ಮೊಳಕಾಲ್ಮೂರು: ಭಾರತೀಯ ಜೀವನ ಪದ್ಧತಿಯಲ್ಲಿ ಹಾಸುಹೊಕ್ಕಾಗಿರುವ ಭಗವದ್ಗೀತೆಯ ಜತೆಗೆ ಗ್ರಂಥಗಳನ್ನೂ ಅಧ್ಯಯನ ಮಾಡಬೇಕು ಎಂದು ಆರ್‌ಎಸ್‌ಎಸ್ ಕರ್ನಾಟಕದ ದಕ್ಷಿಣ ಪ್ರಾಂತ್ಯದ ಸಹಪ್ರಾಂತ ಬೌದ್ಧಿಕ್ ಪ್ರಮುಖ್ ಕೃಷ್ಣಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಕ್ಷೇತ್ರ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಆಯೋಜಿಸಿದ್ದ ಪಥಸಂಚಲನ ಸಂದರ್ಭದಲ್ಲಿ ಅವರು ಮಾತನಾಡಿದರು. ಜಗತ್ತಿನ ಎಲ್ಲಾ ಮತಗಳಲ್ಲಿ ಶ್ರೇಷ್ಠ ವಿಚಾರಗಳಿದ್ದು ಕಾಲ ಕಾಲಕ್ಕೆ ತಪ್ಪುಗಳು ನುಸುಳಿಕೊಂಡಿವೆ. ಭಗವಾನ್ ಶ್ರೀಕೃಷ್ಣ, ಮಹಮ್ಮದ್ ಪೈಗಂಬರ್, ಏಸು ಕ್ರಿಸ್ತರು ಸತ್ಯವನ್ನೇ ಹೇಳಿದ್ದಾರೆ.
ಭಾರತವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಹೊರದೇಶದ ಕುರಾನ್ ಹಾಗೂ ಬೈಬಲ್ ಅರ್ಥ ಮಾಡಿಕೊಂಡರೆ ಸಾಲದು, ಭಾರತದ ಜೀವನ ಪದ್ಧತಿ, ಮಾತೃದೇವೋಭವ, ಪಿತೃದೇವೋಭವ, ಅತಿಥಿದೇವೋಭವ ಹಾಗೂ ಆಚಾರ್ಯ ದೇವೋಭವ ಎಂಬ ಧೇಯವಾಕ್ಯಗಳನ್ನು ಹಿಂದೂ ಪುರಾಣ ಗ್ರಂಥಗಳಲ್ಲಿ ಕಾಣಬಹುದು. ಹಿಂದೆ ಜಾತಿ-ಜಾತಿ ಹಾಗೂ ಭಾಷೆ-ಭಾಷೆಗಳ ನಡುವೆ ಜಗಳವಾಗುತ್ತಿತ್ತು. ಈ ಭೇದ ಭಾವವನ್ನು ನಿವಾರಿಸಿ ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡಿಸಲು ಡಾ| ಕೇಶವ ಬಲರಾಮ್ ಹೆಗಡೆವಾರ್ ಶ್ರಮಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಇಡೀ ಜಗತ್ತಿಗೆ ಪರಿಚಿತ ಸಂಘಟನೆಯಾಗಿದೆ. ಶಿಕ್ಷಣ ಹಾಗೂ ಶಿಸ್ತಿನ ಕಾರಣದಿಂದ ವಿಶ್ವ ವ್ಯಾಪಿಯಾಗಿ ಬೆಳೆದಿದೆ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾಹ ನಾಗರಾಜ್, ಸ್ವಯಂಸೇವಕರಾದ ಡಿ.ಎಂ. ಈಶ್ವರಪ್ಪ, ಜಯಪಾಲ್, ಡಾ| ಪಿ.ಎಂ. ಮಂಜುನಾಥ, ಪಪಂ ಅಧ್ಯಕ್ಷ ಪಿ. ಲಕ್ಷ್ಮಣ, ಟಿ.ಟಿ. ರವಿಕುಮಾರ್, ಕೆ. ತಿಪ್ಪೇಸ್ವಾಮಿ, ಬಿ.ಎನ್. ಮಂಜಣ್ಣ, ಶಾಂತಾರಾಂ ಬಸಾಪತಿ, ಕಿರಣ್ ಗಾಯಕವಾಡ್, ರಾಘವೇಂದ್ರ, ಕರಿಬಸಪ್ಪ, ನರೇಂದ್ರಬಾಬು, ಶ್ರೀರಾಮ ರೆಡ್ಡಿ, ಸಿದ್ಧಾರ್ಥ, ಅರ್ಜುನ್, ಭೀಮಣ್ಣ, ಪಿ.ಆರ್. ಸಿದ್ದಣ್ಣ, ಟೈಲರ್ ತಿಪ್ಪೇಸ್ವಾಮಿ, ಉಮೇಶ್ ಆಚಾರ್, ಕೆ.ಪಿ. ಗೋಪಾಲ್, ನವೀನ್‌ಕುಮಾರ್, ರಾಮಾಂಜನೇಯ, ಅಂಜಿನಪ್ಪ, ಹೊನ್ನಪ್ಪ, ಅಶ್ವಿನಿ ಮೊದಲಾದವರು ಭಾಗಹಿಸಿದ್ದರು.