Advertisement

ಹೆಗ್ಗೋಡಿನ ನೀನಾಸಂನ ಶಿಬಿರದಲ್ಲಿ ಕಲಿಯುವ; ಸಂವಾದ ಸಂಸ್ಕೃತಿ

10:44 AM Oct 14, 2019 | mahesh |

ಕನ್ನಡನಾಡಿನ ಮಟ್ಟಿಗೆ ಗಂಭೀರವಾದ ಸಂಸ್ಕೃತಿ ಸಂವಾದ ನಡೆಯುವುದು ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ನೀನಾಸಂನಲ್ಲಿ. ರಂಗಭೂಮಿ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಆರಂಭವಾದ ಈ ಸಂಸ್ಥೆ ಇವತ್ತು ದೇಶದಲ್ಲಿಯೇ ಗಮನ ಸೆಳೆಯುವ “ಸಂಸ್ಕೃತಿ ಸಂವಾದ ಕೇಂದ್ರ’ವಾಗಿ ಬೆಳೆದಿದೆ. 80ರ ದಶಕದಲ್ಲಿ ಇಲ್ಲಿ ಫಿಲ್ಮ್ ಆ್ಯಂಡ್‌ ಥಿಯೇಟರ್‌ ಎಪ್ರಿಸಿಯೇಶನ್‌ ಶಿಬಿರ ಆರಂಭವಾಗಿತ್ತು. ಅದು 93-94ರ ಸುಮಾರಿಗೆ ಸಂಸ್ಕೃತಿ ಶಿಬಿರವಾಗಿ ವಿಸ್ತರಿಸಿಕೊಂಡಿತು. ಅಂದಿನಿಂದ ಇವತ್ತಿನವರೆಗೂ ಪ್ರತಿ ಅಕ್ಟೋಬರ್‌ನಲ್ಲಿ ಸಂಸ್ಕೃತಿ ಶಿಬಿರ ಆಯೋಜನೆಗೊಳ್ಳುತ್ತಿದೆ. ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜಾತ್ರೆಗಳಾಗುತ್ತಿರುವ ಈ ದಿನಗಳಲ್ಲಿ ಗಂಭೀರವಾಗಿ ಚರ್ಚೆಗಾಗಿಯೇ ಮೀಸಲಾಗಿರುವ ವಿರಳ ಕಾರ್ಯಕ್ರಮವಿದು. ದೇಶದ ಪ್ರಮುಖ ಸಂಸ್ಕೃತಿ ಚಿಂತಕರು ಇಲ್ಲಿ ಭಾಗವಹಿಸುತ್ತಾರೆ, ಉಪನ್ಯಾಸಗಳನ್ನು ನೀಡುತ್ತಾರೆ, ಶಿಬಿರಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸುತ್ತಾರೆ. ಸರಕಾರದ ಆಶ್ರಯವಿಲ್ಲದ, ಅಕಡೆಮಿಕ್‌ ವಲಯದಿಂದ ಹೊರತಾಗಿರುವ ಸಂಸ್ಥೆಯೊಂದು ಇಂಥ ಗಂಭೀರ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುತ್ತ ಬಂದಿರುವುದು ಗಮನಾರ್ಹ.

Advertisement

ಪ್ರತಿವರ್ಷ ಒಂದೊಂದು ವಿಷಯದ ಮೇಲೆ ಸಂವಾದವನ್ನು ಕೇಂದ್ರೀಕರಿಸಲಾಗುತ್ತದೆ. ಅದರಂತೆ ಕಳೆದ ಅ. 4ರಿಂದ 8ರವರೆಗೆ ಜರಗಿದ ಶಿಬಿರದಲ್ಲಿ “ಕಲಾನುಭವ’ವನ್ನು ಕೇಂದ್ರ ವಿಷಯವನ್ನಾಗಿ ಇರಿಸಲಾಗಿತ್ತು. ಕೆ. ಹರಿಹರನ್‌, ಸುಂದರ್‌ ಸರುಕ್ಕೆ„, ಟಿ. ಎಂ. ಕೃಷ್ಣ , ರುಸ್ತುಂ ಭರೂಚಾ, ಗೋಪಾಲ್‌ಗ‌ುರು, ಲಕ್ಷ್ಮೀಶ ತೋಳ್ಪಾಡಿ ಮುಂತಾದ ಸಂಸ್ಕೃತಿ ಚಿಂತಕರೊಂದಿಗೆ ಶಿಬಿರಾರ್ಥಿಗಳು ನಿಕಟವಾಗಿ ಚರ್ಚಿಸುವ ಅವಕಾಶ ಲಭ್ಯವಾಯಿತು.

ಜಗತ್ತಿನಾದ್ಯಂತ ಯಾವ ರೀತಿಯಲ್ಲಿ ಕಲೆಗಳ ಆಚರಣೆ, ಮಾನವಿಕ (ಆರ್ಟ್ಸ್) ಗಳ ಚಿಂತನೆ ನಡೆಯುತ್ತಿದೆ ಎಂದು ತಿಳಿಯಲು ಯುನೆಸ್ಕೊ ವರದಿಯೊಂದನ್ನು ಸಿದ್ಧಪಡಿಸುತ್ತಿದೆ. ವರ್ಲ್ಡ್ ಹ್ಯುಮ್ಯಾನಿಟೀಸ್‌ ರಿಪೋರ್ಟ್‌ 2019 ಎಂದು ಕರೆಯಲಾಗುತ್ತಿರುವ ಈ ಯೋಜನೆಯ ಭಾಗವಾಗಿ, ಕಳೆದ ತಿಂಗಳ ಕ್ರಿಯಾ ವಿಶ್ವವಿದ್ಯಾಲಯ (KREYA University) ಚೆನ್ನೈನಲ್ಲಿ ಈ ವರದಿಯ ಪೂರ್ವ ತಯಾರಿಯ ಚರ್ಚೆಯೊಂದನ್ನು ಏಪಡಿಸಿತ್ತು. ಆ ಚರ್ಚೆಯಲ್ಲಿ ಮೂಡಿ ಬಂದ ಒಂದು ಅಂಶವೇನೆಂದರೆ ಶೈಕ್ಷಣಿಕ ವಲಯಗಳ ಆಚೆ ಭಾರತ ಹಾಗೂ ದಕ್ಷಿಣ ಏಷ್ಯಾದಲ್ಲಿ “ಮಾನವಿಕ’ಗಳ ಕುರಿತ ಕೆಲಸ ನಡೆಯುತ್ತಿದೆ ಎಂಬುದು.

ಇಂಥ ಸಂದರ್ಭದಲ್ಲಿ ನನಗೆ ಒಮ್ಮೆಲೇ ನೆನಪಾಗಿದ್ದು, ಸಾಗರ ತಾಲೂಕಿನ ಹೆಗ್ಗೊàಡಿನ ನೀನಾಸಮ…. 1949ರಲ್ಲಿ ಪ್ರಾರಂಭವಾದ ಈ ಸಂಸ್ಥೆ ನಮ್ಮ ಯಾವ ಕಾಲೇಜು, ವಿಶ್ವವಿದ್ಯಾಲಯಗಳು ಮಾಡಲಾರದ ಕೆಲಸವನ್ನು ಸಾಂಸ್ಕೃತಿಕ ಲೋಕದಲ್ಲಿ ಮಾಡುತ್ತಿದೆ. ಕೇವಲ ಹವ್ಯಾಸಿ ರಂಗಚಟುವಟಿಕೆಯಾಗಿ ಪ್ರಾರಂಭವಾದ ಈ ಸಂಸ್ಥೆ ನಿಜವಾದ ಅರ್ಥದಲ್ಲಿ ಮಾನವಿಕ ಆಚರಣೆಗಳನ್ನು ಅನುಸರಿಸುತ್ತ ಬಂದಿದೆ. ಇಲ್ಲಿ “ಮಾನವಿಕ’ ಎನ್ನುವ ಸಂಗತಿಯನ್ನು ಶೈಕ್ಷಣಿಕ ಪರಿಭಾಷೆಯ ಆಚೆ ಮನುಷ್ಯ ಸೃಷ್ಟಿಸುವ ಕಲೆಗಳ ಆಚರಣೆ, ಮನುಷ್ಯ ಸಮಾಜದ ಕುರಿತು ಚಿಂತನೆ ಹಾಗೂ ಮನಸ್ಸುಗಳನ್ನು ಪೋಷಿಸುವ ಶಿಕ್ಷಣ ಎನ್ನುವ ಅರ್ಥದಲ್ಲಿ ಬಳಸುತ್ತಿದ್ದೇನೆ.

ಆಧುನಿಕ ಭಾರತದ ಇತಿಹಾಸದಲ್ಲಿ ಶೈಕ್ಷಣಿಕ ಸಂಸ್ಥೆಗಳು ಅನುಸರಿಸುತ್ತಿರುವ “ಮಾನವಿಕ’ಗಳ ಇತಿಹಾಸ ಒಂದು ರೀತಿಯದಾದರೆ, ನೀನಾಸಮ್‌ನಂತಹ ಸಂಸ್ಥೆಗಳು “ಮಾನವಿಕ’ ಗಳನ್ನು ಇನ್ನೊಂದು ರೀತಿಯಲ್ಲಿ ಜೀವಂತವಾಗಿಟ್ಟಿವೆ. ನೀನಾಸಮ್‌ನ ಎಲ್ಲಾ ಚಟುವಟಿಕೆಗಳನ್ನು ಮೆಲುಕುಹಾಕಲು ಇಲ್ಲಿ ಸಾಧ್ಯವಿಲ್ಲ. ನೀನಾಸಮ್‌ ಹೇಗೆ ಮಾನವಿಕಗಳ ಆಚರಣೆಗೆ ಅರ್ಥವನ್ನು ನೀಡುತ್ತಿದೆ ಎನ್ನುವ ವಿಚಾರವನ್ನು ಅದು 1992ರಿಂದ ನಡೆಸಿಕೊಂಡು ಬರುತ್ತಿರುವ “ಸಂಸ್ಕೃತಿ ಶಿಬಿರ’ದ ಮೇಲೆ ಪ್ರತಿಫ‌ಲನ ಮಾಡುತ್ತ ಹಂಚಿಕೊಳ್ಳುತ್ತೇನೆ.

Advertisement

ನೀನಾಸಮ್‌ ಸಂಸ್ಕೃತಿ ಶಿಬಿರದ ಇತಿಹಾಸವನ್ನು ಕಟ್ಟಿಕೊಡುವುದೇ ಒಂದು ಮಹಾಪ್ರಬಂಧಕ್ಕೆ ವಸ್ತುವಾಗುವಂತಿದೆ. ಪ್ರತಿವರ್ಷವೂ ಶಿಬಿರಕ್ಕೆ ಒಂದು ಕಥಾವಸ್ತು (ಥೀಮ್) ಇರುತ್ತದೆ. ಈ ವರ್ಷ ಅದು “ಕಲಾನುಭವ’ (ಎಕ್ಸ್‌ಪೀರಿಯನ್ಸಿಂಗ್‌ ಆರ್ಟ್‌) ಆಗಿತ್ತು. ಶಿಬಿರದ ಸಂರಚನಯೇ ವಿಶಿಷ್ಟವಾದುದು. ಐದು ದಿವಸಗಳೂ ಮುಂಜಾನೆ 9.30ಕ್ಕೆ ಪ್ರಾರಂಭವಾಗಿ, ರಾತ್ರಿ ನಾಟಕ ಪ್ರದರ್ಶನ ಮುಗಿಯುವ ಸರಿಸುಮಾರು 10 ಗಂಟೆಯವರೆಗೂ ಶಿಬಿರಾರ್ಥಿಗಳನ್ನು ಅಲ್ಲಿಯ ಚಟುವಟಿಕೆಗಳು ಹಿಡಿದಿಟ್ಟಿರುತ್ತವೆ. ಬಹುಶಃ ನಾವೆಲ್ಲರೂ ಈ ಶಿಬಿರದ ಸಮಯದಲ್ಲಿಯೇ ಅನಿಸುತ್ತೆ, ನಮ್ಮ ವಾಟ್ಸಾಪ್‌ ಮುಂತಾದ ಮಾಧ್ಯಮಗಳನ್ನು ಉಪಯೋಗಿಸದೇ ಇರುವುದು. ಅಷ್ಟು ತೀವ್ರವಾದ ಭಾಗವಹಿಸುವಿಕೆಯನ್ನು ಇಲ್ಲಿ ಅನುಭವಿಸಬಹುದು.

ದಿನದ ಹೊತ್ತಿನಲ್ಲಿ ಶಿಬಿರದ ಮುಖ್ಯ ಚರ್ಚೆಯ ವಿಷಯದ ಕುರಿತು ಉಪನ್ಯಾಸ, ಚಿಂತನೆ, ವಾಗ್ವಾದ. ನಂತರ ಪ್ರಾತ್ಯಕ್ಷಿಕೆಗಳ ಪ್ರದರ್ಶನ, ಸಾಯಂಕಾಲ ನಾಟಕಗಳ ಪ್ರದರ್ಶನ. ಇಲ್ಲಿ ಚಿಂತನೆ, ಕಲಾನುಭವ ಹಾಗೂ ಶಿಕ್ಷಣ ಏಕಕಾಲಕ್ಕೆ ನಡೆಯುತ್ತಿರುತ್ತದೆ. ಉದಾಹರಣೆಗೆ ಈ ವರ್ಷದ ಶಿಬಿರದಲ್ಲಿ ತಣ್ತೀಜ್ಞಾನಿಗಳು, ಸಂಸ್ಕೃತಿ ಚಿಂತಕರು ಕಲೆ, ಕಲಾನುಭವ ಕುರಿತು ಗಹನವಾದ ವಿಚಾರಗಳನ್ನು ಮಂಡಿಸಿದರು.

ಧಾರವಾಡ ಸೀಮೆಯಿಂದ ಬಂದ ನನಗೆ ಹಿಂದೂಸ್ತಾನಿ ಸಂಗೀತದ ಗೀಳು. ಇತ್ತಿತ್ತಲಾಗಿ ಕರ್ನಾಟಕ ಸಂಗೀತ ಆಲಿಸುವ ಪ್ರಯತ್ನ ಮಾಡಿ ವಿಫ‌ಲನಾಗಿದ್ದೆ. ಟಿ. ಎಮ್‌. ಕೃಷ್ಣ ಅವರ ಸಂಗೀತ ಪ್ರಾತ್ಯಕ್ಷಿಕೆ ನೋಡಿದ ಮೇಲೆ ಕರ್ನಾಟಕ ಸಂಗೀತ ಆಸ್ವಾದಿಸುವ ಕಲಾರಸಿಕ ನನ್ನಲ್ಲಿ ಹುಟ್ಟಿಕೊಂಡ. ಹೀಗೆ, ನನ್ನಂತೆ ಹಲವರಿಗೆ ಆ ರೀತಿಯ ಪರಿವರ್ತನೆ ಆಗುವುದಂತು ಖಂಡಿತ.

ನೀನಾಸಮ್‌ ತಿರುಗಾಟದ ನಾಟಕಗಳು ಈ ಶಿಬಿರದಲ್ಲಿ ಮೊತ್ತಮೊದಲು ಪ್ರಯೋಗಗೊಂಡು ಕರ್ನಾಟಕದ ಇನ್ನುಳಿದ ಪ್ರದೇಶಗಳಿಗೆ ತೆರಳುತ್ತವೆ. ಪ್ರತಿರಾತ್ರಿ ನಾಟಕ ನೋಡುವುದೇ ಒಂದು ಸಂಭ್ರಮ. ಮರುದಿನ ಆ ನಾಟಕದ ಕುರಿತು ಶಿಬಿರದಲ್ಲಿ ಚರ್ಚೆ ನಡೆಯುವುದು ರಂಗಶಿಕ್ಷಣದ ಉತ್ತಮ ರೂಢಿ ಎನಿಸಿದೆ. ಕಲಾನುಭವದ ಮೂಲಕ ನಮಗೆ ಒಂದು ಸೌಂದರ್ಯದ ಶಿಕ್ಷಣ ದೊರಕಿದರೆ, ಚರ್ಚೆಯಲ್ಲಿ ಚಿಂತನೆಯ ತರಬೇತಿ ಸಿಕ್ಕಿದಂತಾಯಿತು.

ಜಗತ್ತಿನಾದ್ಯಂತ “ಮಾನವಿಕ’ಗಳು ಬಿಕ್ಕಟ್ಟನ್ನು ಎದುರುಸುತ್ತಿರುವ ಕಾಲವಿದು. ಕಲೆ, ಶಿಕ್ಷಣ, ಮನಸ್ಸು ಕಟ್ಟುವ ವಿಚಾರ, ಚಿಂತನಶೀಲತೆ ಮೂಡಿಸುವ ಶಿಕ್ಷಣಕ್ಕೆ ಕುತ್ತು ಬಂದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ಕನ್ನಡದ ಮನಸ್ಸುಗಳನ್ನು ಕಟ್ಟುವುದು ಹೇಗೆ? ನೀನಾಸಮ್‌ ಸಂಸ್ಕೃತಿ ಶಿಬಿರ ಕನ್ನಡದ ಮನಸ್ಸುಗಳನ್ನು ಜಗದ್ವಲಯಕ್ಕೆ ವಿಸ್ತರಿಸುವ ಕೆಲಸ ಮಾಡುತ್ತಿದೆ. ಜಗತ್ತಿನ ವಿಚಾರಗಳು, ಕಲಾನುಭವಗಳು, ಚಿಂತನಶೀಲ ಮನಸ್ಸುಗಳು ಇಲ್ಲಿ ನಮ್ಮನ್ನು ಆವರಿಸುತ್ತವೆ. ಬಹುಧ್ವನಿ, ಬಹುತ್ವ ರೂಪಿಸುವ ಈ ಸಂಘಟನೆಯಲ್ಲಿ ಶಿಬಿರಾರ್ಥಿಗಳ ಮನಸ್ಸು ಪರಿವರ್ತನೆಗೊಳ್ಳದೇ ಇರದು.

ಯಾವ ಚಟುವಟಿಕೆಯೂ ಇಲ್ಲದೆ ವಿರಾಮದ ವೇಳೆಯಲ್ಲಿ, ಚಹಾ ಸೇವಿಸುವಾಗ, ಊಟ ಮಾಡುವಾಗ ಇತರರೊಡನೆ ಮಾತನಾಡುವುದು ಶಿಬಿರದಲ್ಲಿ ಒಂದು ಕಲಿಕೆಯ ಅನುಭವ. ವಿಶೇಷವಾಗಿ ನಾನು ಈ ಬಾರಿ ರಾತ್ರಿ ಊಟವಾದ ನಂತರ ಲಕ್ಷ್ಮೀಶ ತೋಳ್ಪಾಡಿಯವರ ಜೊತೆ ಮಾತನಾಡಿದ ವಿಷಯಗಳಾದ ಮಹಾಭಾರತ, ವಚನ ಚಳುವಳಿ, ಅವಧೂತಪ್ರಜ್ಞೆ ಇತ್ಯಾದಿಗಳು ನನ್ನ ಅಂತರಂಗವನ್ನು ಕಲಕಿವೆ. ಶಿಬಿರಕ್ಕೆ ಹೋಗುವ ಮೊದಲು ಇದ್ದ ನನ್ನ ಮನಸ್ಸು, ಲಕ್ಷ್ಮೀಶರ ಜೊತೆ ಮಾತನಾಡಿದ ನಂತರ ರೂಪಾಂತರಗೊಂಡಿದೆ. ನಾನು ಮೊದಲಿನಂತಿಲ್ಲ. ನಮ್ಮ ಮಾನವಿಕ ಶಿಕ್ಷಣ ಇದನ್ನೇ ಮಾಡಬೇಕಲ್ಲವೆ?

Advertisement

Udayavani is now on Telegram. Click here to join our channel and stay updated with the latest news.

Next