Advertisement

ಬಡ ಮಕ್ಕಳ ಕಲಿಕೆಗಾಗಿ ನಿಸ್ವಾರ್ಥ ಸೇವೆ

07:29 PM Jul 30, 2021 | Team Udayavani |

ವರದಿ : ದತ್ತು ಕಮ್ಮಾರ

Advertisement

ಕೊಪ್ಪಳ: ಕೋವಿಡ್‌ ಮಹಾಮಾರಿಯಿಂದಾಗಿ ಇಲ್ಲಿವರೆಗೂ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭವಾಗಿಲ್ಲ. ಇದರಿಂದ ಮಕ್ಕಳ ಭವಿಷ್ಯದ ಮೇಲೆ ಪೆಟ್ಟು ಬೀಳಲಾರಂಭಿಸಿದೆ. ಇದನ್ನು ಮನಗಂಡ ನಗರದ ಇಬ್ಬರು ಯುವಕರು ಹಲವು ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

ಕೊಪ್ಪಳದಲ್ಲಿಯೇ ಅತ್ಯಂತ ಹಿಂದುಳಿದ ಪ್ರದೇಶವೆನಿಸಿರುವ ಸಿದ್ದೇಶ್ವರ ನಗರ, ಬೇಲ್ದಾರ ಕಾಲೋನಿ, ಕಾಳಿದಾಸ ನಗರದಲ್ಲಿ ಸಾವಿರಾರು ಬಡ ಕುಟುಂಬಗಳು ವಾಸ ಮಾಡುತ್ತಿವೆ. ಎರಡು ವರ್ಷದಿಂದ ಕೋವಿಡ್‌-19 ಹಿನ್ನೆಲೆಯಲ್ಲಿ ಶಾಲೆಗಳು ಬಂದ್‌ ಆಗಿದ್ದರಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದೆ. ಇದರಿಂದ ಮಕ್ಕಳನ್ನು ಸುಧಾರಣೆ ಮಾಡುವುದೇ ಕಷ್ಟ ಎನ್ನುವಂತ ಪರಿಸ್ಥಿತಿಯಲ್ಲಿರುವಾಗ ವಿಠ್ಠಲ್‌ ಗೋಂದಳಿ, ಮಲ್ಲೇಶಪ್ಪ ಹದ್ದಿನ್‌ ಎನ್ನುವ ಇಬ್ಬರು ಯುವಕರು ಲಾಕ್‌ಡೌನ್‌ ಸಮಯದಿಂದ ಮಕ್ಕಳಿಗೆ ಅಕ್ಷರ ಕಲಿಸುವ ಕಾಯಕ ಆರಂಭಿಸಿದ್ದಾರೆ.

ಕೋವಿಡ್‌ ಸಮಯದಲ್ಲಿ ಮಕ್ಕಳು ನಿತ್ಯವೂ ಆಟದಲ್ಲೇ ಹೆಚ್ಚು ತೊಡಗುತ್ತಿದ್ದರು. ಅತ್ತ ಶಾಲೆಯೂ ಇಲ್ಲ. ಇತ್ತ ಮಕ್ಕಳಿಗೆ ಅಕ್ಷರ ಹೇಳಿ ಕೊಡುವವರೂ ಇಲ್ಲದ ಪರಿಸ್ಥಿತಿ ಅರಿತ ಈ ಇಬ್ಬರು ಯುವಕರು ಲಾಕ್‌ಡೌನ್‌ ಸಮಯವನ್ನು ವ್ಯರ್ಥ ಮಾಡದೇ ಮನೆಯ ಮಾಳಿಗೆ ಮೇಲೆ ಮಕ್ಕಳಿಗೆ ಉಚಿತವಾಗಿ ಪಠ್ಯ ಪಾಠ, ಪರಿಸರ ಸಂರಕ್ಷಣೆ, ಯೋಗ ಸೇರಿ ಇತರೆ ವಿಷಯಗಳನ್ನು ಹೇಳಿಕೊಡುತ್ತಿದ್ದಾರೆ. ಇವರು ಮಕ್ಕಳಿಗೆ ಅಕ್ಷರ ಕಲಿಸುವುದನ್ನು ನೋಡಿದ ಅಕ್ಕಪಕ್ಕದ ಓಣಿಯ ಪಾಲಕರೂ ತಮ್ಮ ಮಕ್ಕಳಿಗೂ ಅಭ್ಯಾಸ ಮಾಡಿಸುವಂತೆ ಮನವಿ ಮಾಡಿದ್ದಾರೆ. ಇದರಿಂದ ಮಕ್ಕಳ ಸಂಖ್ಯೆ ಹೆಚ್ಚಾದ ಕಾರಣ ಸಮೀಪದ ಕಾಳಿದಾಸ ಪ್ರೌಢಶಾಲೆ ಮೈದಾನದಲ್ಲಿ ಗಿಡದ ನೆರಳಲ್ಲಿ ನಿತ್ಯ ಬೆಳಗ್ಗೆ 6ರಿಂದ 9 ಗಂಟೆ, ಸಂಜೆ 5ರಿಂದ 7 ಗಂಟೆವರೆಗೂ ಸ್ಲಂ ಪ್ರದೇಶದ ಮಕ್ಕಳಿಗೆ ಉಚಿತವಾಗಿ ಅಕ್ಷರ ಕಲಿಸುವ ಕಾಯಕದಲ್ಲಿ ತೊಡಗಿದ್ದಾರೆ. ಯಾವುದೇ ಒಬ್ಬ ಪಾಲಕರಿಂದಲೂ ಮಕ್ಕಳ ಕಲಿಕೆಗೆ ಹಣ ಪಡೆದಿಲ್ಲ. ಎಲ್ಲವೂ ಉಚಿತವಾಗಿ ನಿಸ್ವಾರ್ಥ ಸೇವೆಯಿಂದ ಇವರು ಪಾಠ ಹೇಳಿಕೊಡುತ್ತಿರುವುದು ಪಾಲಕರರ ಮೆಚ್ಚುಗೆಗೆ ಕಾರಣವಾಗಿದೆ.

ಖಾಸಗಿ ಕೆಲಸದಲ್ಲಿ: ಮಲ್ಲೇಶಪ್ಪ ಹದ್ದಿನ್‌ ಎನ್ನುವರರು ಖಾಸಗಿಯಾಗಿ ಮಾನವ ಸಂಪನ್ಮೂಲ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ವಿಠ್ಠಪ್ಪ ಗೋಂದಳಿ ಎನ್ನುವರರು ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬರು ಪಿಯುಸಿ ಕಲಿತಿದ್ದರೆ, ಇನ್ನೊಬ್ಬರು ಎಂ.ಕಾಂ. ಕಲಿತ್ತಿದ್ದಾರೆ. ಲಾಕ್‌ಡೌನ್‌ ವೇಳೆ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಲು ಮಕ್ಕಳಿಗೆ ಪಾಠ ಬೋಧನೆ ಮಾಡುತ್ತಿದ್ದಾರೆ. ಇವರ ಬಳಿ ಈಗ ಎಲ್‌ಕೆಜಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಕಲಿಕೆಗೆ ಆಗಮಿಸುತ್ತಿದ್ದಾರೆ. ಯಾವೊಬ್ಬ ವಿದ್ಯಾರ್ಥಿಯಿಂದಲೂ ಹಣ ಪಡೆಯಲ್ಲ. ಪಾಲಕರೇ ಒತ್ತಾಯ ಮಾಡಿ ಹಣ ಕೊಡಲು ಮುಂದಾದರೂ ನಾವೇನು ದೊಡ್ಡ ಕೆಲಸ ಮಾಡಿಲ್ಲ. ಮಕ್ಕಳಿಗೆ ನಮಗೆ ಗೊತ್ತಿರುವಷ್ಟು ಅಕ್ಷರ ಕಲಿಸಿ ಕೊಡುತ್ತಿದ್ದೇವೆ. ಇದು ನಮಗೂ ಆತ್ಮತೃಪ್ತಿ, ಸಂತೋಷ ತರುತ್ತಿದೆ. ನಮಗಿರುವ ಜ್ಞಾನದಲ್ಲಿ ಅವರಿಗೆ ಸ್ವಲ್ಪ ಹೇಳಿಕೊಟ್ಟರೆ ನಾವು ಏನನ್ನೂ ಕಳೆದುಕೊಳ್ಳುವುದಿಲ್ಲ ಎಂದೆನ್ನುತ್ತಾರೆ.

Advertisement

ಯುವಕರು ಶಾಲಾ ಮೈದಾನದ ಗಿಡದ ನೆರಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕುಳಿತುಕೊಳ್ಳಲು ಹೇಳಿ, ಪಾಠ ಹಾಗೂ ಸಾಮಾಜಿಕ ಪ್ರಜ್ಞೆ ಮೂಡಿಸುತ್ತಿರುವುದು ನಿಜಕ್ಕೂ ಎಲ್ಲರ ಗಮನ ಸೆಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next