Advertisement
“ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಹೊಸ ತಪ್ಪುಗಳನ್ನು ಮಾಡಲು ನಾನು ಓಪನ್ ಆಗಿದ್ದೇನೆ …’– ಹೀಗೆ ಹೇಳಿ ನಕ್ಕರು ಶರಣ್. ಶರಣ್ ಯಾವ ತಪ್ಪುಗಳನ್ನು ತಿದ್ದಿಕೊಂಡರು, ಮತ್ಯಾವ ಹೊಸ ತಪ್ಪು ಮಾಡಲು ಓಪನ್ ಆಗಿದ್ದಾರೆಂದು ನೀವು ಕೇಳಿದರೆ ಅದಕ್ಕೆ ಉತ್ತರ ಸಿನಿಮಾ ಮತ್ತು ಸಿನಿಮಾ. ನೀವು ಸೂಕ್ಷ್ಮವಾಗಿ ಗಮನಿಸಿದರೆ, “ಅಧ್ಯಕ್ಷ’ ನಂತರ ಶರಣ್ ಅವರ ಯಾವ ಚಿತ್ರವೂ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಸಿನಿಮಾ ಬಿಡುಗಡೆಗೆ ಮುಂಚೆ ಆ ಚಿತ್ರಗಳು ನಿರ್ಮಾಪಕರನ್ನು ಸೇಫ್ ಮಾಡಿರಬಹುದು. ಆದರೆ, ಥಿಯೇಟರ್‌ಗೆ ಬಂದ ನಂತರ ನಿರೀಕ್ಷಿತ ಮಟ್ಟ ತಲುಪಲೇ ಇಲ್ಲ. ಅದು “ರಾಜ ರಾಜೇಂದ್ರ’ ಆಗಿರಬಹುದು, “ಬುಲೆಟ್ ಬಸ್ಯಾ’ ಆಗಿರಬಹುದು ಅಥವಾ ಇತ್ತೀಚೆಗೆ ತೆರೆಕಂಡ “ರಾಜ್-ವಿಷ್ಣು’ನೇ ಆಗಿರಬಹುದು. ಈ ಚಿತ್ರಗಳಾÂವುವು ಚಿತ್ರಮಂದಿರಗಳಲ್ಲಿ ಹೆಚ್ಚು ದಿನ ನಿಲ್ಲಲೇ ಇಲ್ಲ. ಹಾಗಂತ ಶರಣ್‌ಗೆ ಇಲ್ಲಿಯವರೆಗೆ ಮಾಡಿರುವ ಯಾವ ಸಿನಿಮಾಗಳ ಬಗ್ಗೆಯೂ ಬೇಸರವಿಲ್ಲ.
Related Articles
Advertisement
ಸಿನಿಮಾಗಳ ಫಲಿತಾಂಶ ಏನೇ ಆದರೂ ಶರಣ್ ಮಾತ್ರ ಹೊಸ ಪ್ರಯೋಗ ಮಾಡೋದನ್ನು ನಿಲ್ಲಿಸೋದಿಲ್ಲವಂತೆ. ಹೊಸದನ್ನು ಹುಡುಕುತ್ತಲೇ ಸಾಗುತ್ತೇನೆ ಎನ್ನುತ್ತಾರೆ. “ಸೋಲು, ಗೆಲುವು ನಮ್ಮ ಕೈ ಮೀರಿರುವ ಅಂಶ. ಸೋಲಿಗೆ ಕಾರಣವನ್ನು ಹುಡುಕುತ್ತಿರುತ್ತೇನೆ. ಈಗಲೂ ಆ ಹುಡುಕಾಟ, ಅನ್ವೇಷಣೆಯಲ್ಲೇ ಇದ್ದೇನೆ. ಫಲಿತಾಂಶ ಏನೇ ಇರಬಹುದು. ಹೊಸ ಪ್ರಯತ್ನ ಮಾಡೋದು ನಿಲ್ಲಿಸೋದಿಲ್ಲ. ಒಂದು ಸಿನಿಮಾ ಚೆನ್ನಾಗಿ ಹೋದ ಕೂಡಲೇ ಆ ನಂತರದ ಸಿನಿಮಾ ಕೂಡಾ ಅದೇ ರೀತಿ ಹೋಗಬೇಕಿತ್ತು ಎಂದು ಬಯಸುತ್ತೇವೆ. ಇದು ಒಬ್ಬ ನಟನಿಗೆ ನಿಜಕ್ಕೂ ತುಂಬಾ ಸವಾಲು. ನನ್ನ ಕೆರಿಯರ್‌ನಲ್ಲಿ ಸಕ್ಸಸ್ ಒಂದೈದು ಪಾಠ ಕಲಿಸಿದರೆ, ಸೋಲು ಹತ್ತು ಪಾಠ ಕಲಿಸಿದೆ. ಎರಡರಿಂದಲೂ ಕಲಿತಿದ್ದೇನೆ. ಹಾಗಂತ ಹೊಸದನ್ನು ಹುಡುಕುವುದನ್ನು ನಿಲ್ಲಿಸೋದಿಲ್ಲ. ಸೋಲು-ಗೆಲುವಿನ ಆಯುಧ ಇಟ್ಟುಕೊಂಡು ಮುಂದಿನ ಸಿನಿಮಾದಲ್ಲೂ ಅದರ ಹುಡುಕಾಟದಲ್ಲೇ ಇರುತ್ತೇನೆ’ ಎನ್ನುತ್ತಾರೆ ಶರಣ್.
ಶರಣ್ ಅವರ ಇತ್ತೀಚಿನ ಸಿನಿಮಾಗಳನ್ನು ನೋಡಿದವರಿಗೆ ಶರಣ್ ಕಾಮಿಡಿಯಿಂದ ಆ್ಯಕ್ಷನ್‌ನತ್ತ ಹೋಗುತ್ತಿದ್ದಾರಾ ಎಂದು ಭಾಸವಾಗುವಂತಹ ಆ್ಯಕ್ಷನ್ ದೃಶ್ಯಗಳಿದ್ದವು. ಶರಣ್ ಹೇಳುವಂತೆ ಕಥೆಗೆ ಪೂರಕವಾದ್ದರಷ್ಟೇ ಆ್ಯಕ್ಷನ್ ದೃಶ್ಯಗಳಿಗೆ ಮನ್ನಣೆ ಕೊಡುತ್ತಾರಂತೆ. “ನಾನು ಕಾಮಿಡಿ ಬಿಟ್ಟು, ಶರಣ್ ಶೈಲಿ ಬಿಟ್ಟು ಯಾವ ಸಿನಿಮಾನೂ ಮಾಡಿಲ್ಲ. ನೀವು ಸೂಕ್ಷ್ಮವಾಗಿ ಗಮನಿಸಿದರೆ ನನ್ನ ಸಿನಿಮಾದ ಫೈಟಿಂಗ್ ಕೂಡಾ ಕಾಮಿಡಿ ಹಿನ್ನೆಲೆಯಲ್ಲೇ ಸಾಗುತ್ತದೆ. ಮೊದಲು ಒದೆ ತಿಂದು ಆ ನಂತರ ನಾನು ಹೊಡಿತೀನಿ. ಸಿನಿಮಾ ಎಲ್ಲಾ ಆಡಿಯನ್ಸ್‌ಗೂ ತಲುಪಬೇಕು. ನಿರ್ಮಾಪಕರಿಗೆ ಎಲ್ಲಾ ಏರಿಯಾ ರೀಚ್ ಆಗಬೇಕೆಂಬ ಆಸೆ ಇರುತ್ತದೆ. ಕೆಲವು ಸೆಂಟರ್‌ಗಳಿಂದ, “ಸಿನಿಮಾ ಸಖತ್ತಾಗಿದೆ ಒಂದು ಫೈಟ್ ಇದ್ದಿದ್ರೆ ಇನ್ನೂ ಚೆನ್ನಾಗಿರುತ್ತಿತ್ತು’ ಎಂಬ ಬೇಡಿಕೆ ಬರುತ್ತದೆ. ಆಗ “ಒಂದು ಕಾಮಿಡಿ ಫೈಟ್ ಆದರೂ ಇಡಬಹುದಿತ್ತಲ್ವಾ’ ಎಂಬ ಆಲೋಚನೆ ಬರುತ್ತದೆ. ಹಾಗಂತ ಸುಖಾಸುಮ್ಮನೆ ಫೈಟ್ ಸೀನ್ ಮಾಡೋಕೆ ಇಷ್ಟವಿಲ್ಲ. ಕಥೆಗೆ ಅಗತ್ಯವಾಗಿದ್ದರೆ ಮಾತ್ರ ಮಾಡಬೇಕು. ಈ ಹಿಂದೆ “ನಟರಾಜ ಸರ್ವೀಸ್’ನಲ್ಲಿ ಒಂದೇ ಒಂದು ಫೈಟ್ ಇರಲಿಲ್ಲ. ಆ ತರಹದ ಪ್ರಯತ್ನ ಕೂಡಾ ಮಾಡಿದ್ದೀನಿ. ಒಂದಂತೂ ಸ್ಪಷ್ಟಪಡಿಸುತ್ತೇನೆ, ಕಾಮಿಡಿ ಬಿಟ್ಟು ಹೊರ ಹೋದಾಗ ಮಾತ್ರ ಶರಣ್ ಮಿಸ್ ಆಗಬಹುದು. ಆ ಕೆಲಸ ಯಾವತ್ತೂ ಮಾಡಲ್ಲ’ ಅಂತಾರೆ.
ಶರಣ್ ನಾಯಕರಾಗಿರುವ “ಸತ್ಯ ಹರಿಶ್ಚಂದ್ರ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಈ ತಿಂಗಳ 20ಕ್ಕೆ ಬಿಡುಗಡೆಯಾಗುತ್ತಿದೆ.
– ರವಿ ಪ್ರಕಾಶ್ ರೈ