಸಮರ್ಥನೆ. ಅಬ್ಟಾ! ಎಂದನ್ನಿಸಿತು. ವಿದ್ಯಾವಂತ(?)ಗೆಳೆಯನ ಅಜ್ಞಾನಕ್ಕೆ, ಬೌದ್ಧಿಕ ದಿವಾಳಿತನಕ್ಕೆ ನಗಬೇಕೊ ಅಳಬೇಕೊ ನೀವೇ ಹೇಳಿ. 

ಇಲ್ಲಿ ಎರಡು ವಿಚಾರಗಳಿವೆ. ಒಂದು, ಬೇಗ ಶಾಲೆ ಆರಂಭ ವಾದಷ್ಟೂ ಮಕ್ಕಳಿಗೆ ಒಳ್ಳೆಯದು. ಏಕೆಂದರೆ ಪಾಠ ಬೇಗನೆ ಮುಗಿಸಿ ಪುನರಾವರ್ತನೆ ಮಾಡುತ್ತಾರೆ. ಹೆಚ್ಚು ಅಂಕ ಪಡೆಯಲು ಸಹಕಾರಿ. ಎರಡನೆಯ ವಿಚಾರ ಹತ್ತನೇ ತರಗತಿಯ ಅನಂತರ ಪಿ.ಯು.ಸಿ. ಆಮೇಲೆ ಸಿ.ಇ.ಟಿ.ಯಂತಹ ಸ್ಪರ್ಧಾತ್ಮಕ ಪರೀಕ್ಷೆ ಎದುರಾಗುವುದು. ಈಗಲೇ ಅಂದರೆ ಏಳನೇ ತರಗತಿ ಯಿಂದಲೇ (ಎಷ್ಟು ಸಣ್ಣ ತರಗತಿಯಿಂದ ಸಾಧ್ಯವೋ ಅಲ್ಲಿಂದ) ತರಗತಿಯ ಹೆಸರಲ್ಲಿ ಕೋಚಿಂಗ್‌ ನೀಡಿದರೆ ಮುಂದಿನ ದಿನಗಳಲ್ಲಿ ಸುಲಭವಾಗುತ್ತದೆ. ಉನ್ನತ ರ್‍ಯಾಂಕ್‌ ಪಡೆಯಬಹುದು. ಆಗ ಪ್ರತಿಷ್ಠಿತ ಕಾಲೇಜುಗಳಲ್ಲಿ ಅಥವಾ ಸರಕಾರಿ ಸೀಟು ಸಿಗುತ್ತದೆ ಎಂಬುದು. ಮುಂದೆ ಏನು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ಪ್ರಶ್ನೆ ಅದಲ್ಲ; ವಿಶೇಷ ತರಗತಿಯ ಹೆಸರಿನಲ್ಲಿ, ಹೆಚ್ಚು ಅಂಕದ ನಿರೀಕ್ಷೆಯಲ್ಲಿ ನಡೆಸುವ ತರಗತಿಗಳು ಅಂತಿಮವಾಗಿ ಏನನ್ನು ಸಾಧಿಸುತ್ತವೆ ಮತ್ತು ಎಂತಹ ಜನಾಂಗವನ್ನು ತಯಾರು ಮಾಡುತ್ತದೆ ಎನ್ನುವುದು. ಶಿಕ್ಷಣ ಸಂಸ್ಥೆಗಳು ಜನಪರವಾದ, ಜೀವಪರವಾದ ಶಿಕ್ಷಣ ನೀತಿಗಳಿಗನುಗುಣವಾಗಿ ಕೆಲಸ ಮಾಡುತ್ತಿವೆಯೆ? ಅವುಗಳಿಗೆ ನಮ್ಮ ಮಕ್ಕಳು ಬುದ್ಧಿವಂತರಾಗಬೇಕು, ಒಳ್ಳೆಯ ಭವಿಷ್ಯ ಕಾಣಬೇಕೆಂಬ ಆದರ್ಶ ಧ್ಯೇಯಗಳಿವೆಯೇ? ಸಾಮಾನ್ಯ ವಾಗಿ ನಮ್ಮ ಅಂದರೆ ಪೋಷಕರ ನಿರೀಕ್ಷೆಗಳು ಮತ್ತು ಬೇಡಿಕೆ ಗಳಿಗನುಗುಣವಾಗಿ ಪೂರೈಕೆ ಮಾಡಿದರೆ ನಮಗೆ ನಿರಂತರ, ಅತಿ ಹೆಚ್ಚು ಬಂಡವಾಳ ಹರಿದು ಬರುತ್ತಿದೆಯೆಂಬ ಏಕಮೇವ ಉದ್ದೇಶವೇ ಹೊರತು ಬೇರೇನು ಇದೆ?

ಅವೆಲ್ಲ ಒತ್ತಟ್ಟಿಗಿರಲಿ; ವಾಸ್ತವವಾಗಿ ಮಗು ಕಲಿಯುವುದು ಏಕೆ? ಹೇಗೆ? ಅದರಲ್ಲೂ ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ಮಗುವಿನ ಶಿಕ್ಷಣ ಹೇಗಿರಬೇಕು, ಹೇಗೆ ನಡೆಯಬೇಕು, ಯಾವ ರೀತಿಯ ಕಲಿಕಾ ವಾತಾವರಣವಿರಬೇಕು ಎಂಬೆಲ್ಲ ಸಂಗತಿಗಳು ಏಕೆ ನಮಗೆ ಮುಖ್ಯವಾಗುವುದಿಲ್ಲ? ಏಳನೇ ತರಗತಿಗೆ ಬಿಡಿ ಕೆ.ಜಿ.ಯಿಂದಲೇ ವಿಶೇಷ ತರಗತಿಗಳನ್ನು ನಡೆಸುವ ಸಂಸ್ಥೆಗಳೂ ಇವೆ. ಯಾವುದೇ ಶಾಲೆಯಲ್ಲಿ, ಯಾವುದೇ ಹಂತದಲ್ಲಿ ನಡೆಸುವ ಎಲ್ಲಾ ವಿಧದ ವಿಶೇಷ ತರಗತಿಗಳು ಮತ್ತು ಶೈಕ್ಷಣಿಕ ವೇಳಾ ಪಟ್ಟಿಯನ್ನು ಮೀರಿ ನಡೆಸುವ ತರಗತಿಗಳೆಲ್ಲ ಮಕ್ಕಳ ಮೇಲೆ ಬೀರಬಹುದಾದ ನಕಾರಾತ್ಮಕ ಪರಿಣಾಮಗಳ ಬಗೆಗಿನ ಸಾಮಾನ್ಯ ಜ್ಞಾನವಾದರೂ ನಮ್ಮಲ್ಲಿರಬೇಡವೆ? ಅವೆಲ್ಲ ಸರಕಾರದ ಶೈಕ್ಷಣಿಕ ನೀತಿ-ನಿಯಮಗಳಿಗೆ ವಿರುದ್ಧವಾಗಿಯೇ ನಡೆಯುತ್ತಿವೆ. ಇವತ್ತು ಮಕ್ಕಳು ಭಾಷೆಯ ಹೆಸರಿನಲ್ಲಿ, ಅಂಕದ ಹೆಸರಿನಲ್ಲಿ, ಭವಿಷ್ಯದ ಹೆಸರಿನಲ್ಲಿ ಯಾವ ರೀತಿಯಾಗಿ ರೂಪುಗೊಳ್ಳುತ್ತಿದ್ದಾರೆ? ಕನಿಷ್ಠ ಪ್ರೌಢಶಾಲಾ ಹಂತದವರೆಗಾದರೂ ಓರ್ವ ವಿದ್ಯಾರ್ಥಿ ಶಿಕ್ಷಣದ ಮೂಲಕ ಏನನ್ನು ಕಲಿಯಬೇಕು- ಕಲಿಯಬಾರದು, ಎಂತಹ ವ್ಯಕ್ತಿತ್ವದವನಾಗಿ ರೂಪುಗೊಳ್ಳಬೇಕು- ರೂಪುಗೊಳ್ಳಬಾರದು ಎಂಬ ಮೂಲಭೂತ ಚಿಂತನೆಯನ್ನಾದರೂ ಹೊಂದಲು ಸಾಧ್ಯವೇ? ಶಿಕ್ಷಣ ಸಿದ್ಧಾಂತ, ಕಲಿಕಾ ಶಾಸ್ತ್ರ, ಮಗುವಿನ ಮನೋ ವಿಜ್ಞಾನ ದೂರವಿಡಿ. ಆದರೆ ನಾವು ಅಂದರೆ ಪೋಷಕರು (ಹಿರಿಯರು) ಹೇಗೆ ಬೆಳೆದಿದ್ದೇವೆ, ನಮ್ಮ ಪರಿಸರ ಹೇಗಿತ್ತು, ಎಂತಹ ಶಾಲೆಯಲ್ಲಿ ಅಧ್ಯಯನ ಮಾಡಿದ್ದೇವೆ, ರಜೆಯನ್ನು ಹೇಗೆ ಕಳೆಯುತ್ತಿದ್ದೆವು, ನೆರೆಹೊರೆಯವರೊಂದಿಗೆ ಹೇಗೆ ಬದುಕುತ್ತಿ ದ್ದೆವು, ಯಾವ್ಯಾವ ಕೆಲಸಗಳನ್ನು ಮಾಡಿ ಶಾಲೆಗೆ ಹೋಗುತ್ತಿದ್ದೆವು (ಶಾಲೆಯಿರಲಿ ಇಲ್ಲದಿರಲಿ, ಪರೀಕ್ಷೆ ಇರಲಿ ಇಲ್ಲ ದಿರಲಿ) ಎಂಬಿತ್ಯಾದಿ ಸಂಗತಿಗಳನ್ನಾದರೂ ಮೆಲುಕು ಹಾಕಬಹು ದಲ್ಲ? ಬಹುತೇಕ ಶಿಕ್ಷಣ ಸಂಶೋಧನೆಗಳು, ಅಧ್ಯಯ ನಗಳು ಏನು ಹೇಳುತ್ತಿವೆಯೆಂದರೆ ಭಾಷೆ ಮತ್ತು ಬದುಕಲು ಕಲಿಯಲು ಶಾಲೆಗೆ ಹೋಗಬೇಕಂತಲೇ ಇಲ್ಲ. ಪ್ರಸ್ತುತ ನಮ್ಮ ಶೈಕ್ಷಣಿಕ ವ್ಯವಸ್ಥೆ ಹೇಗಿದೆಯೆಂದರೆ ಮಗು ಯಾವಾಗ ಶಾಲೆಗೆ ಹೋಗಲು ಆರಂಭಿಸಿತೊ ಅಲ್ಲಿಂದ ಅದು ಕಲಿಯುವುದನ್ನು ನಿಲ್ಲಿಸುತ್ತದೆ ಎಂಬ ಪರಿಸ್ಥಿತಿ. ನಮಗೇನು ಬೇಕು, ಶಿಕ್ಷಣ ಇಲಾಖೆ ಏನು ಹೇಳುತ್ತದೆ ಅದನ್ನು ಉರು ಹೊಡೆಸಿ, ಅತಿ ಬುದ್ಧಿವಂತನನ್ನಾಗಿಸಿ, ಹೆಚ್ಚೆಚ್ಚು ಅಂಕ ಪಡೆಯುವಂತೆ ಆ ಮೂಲಕ ಫ‌ಲಿತಾಂಶ ಬರುವಂತೆ ಮಾಡುವುದೇ ಗುಣಾತ್ಮಕ ಶಿಕ್ಷಣ. ಆಗ ಅಂತಹ ಶಾಲೆ ಶ್ರೇಷ್ಠ ಶಾಲೆ ಎನ್ನುವ ವಿಪರ್ಯಾಸಕರ ಪರಿಸ್ಥಿತಿಯಲ್ಲಿದ್ದೇವೆ. ಯಾವುದೇ ಕಾರಣಕ್ಕಾಗಿಯಾದರೂ ನಿತ್ಯ ತರಗತಿ ನಡೆದರೂ ಖುಷಿಪಡುವ, ಅದನ್ನೇ ಶ್ರೇಷ್ಠತೆಯೆನ್ನುವ ಮನಸ್ಥಿತಿ ನಮ್ಮ ದಾಗಿಬಿಟ್ಟಿದೆ. ಒಂದು ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಯಾ ಹಂತದಲ್ಲಿ (ವಿವಿಧ ತರಗತಿಗಳಲ್ಲಿ) ಮಗು ಏನಾಗಿ ಬೆಳೆಯಬೇಕು, ಏನನ್ನು ರೂಢಿಸಿಕೊಳ್ಳಬೇಕು, ಏನನ್ನು ರೂಢಿಸಿಕೊಳ್ಳಬಾರದು ಮತ್ತು ಏನಾಗಿ ಬೆಳೆಯಬಾರದು ಎಂಬುದು ಕಲಿಕೆಯ ಮೂಲಭೂತ ಅಂಶ. ಅದು ಕಲಿಕಾ ಶಾಸ್ತ್ರ, ಶಿಕ್ಷಣ ಸಿದ್ಧಾಂತ, ಮನೋವಿಜ್ಞಾನವನ್ನು ಆಧರಿಸಿಯೇ ಇರುತ್ತದೆ. ಅದರರಿವು ಇಲ್ಲದೆ ಯಾವ ಶಾಲೆಗಳಲ್ಲಿ ಕೋಚಿಂಗ್‌, ವಿಶೇಷ ತರಗತಿಗಳು, ಹೆಚ್ಚುವರಿ ತರಗತಿಗಳು, ಹೆಚ್ಚೆಚ್ಚು ಹೋಂ ವರ್ಕ್‌, ಬೇಗ ಶಾಲಾರಂಭ ಇತ್ಯಾದಿಗಳನ್ನು ಉತ್ತಮ ಶಾಲೆಯ ಮಾನದಂಡಗಳೆಂದು ಪರಿಗಣಿಸುವ ಇಂದಿನ ಶೈಕ್ಷಣಿಕ ವ್ಯವಸ್ಥೆ ಎಂತಹ ನಾಗರಿಕರನ್ನು ಸೃಷ್ಟಿಸುತ್ತದೆ ಎಂಬ ವಿಚಾರ ಕಳವಳಕ್ಕೀಡುಮಾಡುವ ಸಂಗತಿ. ಕನಿಷ್ಠ ಪ್ರೌಢಶಾಲಾ ಹಂತದವರೆಗೆ ಓರ್ವ ವಿದ್ಯಾರ್ಥಿ ಜೀವಪ‌ರ ಕಾಳಜಿಯ ಮತ್ತು ಜೀವನ ಮೌಲ್ಯಗಳ ರೂಪವಾಗಿ ಬೆಳೆಯಬೇಕು. ಅಂಕ ಒಟ್ಟು ವಿಕಾಸದ ಅಥವಾ ಬೆಳವಣಿಗೆಯ ಸಣ್ಣ ಒಂದು ಭಾಗ. ಅದೆಲ್ಲವನ್ನೂ ಗಾಳಿಗೆ ತೂರಿ ಇಡೀ ವರ್ಷ ಕಲಿಕೆಯೆಂಬ ಹೆಸರಿನಲ್ಲಿ ನಡೆಸುವ ಎಲ್ಲಾ ವಿಧದ ಹೆಚ್ಚುವರಿ ಮತ್ತು ವಿಶೇಷ ತರಗತಿಗಳು ವಿದ್ಯಾರ್ಥಿ ಮತ್ತು ಮಾನವ ಹಕ್ಕಿನ ಮೇಲೆ ನಡೆಸುವ ಹಲ್ಲೆ. ಇಲ್ಲೆಲ್ಲ ಕಲಿಕೆ ನಡೆಯುತ್ತದೆಯೆನ್ನುವ ಭ್ರಮೆಯಲ್ಲಿ ನಾವಿರುತ್ತೇವೆ. ಎಲ್ಲವೂ ಸೋಗಿನ ರೀತಿಯಲ್ಲಿ ಸಾಗುವ ದಿನಚರಿಯಾಗುತ್ತದೆಯೇ ಹೊರತು ಬೇರೇನೂ ಸಾಧಿಸಿದಂತಾಗುವುದಿಲ್ಲ. ಮಕ್ಕಳು ಮಕ್ಕಳಂತೆಯೇ ಬೆಳೆಯುತ್ತಾ ಪ್ರೌಢರಾಗಬೇಕು. 

Advertisement

ಪ್ರೌಢಶಾಲಾ ಹಂತದ ನಂತರದ ಸ್ತರಗಳಲ್ಲಿ ವೃತ್ತಿ ಸಂಬಂಧವಾಗಿ, ಬದುಕಿನ ಹಿನ್ನೆಲೆಯಲ್ಲಿ ಏನು ಬೇಕು ಎಂಬುದನ್ನು ಆಯ್ದುಕೊಂಡು, ಕೇಂದ್ರೀಕರಿಸಿ ಮುನ್ನಡೆಯಬೇಕು. ಅದು ಬಿಟ್ಟು ಮಗುವಿನ ಎಲ್ಲಾ ಅನುಭವಗಳನ್ನು ಹೊಸಕಿ ಹಾಕಿ ಅನುಭವ ಶೂನ್ಯರಾಗುವಂತೆ ಬೆಳೆಸುವ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಶಾಲೆಗಳು ಶಾಲೆಗಳಾಗಿ ಉಳಿದಿಲ್ಲ, ಮಾರುಕಟ್ಟೆ ಗಳಾಗಿವೆ. ಈಗೀಗ ಇಂತಹ ಸೋಂಕು ಹಳ್ಳಿ ಪೇಟೆಗಳೆಂಬ ವ್ಯತ್ಯಾಸವಿಲ್ಲದೆ ಎಲ್ಲೆಡೆ ವ್ಯಾಪಿಸುತ್ತಿದೆ. ಆದರೆ ಇದೆಲ್ಲವನ್ನು ಸಾರ್ವತ್ರೀಕರಿಸಿ ಹೇಳುತ್ತಿಲ್ಲ. 

ಇದನ್ನೆಲ್ಲ ನೇರ್ಪುಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಸರ್ಕಾರ ಗಂಭೀರ ಚಿಂತನೆಗಳನ್ನು ನಡೆಸಬೇಕು. ಸ್ಪಷ್ಟವಾದ ಯೋಜನೆಗಳನ್ನು ಹಾಕಿಕೊಳ್ಳಬೇಕಾಗಿದೆ. ಅಂಕಿ-ಸಂಖ್ಯೆಗಳ ಆಧಾರದಲ್ಲಿ ನೀಡುವ ಯಾವ ಅಂಶಗಳೂ ಅಭಿವೃದ್ಧಿಯಲ್ಲ. ಅದೆಲ್ಲ ಭೌತಿಕ ವ್ಯವಸ್ಥೆಗಳ ವಿವರಗಳು. ಆವರಣ ಬೇಕು. ಆದರೆ ಹೂರಣವೇ ಇಲ್ಲವಾದರೆ? ಶಿಕ್ಷಣ ವ್ಯವಸ್ಥೆಯ ಸುಧಾರಣೆಯಲ್ಲಿ ಹೂರಣದ ಬಗೆಗಿನ ಯೋಜನೆಗಳು ಆದ್ಯತೆಯನ್ನು ಪಡೆಯಬೇಕು.

ರಾಮಕೃಷ್ಣ ಭಟ್‌ ಚೊಕ್ಕಾಡಿ

Advertisement

Udayavani is now on Telegram. Click here to join our channel and stay updated with the latest news.

Next