Advertisement

ಎರಡನೇ ಹೆಜ್ಜೆಗೆ 17 ಹೊಸ ಮಕ್ಕಳ ಸೇರ್ಪಡೆ

06:40 PM Apr 07, 2021 | Team Udayavani

ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ…  ಚಿಕ್ಕಂದಿನಲ್ಲಿ ಕಲಿತ ಶ್ಲೋಕ. ಇದನ್ನ ಆಲಿಸುವಾಗ ಅಥವಾ ಹೇಳುವಾಗ ನಮ್ಮ ಕಣ್ಣ ಮುಂದೆ ಬರುವುದು ಗುರು. ಶಾಲೆಯ ಪಾಠ ಕಲಿಸುವವರೊಬ್ಬರೇ ಗುರುವಲ್ಲ. ಜೀವನದ ಮೌಲ್ಯಗಳನ್ನು ಕಲಿಸಿ, ನಮ್ಮ ಮುಂದಿನ ದಾರಿಯನ್ನು ಸುಗಮ ಮಾಡುವವರೂ ಗುರುಗಳೇ.

Advertisement

ಪ್ರತಿ ಯೊ ಬ್ಬರೂ ಜೀವನದಲ್ಲಿ ತಂದೆ ತಾಯಿಯ ಅನಂತರ ಪೂ ಜ್ಯ ನೀಯ ಸ್ಥಾನದಲ್ಲಿಟ್ಟು ಗೌರವಿಸುವುದು ಗುರುವನ್ನು. ಒಳ್ಳೆಯ ಶಿಕ್ಷಣ ಏನನ್ನಾದರು ಬದಲಾಯಿಸಬಹುದು. ಆದರೆ, ಒಳ್ಳೆಯ ಶಿಕ್ಷಕ ಎಲ್ಲವನ್ನೂ ಬದಲಾಯಿಸಬಲ್ಲರು.

ಅಂತಹ ಸದಾವಕಾಶ ನನಗೆ ಮಲೇಷ್ಯಾದಲ್ಲಿ ಒದಗಿಬಂದಿತು. ವಿದ್ಯಾದಾನವು ಪ್ರಧಾನವಾದದ್ದು. ಅದ ರಲ್ಲೂ ನಮ್ಮ ಭಾಷೆ ಕನ್ನಡವನ್ನು ಪಾಠ ಮಾಡುವುದು ಅತ್ಯಂತ ಪುಣ್ಯದ ಕೆಲಸವೆಂದರೆ ತಪ್ಪಾಗದು. ಬೆಳೆಯುವ ಪೈರು ಮೊಳಕೆಯಲ್ಲಿ  ಎಂಬಂತೆ, ಚಿಕ್ಕ ವಯಸ್ಸಿನಲ್ಲಿ ಕಲಿತ ವಿದ್ಯೆಗೆ ಆಯಸ್ಸು ಹೆಚ್ಚು. ಹಾಗೆಯೇ, ದೂರದ ಮಲೇಷ್ಯಾದಲ್ಲಿರುವ ನಮ್ಮ ಕನ್ನಡ ಮಕ್ಕಳಿಗೆ ಕನ್ನಡ ಕಲಿಸುವಾಗ ಏನೋ ಒಂದು ರೀತಿಯ ಹೆಮ್ಮೆ.

ಪುಟ್ಟ ಮಕ್ಕಳ ಆಸಕ್ತಿಯನ್ನು ಮೆಚ್ಚಲೇಬೇಕು. ಪ್ರತೀ ತರಗತಿ ಯಲ್ಲೂ ಅತ್ಯಂತ ಕುತೂಹಲ, ಶ್ರದ್ಧೆಯಿಂದ ಕನ್ನಡ ಕಲಿಯುವ ಪ್ರತಿಯೊಂದು ಮಕ್ಕಳಿಗೆ ನಾನು ಗುರುವೆಂದರೆ ನನ್ನ ಪುಣ್ಯವೇ ಸರಿ. ನನ್ನಂತೆಯೇ ಕನ್ನಡದ ದಾಹವಿರುವ ಕನ್ನಡಿಗರು ಸೇರಿ ಸರಿಸುಮಾರು 9 ಮಂದಿ ಶಿಕ್ಷಕ ಗೆಳೆಯರಾಗಿದ್ದೇವೆ. ನಮ್ಮಲ್ಲಿರುವವರಾರು ವೃತ್ತಿಯಲ್ಲಿ ಮೊದಲಿಂದ ಶಿಕ್ಷಕರಾದವರಲ್ಲ. ಆದರೆ ನಮ್ಮ ಆತ್ಮವಿಶ್ವಾಸ, ಕನ್ನಡದ ವ್ಯಾಮೋಹ, ವಿದ್ಯೆ ದಾನ ಮಾಡಬೇಕೆಂಬ ಧ್ಯೇಯ ಮತ್ತು ಮಕ್ಕಳು ಕನ್ನಡ ಕಲಿಯಬೇಕೆಂಬ ಹಂಬಲ ನಮ್ಮನ್ನು ಸುಮ್ಮನಿರಲು ಬಿಡಲಿಲ್ಲ. ಈ ನಮ್ಮ ಛಲಕ್ಕೆ ಮೊದಲು ಸ್ಪಂದಿಸಿದ ಮಕ್ಕಳು 32 ಮಂದಿ. ಅಲ್ಲದೆ ಕರುನಾಡಿನಲ್ಲಿ ಇಲ್ಲದಿದ್ದರೂ, ಕನ್ನಡ ಬಗೆಗಿನ ವ್ಯಾಮೋಹ ಸ್ವಲ್ಪವೂ ಕರಗಿರದ ಪೋಷಕರು ನಮ್ಮ ಯಶಸ್ಸಿನ ದಾರಿಯಾದರು.

ಪಠ್ಯಕ್ರಮವನ್ನು ಅರಿತ ನಾವು ಮೊದಲು ಕೈ ಹಾಕಿದ್ದು ಸ್ವರಬಲ್ಲ-1 ಎಂಬ ಪುಟ್ಟ ಜಾಲಕ್ಕೆ. 12 ಕಂತೆಗಳಿರುವ ಪಠ್ಯಕ್ರಮ. ಮೊದಮೊದಲು ಎಲ್ಲೋ ಸ್ವಲ್ಪ ಕಷ್ಟವಾದರೂ ಹೋಗುತ್ತಿದ್ದಂತೆ ಮಕ್ಕಳ ಆಸಕ್ತಿ, ವಯಸ್ಸಿಗೆ ತಕ್ಕಂತೆ ನಮ್ಮ ಬೋಧನ ಶೈಲಿಗೆ ಹೊಸ ರೂಪ ಕೊಟ್ಟೆವು.

Advertisement

ಪುಟ್ಟ ಪುಟ್ಟ ಕಥೆಯ ಮೂಲಕ ಪ್ರಾರಂಭವಾದ ನಮ್ಮ ತರಗತಿಯು ಇಂದು ಮಕ್ಕಳು ಬಣ್ಣ, ಸಂಬಂಧ, ಅಂಕಿ, ಕಾಗುಣಿತ, ಒತ್ತಕ್ಷರ ಹೀಗೆ ಹಲವಾರು ವಿಷಯಗಳನ್ನು ಕಲಿತಿದ್ದಾರೆ. ಕನ್ನಡದಲ್ಲಿ ಬರೆಯುವುದನ್ನು, ಓದುವುದನ್ನು ಚೆನ್ನಾಗಿ ಅರಿತಿದ್ದಾರೆ.

ಅನಂತರ ಪರೀಕ್ಷೆಯನ್ನೂ ಮಾಡಿಸಿದೆವು. ನಮ್ಮ ಪ್ರಯತ್ನಕ್ಕೆ ಫ‌ಲಿತಾಂಶ ಏನೆಂದು ಪರೀಕ್ಷೆಯಿಂದ ತಿಳಿದುಬಂದಿತು. ಎಲ್ಲ ಮಕ್ಕಳು ಬಹಳ ಅದ್ಭುತವಾಗಿ ಉತ್ತರಿಸಿ ಹೆಚ್ಚು ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. ಇದರಿಂದ ಮಕ್ಕಳು ಮತ್ತು ಪೋಷಕರಿಗಿಂತ ಹೆಚ್ಚಾಗಿ ಸಂತೋಷಪಟ್ಟಿದ್ದು ನಾನು ಮತ್ತು ನನ್ನ ಸಹಶಿಕ್ಷಕರು.

ಸದ್ಯದಲ್ಲೇ ನಾವು ಸ್ವರಬಲ್ಲ- 2 ಎಂಬ ಎರಡನೇ ಹೆಜ್ಜೆಗೆ ಕಾಲಿಡುತ್ತಿದ್ದೇವೆ. ಜತೆಗೆ ಹೊಸದಾಗಿ 17 ಮಕ್ಕಳು ಕನ್ನಡ ಎಂಬ ಸಿಹಿಯಾದ ಪೂಜ್ಯ ನದಿಯಲ್ಲಿ ಮಿಂದು, ಕನ್ನಡದ ಪ್ರತಿಯೊಂದು ಹನಿಯನ್ನು ಅರಿತು, ಕುಡಿಯುವ ದಾರಿಯಲ್ಲಿದ್ದಾರೆ. ಮಕ್ಕಳನ್ನು ಕೇಳುವಾಗ  ನೀವೇ ನಮಗೆ ಮುಂದಿನ ತರಗತಿಗಳನ್ನು ಕಲಿಸಬೇಕು ಎಂದಾಗ ನಮ್ಮ ಖುಷಿಗೆ ಮಿತಿಯೇ ಇಲ್ಲ. ಈ  ಒಂದು ತೃಪ್ತಿಯು ಯಾವುದೇ ಸಂಬಳ, ಪ್ರಶಂಸೆಗೂ ಮಿಗಿಲಾದುದ್ದು. ಇದು ಕೇವಲ ನನ್ನೊಬ್ಬಳ ಅನುಭವವಲ್ಲ. ನಾವೆಲ್ಲರೂ ಇಂತಹ ಸುಖಕರವಾದ ಹಲವಾರು ಸಂಗತಿಗಳನ್ನು ಅನುಭವಿಸಿದ್ದೇವೆ. ಮಕ್ಕಳ ಜತೆಗಿದ್ದು ಕಲಿಸುವಾಗ ಅದೆಷ್ಟೋ  ವಿಷಯಗಳನ್ನು ನಾವು ಅವರಿಗೆ ಹೇಳುವುದಲ್ಲದೆ, ಅವರಿಂದಲೂ ಹಲವಾರು ವಿಷಯಗಳನ್ನು ಕಲಿತಿದ್ದೇವೆ. ವಾರದಲ್ಲಿ 1 ಗಂಟೆಯಷ್ಟೇ ಮಕ್ಕಳು, ನಾವು ಜತೆಯಾಗುವುದು. ಆದರೆ ನಮಗೆ ಸಿಗು ವ 1 ಗಂಟೆಯಲ್ಲಿ ಮಕ್ಕಳ ಜತೆ ನಾವು ಮಕ್ಕಳಾಗುತ್ತೇವೆ.

ಇದರಿಂದ ನಾವು ಪಡೆದುಕೊಳ್ಳುವುದೇ ಹೊರತು, ಕಳೆದುಕೊಳ್ಳುವುದು ಏನೂ ಇಲ್ಲ. ಹಾಗಾಗಿ ನಮಗೆ ಅವಕಾಶ ಸಿಕ್ಕಾಗಲೆಲ್ಲ, ಕನ್ನಡ ತಾಯಿಗೆ ಅರ್ಪಿಸುವ ಅಳಿಲು ಸೇವೆಯಂತೆ ನಮ್ಮ ಭಾಷೆಯನ್ನು ಪಸರಿಸುವ ಪುಟ್ಟ  ಪ್ರಯತ್ನವಷ್ಟೇ.

 

ಸುಚಿತ್ರಾ, ಮಲೇಷ್ಯಾ

Advertisement

Udayavani is now on Telegram. Click here to join our channel and stay updated with the latest news.

Next