ಹೊಸದಿಲ್ಲಿ: ಸೆಪ್ಟಂಬರ್‌ನಲ್ಲಿ ಪಾಕಿಸ್ಥಾನದಲ್ಲಿ ನಡೆಯಬೇಕಿದ್ದ ಭಾರತ-ಪಾಕಿಸ್ಥಾನ ಡೇವಿಸ್ ಕಪ್ ಟೆನಿಸ್ ಪಂದ್ಯಾವಳಿ ಇದೀಗ ನವೆಂಬರ್‌ಗೆ ಮುಂದೂಡಲ್ಪಟ್ಟಿದೆ. ಭದ್ರತಾ ಕಾರಣದಿಂದ ಪಾಕಿಸ್ಥಾನದಲ್ಲಿ ಆಡಲು ಭಾರತೀಯ ಆಟಗಾರರು ನಿರಾಕರಿಸಿದ್ದಾರೆ. ಆದ್ದರಿಂದ ಪಂದ್ಯ ಎಲ್ಲಿ ನಡೆಯಲಿದೆ ಎನ್ನುವುದು ಇನ್ನೂ ಖಚಿತಗೊಂಡಿಲ್ಲ.
ಈ ನಡುವೆಯೇ ಭಾರತ ತಂಡದಿಂದ ಹೊರಬಿದ್ದಿರುವ ಟೆನಿಸ್ ದಂತಕತೆ ಲಿಯಾಂಡರ್ ಪೇಸ್ ತಾನು ಡೇವಿಸ್ ಕಪ್ ತಂಡದಲ್ಲಿ ಆಡಲು ಸಿದ್ಧ ಎಂದು ಘೋಷಿಸಿದ್ದಾರೆ. 2018 ಎಪ್ರಿಲ್‌ನಿಂದ ಅವರು ಭಾರತ ತಂಡದಲ್ಲಿ ಆಡಿರಲಿಲ್ಲ. ಆದರೆ ಪೇಸ್ ತಂಡಕ್ಕೆ ಆಯ್ಕೆಯಾಗುವರೇ, ಇಲ್ಲವೇ ಎನ್ನುವುದನ್ನು ಕಾಲವೇ ನಿರ್ಧರಿಸಬೇಕು.
ಲಿಯಾಂಡರ್ ಪೇಸ್ ಮತ್ತು ತಂಡದ ನಾಯಕ ಮಹೇಶ್ ಭೂಪತಿ ನಡುವಿನ ಸಂಬಂಧ ಹೇಳಿಕೊಳ್ಳುವಂತಿಲ್ಲ. ಜತೆಗೆ ಇತರ ಕೆಲವು ಆಟಗಾರರೂ ಪೇಸ್ ಬಗ್ಗೆ ಹಿಂಜರಿಕೆ ಹೊಂದಿದ್ದಾರೆ. ಇದು ಹಿಂದಿನ ಕೂಟಗಳ ಸಂದರ್ಭದಲ್ಲಿ ಸಾಬೀತಾಗಿದೆ. ಆದ್ದರಿಂದ ಪೇಸ್ ತಾನು ಲಭ್ಯ ಎಂದು ಘೋಷಿ ಸಿರುವುದು ಮತ್ತೂಂದು ಬಿಕ್ಕಟ್ಟಿಗೆ ಕಾರಣವಾಗಬಹುದು. ಪುನಃ ಒಳಜಗಳ ಹುಟ್ಟಿಕೊಳ್ಳಬಹುದು.
ಇಕ್ಕಟ್ಟಿನಲ್ಲಿ ಭಾರತ
ಡೇವಿಸ್ ಕಪ್ ಪಂದ್ಯ ನ. 29, 30ರಂದು ನಡೆಯಲಿದೆ. ನಿಯಮಗಳ ಪ್ರಕಾರ ಪಂದ್ಯ ಪಾಕಿಸ್ಥಾನದಲ್ಲಿ ನಡೆಯಬೇಕು, ಅಲ್ಲಿ ಭಾರತ ಯಾವುದೇ ಕಾರಣ ನೀಡದೇ ಆಡಬೇಕು. ಆದರೆ ಎರಡೂ ದೇಶಗಳ ನಡುವೆ ಪರಿಸ್ಥಿತಿ ತೀವ್ರ ಹದಗೆಟ್ಟಿ ರುವುದರಿಂದ ಭಾರತ ತಂಡದ ನಾಯಕ ಭೂಪತಿ ಪಾಕ್‌ನಲ್ಲಿ ಆಡಲು ಸಾಧ್ಯವೇ ಇಲ್ಲ, ಆದ್ದರಿಂದ ತಟಸ್ಥತಾಣ ಹುಡುಕಿ ಎಂದು ವಿನಂತಿಸಿದ್ದಾರೆ.
ಡೇವಿಸ್ ಕಪ್ ವಿಶ್ವಕೂಟವಾಗಿ ರುವುದರಿಂದ ಹೀಗೆ ಮಾಡಲು ಸಾಧ್ಯವಿಲ್ಲ. ಒಂದುವೇಳೆ ಭಾರತ ಕೂಟದಿಂದ ಹಿಂದೆ ಸರಿದರೆ ಅಂಕ ಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಪಾಕ್‌ನಲ್ಲಿ ಆಡಲು ಸಾಧ್ಯವಿಲ್ಲದ ವಾತಾವರಣವಿದೆ.