Advertisement
ಶಿಥಿಲಾವಸ್ಥೆ ಕಟ್ಟಡದಲ್ಲಿ ಇರುವ ಜ್ಞಾನದ ಮಾಳಿಗೆ ಮಳೆ ನೀರಿನಿಂದ ಸೋರುತ್ತಿದೆ. ದಿನಪತ್ರಿಕೆ ಇಡಲು ಸ್ಥಳಾವಕಾಶ ಇಲ್ಲವಾಗಿದೆ. ಐತಿಹಾಸಿಕ ಕಾದಂಬರಿಗಳು ಗೋಣಿ ಚೀಲದಲ್ಲಿ ಮೂಲೆ ಸೇರಿವೆ. ನಗರದ ಪುರಸಭೆ ಹತ್ತಿರ ಹೃದಯ ಭಾಗದ ಕಿತ್ತೂರ ಚೆನ್ನಮ್ಮ ರಸ್ತೆಯ ಬದಿಯಲ್ಲಿರುವ ಕೇಂದ್ರ ಗ್ರಂಥಾಲಯ ದುಸ್ಥಿತಿ ಇದು. ಅತೀ ವೇಗವಾಗಿ ಬೆಳೆಯುತ್ತಿರುವ ಚಿಕ್ಕೋಡಿ ನಗರದಲ್ಲಿ ಜ್ಞಾನ ಭಂಡಾರ ಒದಗಿಸುವ ಸುಂದರವಾದಂತಹ ಗ್ರಂಥಾಲಯ ನಗರದ ಜನರಿಗೆ ಮರೀಚಿಕೆಯಾಗಿದೆ.
Related Articles
Advertisement
43 ಸಾವಿರ ಪುಸ್ತಕಗಳು: ಶಿಥಿಲಾವಸ್ಥೆ ಕಂಡಿರುವ ಈ ಹಳೆಯದಾದ ಕೇಂದ್ರ ಗ್ರಂಥಾಲಯದಲ್ಲಿ ಸಾಮಾನ್ಯ, ಪರಾಮರ್ಶೆ ಗ್ರಂಥಗಳು, ಕಾದಂಬರಿಗಳು ಮತ್ತು ವಿವಿಧ ಪಠ್ಯ-ಪುಸ್ತಕಗಳು ಸೇರಿ ಸುಮಾರು 43 ಸಾವಿರ ಬೆಲೆ ಬಾಳುವ ಪುಸ್ತಕಗಳು ದಾಖಲಿವೆ. ಹೊಸದಾಗಿ ಬಂದಿರುವ ಎರಡು ಸಾವಿರ ಪುಸ್ತಕಗಳನ್ನು ಇಟ್ಟುಕೊಳ್ಳಲು ಸ್ಥಳದ ಅಭಾವ ಇರುವುದರಿಂದ ಎಲ್ಲ ಪುಸ್ತಕಗಳನ್ನು ಚೀಲದಲ್ಲಿ ತುಂಬಿ ಇಟ್ಟಿದ್ದಾರೆ. ಪ್ರತಿನಿತ್ಯ 16 ದಿನಪತ್ರಿಕೆಗಳು ಬರುತ್ತವೆ. ಅದರಲ್ಲಿ 10 ಕನ್ನಡ ಪತ್ರಿಕೆಗಳು, 3 ಮರಾಠಿ, 3 ಇಂಗ್ಲಿಷ್ ಸೇರಿವೆ. ಇನ್ನೂ ವಾರ ಪತ್ರಿಕೆ, ಮಾಸಿಕ ಪತ್ರಿಕೆ, ಪಾಕ್ಷಿಕ, ಸರಕಾರದ ವಾರ್ತಾ ಪತ್ರ ಸೇರಿ ಸುಮಾರು 50 ಪತ್ರಿಕೆಗಳು ಗ್ರಂಥಾಲಯಕ್ಕೆ ಬರುತ್ತವೆ.
2450 ಜನ ಸದಸ್ಯರು: ಜಿಲ್ಲಾ ಕೇಂದ್ರವಾಗಿರುವ ಚಿಕ್ಕೋಡಿ ನಗರದಲ್ಲಿ ಎಲ್ಲ ಜಿಲ್ಲಾ ಕಚೇರಿಗಳು ಇರುವುದರಿಂದ ಹೆಚ್ಚಿನ ಜನ ಓದುಗರು ಗ್ರಂಥಾಲಯಕ್ಕೆ ಬರುತ್ತಾರೆ. ಈಗಾಗಲೇ ಅಧಿಕೃತವಾಗಿ ಗ್ರಂಥಾಲಯಕ್ಕೆ 2,450 ಜನ ಸದಸ್ಯರಿದ್ದಾರೆ. ಇವರು ಮೂರು ನಾಲ್ಕೈದು ದಿನಗಳಿಗೊಮ್ಮೆ ಬಂದು ಪುಸ್ತಕ ಬದಲಿಸಿಕೊಂಡು ಹೋಗುತ್ತಾರೆ. ದಿನ ನಿತ್ಯ 150 ಜನ ಶಾಲಾ ಕಾಲೇಜಿನ ಯುವಕರು, 200 ಜನ ಹಿರಿಯ ನಾಗರಿಕರು ಈ ಗ್ರಂಥಾಲಯಕ್ಕೆ ಓದಲು ಬರುತ್ತಾರೆ. ಈ ಗ್ರಂಥಾಲಯದಲ್ಲಿ ಹೆಚ್ಚಿನ ಜನ ಯುವಕರು ಮತ್ತು ಹಿರಿಯ ನಾಗರಿಕರು ಬರುವುದರಿಂದ ಮಹಿಳೆಯರಿಗೆ ಓದಲು ಪ್ರತ್ಯೇಕ ಕೊಠಡಿ ಇಲ್ಲವಾಗಿದೆ. ಓದಲು ಬರುವ ಮಹಿಳೆಯರು ಹೊರಗೆ ನಿಂತುಕೊಂಡು ಗ್ರಂಥ ಪಾಲಕರ ಬಳಿ ಪುಸ್ತಕ ತೆಗೆದುಕೊಂಡು ಮನೆಗೆ ತೆರಳುವ ಸನ್ನಿವೇಶ ಸಾಮಾನ್ಯವಾಗಿದೆ.
ಜಿಲ್ಲಾ ಕೇಂದ್ರ ಗ್ರಂಥಾಲಯ ಇರುವ ಕಟ್ಟಡ ಶಿಥಿಲಾವಸ್ಥೆ ಕಂಡಿದ್ದು, ಮಳೆ ಬಂದರೆ ಎಲ್ಲ ಪುಸ್ತಕಗಳು ನೀರಿನಲ್ಲಿ ನೆನೆದು ಹಾಳಾಗುತ್ತಿವೆ. ಹೀಗಾಗಿ ಹೊಸ ಕಟ್ಟಡ ನಿರ್ಮಿಸಲು ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ಧವಿದೆ. ದೊಡ್ಡ ಗ್ರಂಥಾಲಯ ನಿರ್ಮಿಸಬೇಕೆಂಬ ಉದ್ದೇಶದಿಂದ ಹೊಸ ಕಟ್ಟಡ ನನೆಗುದಿಗೆ ಬಿದ್ದಿದೆ. ಶೀಘ್ರವಾಗಿ ಸ್ಥಳೀಯ ಜನಪ್ರತಿನಿಧಿ ಗಳೊಂದಿಗೆ ಚರ್ಚೆ ನಡೆಸಿ ಹೊಸ ಕಟ್ಟಡ ನಿರ್ಮಿಸಲಾಗುತ್ತದೆ. – ಜಿ.ರಾಮಯ್ಯ, ಉಪನಿರ್ದೇಶಕರು ಸಾರ್ವಜನಿಕ ಜಿಲ್ಲಾ ಕೇಂದ್ರ ಗ್ರಂಥಾಲಯ ಬೆಳಗಾವಿ
-ಮಹಾದೇವ ಪೂಜೇರಿ