Advertisement

ಶೀಘ್ರ ಮಲಯಾಳ ಕಲಿಕೆ ಕಡ್ಡಾಯ ಅಧ್ಯಾದೇಶ ಕನ್ನಡಿಗರಲ್ಲಿ ಆತಂಕ 

02:24 PM Apr 07, 2017 | Team Udayavani |

ಕಾಸರಗೋಡು: ಅಧ್ಯಾದೇಶ (ಸುಗ್ರೀವಾಜ್ಞೆ) ಹಾಗು ಪೊಲೀಸ್‌ ಬಲ ಪ್ರಯೋಗದ ಮೂಲಕ ತನ್ನ ತೀರ್ಮಾನಗಳನ್ನು ಜನರ ಮೇಲೆ ಹೇರಿ ಸುದ್ದಿ ಮಾಡುತ್ತಿರುವ ಎಡರಂಗ ಸರಕಾರ ಇದೀಗ ಅಧ್ಯಾದೇಶದ ಮೂಲಕ ಮಲಯಾಳವನ್ನು ಕಡ್ಡಾಯಗೊಳಿಸಿ ಭಾಷಾ ಅಲ್ಪಸಂಖ್ಯಾಕರನ್ನು ದಮನಿಸಲು ತೀರ್ಮಾನಿಸಿದೆ. ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಹಾಗು ಸಿಬಿಎಸ್‌ಇ ಶಾಲೆಗಳಲ್ಲಿ ಮಲಯಾಳ ಕಲಿಕೆಯನ್ನು ಕಡ್ಡಾಯಗೊಳಿಸಲು ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ಸಭೆ ನಿರ್ಧರಿಸಿದೆ.

Advertisement

ರಾಜ್ಯದ ಕೆಲವು ಶಾಲೆಗಳಲ್ಲಿ ಮಲಯಾಳ ಬಳಕೆಗೆ ನಿಷೇಧವಿದೆಯಾದರೂ ಹಾಗೆಯೇ ಗಡಿಪ್ರದೇಶಗಳ ಶಾಲೆಗಳಲ್ಲಿ ಮಲಯಾಳ ಕಲಿಕೆಗೆ ಪರ್ಯಾಪ್ತವಾದ ಮೂಲ ಸೌಕರ್ಯ ಇಲ್ಲವೆಂದೂ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಲಯಾಳ ಕಲಿಕೆಯನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ.

ಇತ್ತೀಚೆಗೆ ಪೆರ್ಲ ಸಮೀಪದ ಪ್ರಾಥಮಿಕ ಶಾಲೆಯೊಂದರಲ್ಲಿ ಮಲಯಾಳವನ್ನು ಕಲಿಯಲು ಅಗತ್ಯವಾದ ವಿದ್ಯಾರ್ಥಿಗಳ ಕೊರತೆಯಿಂದ ಅಧ್ಯಾಪಕರ ಹುದ್ದೆ ರದ್ದಾಗುವುದೆಂದು ಅಧ್ಯಾಪಿಕೆ ಮುಖ್ಯಮಂತ್ರಿಯವರಿಗೆ ದೂರು ನೀಡಿದ್ದು ವರದಿಯಾಗಿತ್ತು. ಮಲಯಾಳ ಕಡ್ಡಾಯದ ಮೂಲಕ ಶಾಲೆಗಳಲ್ಲಿರುವ ಬಹುಸಂಖ್ಯಾತ ಕನ್ನಡ ವಿದ್ಯಾರ್ಥಿಗಳೂ ಮಲಯಾಳ ಕಲಿಯುವಂತೆ ಮಾಡಿ ಮಲಯಾಳ ಅಧ್ಯಾಪಕರ ಹುದ್ದೆಯನ್ನು ಉಳಿಸುವ ಹುನ್ನಾರದಿಂದ ಸರಕಾರ ಈ ತೀರ್ಮಾನ ಕೈಗೊಂಡಿದೆಯೆಂದು ಊಹಿಸಲಾಗಿದೆ.

ಭಾಷಾ ಅಲ್ಪಸಂಖ್ಯಾಕರ ಮೇಲೆ ಗದಾಪ್ರಹಾರ 
ಮಾತೃ ಭಾಷೆಯ ಬಗೆಗಿನ ಸಂವಿಧಾನದತ್ತ ಸಂರಕ್ಷಣೆ ದೊರೆಯದೆ ಅನುದಿನ ತಮ್ಮ ಭಾಷೆ, ಸಂಸ್ಕೃತಿ ಹಾಗು ಜೀವನವಕಾಶವನ್ನು ಕಳೆದುಕೊಳ್ಳುತ್ತಿರುವ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕ ಕನ್ನಡಿಗರಿಗೆ ಆಳುವ ಸರಕಾರದ ಮಲಯಾಳ ಕಡ್ಡಾಯ ತೀರ್ಮಾನ ಅಂತಿಮ ಗದಾಪ್ರಹಾರವಾಗಲಿದೆ. ತುಳು, ಕೊಂಕಣಿ, ಮರಾಠಿ, ಉರ್ದು ಮೊದಲಾದ ಮನೆ ಮಾತುಗಳ ಆಧಾರದಲ್ಲಿ ಹಾಗು ಪಕ್ಷ ಜಾತಿ ಮತಗಳ ಆಧಾರದಲ್ಲಿ ಗಡಿನಾಡಿನ ಕನ್ನಡಿಗರ ಐಕ್ಯವನ್ನು ಒಡೆಯುವಲ್ಲಿ ಬಹುತೇಕ ಯಶಸ್ವಿಯಾಗಿರುವ ಕೇರಳ ಸರಕಾರ ಆಡಳಿತ, ವ್ಯವಹಾರ ಮೊದಲಾದ ಪ್ರತಿಯೊಂದು ರಂಗಗಳಲ್ಲೂ ಮಲಯಾಳವನ್ನು ಕಡ್ಡಾಯಗೊಳಿಸಿ ಕನ್ನಡವನ್ನು ನಿರ್ಲಕ್ಷಿಸುವ ಮೂಲಕ ಮಲಯಾಳವನ್ನು ಕಲಿಯದಿದ್ದರೆ ಉಳಿಗಾಲವಿಲ್ಲವೆಂಬ ಪರಿಸ್ಥಿತಿಯನ್ನು ನಿರ್ಮಿಸಿತು. ಪ್ರಾಮಾಣಿಕ ಕನ್ನಡಪರ ಹೋರಾಟಗಳಿಗೆ ಕೈಜೋಡಿಸಿದ ತಮ್ಮ ಸ್ವಾರ್ಥ ಉದಾಸೀನಗಳಲ್ಲಿ ಮುಳುಗಿ ಹೋದ ಕನ್ನಡಿಗರೂ ಈಗ ಬಲಹೀನರಾಗಿರುವುದನ್ನು ಸರಕಾರ ಅರಿತುಕೊಂಡಿದೆ. 

ಭಾಷಾವಾರು ಪ್ರಾಂತ್ಯ ರಚನೆಯ ಅರುವತ್ತನೇ ವರ್ಷಾಚರಣೆ ಸಂದರ್ಭದಲ್ಲಿ ಒಂದೆಡೆ ಮಲಯಾಳಕ್ಕೆ ಸರ್ವ ಮನ್ನಣೆ ಪ್ರಾಪ್ತವಾಗುತ್ತಿದ್ದರೆ ಇನ್ನೊಂದೆಡೆ ಕನ್ನಡವನ್ನು ನಿರ್ಮೂಲನ ಮಾಡುವ ಸ್ಥಿತಿ ನಿರ್ಮಾಣಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next