ನರೇಗಲ್ಲ: ಅಲ್ಲಲ್ಲಿ ಬಿರುಕುಬಿಟ್ಟ ಗೋಡೆ, ಮಳೆ ಬಂದಾಗ ತೊಟ್ಟಿಕ್ಕುವ ಛಾವಣಿ, ಪುಂಡರ ಹಾವಳಿಗೆ ಮುರಿದು ಬಿದ್ದ ಕಿಟಕಿ, ಬಾಗಿಲು. ಇದು ಏಳು ದಶಕದಷ್ಟು ಹಳೆಯದಾದ ಸಮೀಪದ ಜಕ್ಕಲಿ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ.
ಈ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ನೆಲಹಾಸು ಕಿತ್ತು ಬರುತ್ತಿವೆ. ಶಾಲೆ ಸುಣ್ಣಬಣ್ಣ ಕಂಡು ಹಲವು ವರ್ಷಗಳೇ ಕಳೆದಿವೆ. ಹೀಗಿದ್ದರೂ ಮಕ್ಕಳು ಕೈಯಲ್ಲಿ ಜೀವ ಹಿಡಿದು ಪಾಠ ಕೇಳಲು ಬೆಳಗ್ಗೆಯಿಂದ ಸಂಜೆವರೆಗೆಕುಳಿತುಕೊಳ್ಳಬೇಕಾಗಿದೆ. ಕಟ್ಟಡದ ಆಯಸ್ಸು ಮುಗಿದಿದ್ದರೂ ಸಂಬಂ ಧಿತ ಸ್ಥಳೀಯ ಜನಪ್ರತಿನಿ ಧಿಗಳು ಹಾಗೂ ಅಧಿಕಾರಿಗಳು ಕಟ್ಟಡ ದುರಸ್ತಿಗೊಳಿಸಿ ಮಕ್ಕಳಿಗೆ ಉತ್ತಮ ಶಾಲಾ ಪರಿಸರ ನೀಡುವ ಗೋಜಿಗೆ ಹೋಗಿಲ್ಲ. 1ರಿಂದ 5 ತರಗತಿ ವರಗೆ 15 ಬಡ ಮಕ್ಕಳು ಅಭ್ಯಾಸ ಮಾಡುತ್ತಾರೆ. 1 ಶಿಕ್ಷಕ, 1 ಅತಿಥಿ ಶಿಕ್ಷಕಿ ಭಯದಲ್ಲಿ ಪಾಠ ಮಾಡುವಂತಾಗಿದೆ.
1938ರಲ್ಲಿ ಆಂಭಗೊಂಡ ಈ ಶಾಲೆಯ ಎಲ್ಲ ಮೂರು ಕೊಠಡಿಗಳು ಸಂಪೂರ್ಣ ಶಿಥಲಾವ್ಯಸ್ಥೆಗೆ ತಲುಪ್ಪಿದ್ದು, ಅದರಲ್ಲಿನ ಬಹುತೇಕ ಕೊಠಡಿಗಳು ಬಿರುಕು ಬಿಟ್ಟಿದ್ದು, ಬೀಳುವ ಹಂತಕ್ಕೆ ತಲುಪಿದೆ. ಶಾಲೆ ಮೇಲಿನ ಛಾವಣಿ ಸಿಮೆಂಟ್ ತುಕುಡಿ ಉದುರಿ ಬೀಳುತ್ತಿದೆ. ಶಾಲೆಯ ಕೋಣೆಗಳ ಮೇಲ್ಛಾವಣಿಯ ಸಿಮೆಂಟ್ ಸತ್ವ ಕಳೆದುಕೊಂಡು ಕಿತ್ತು ಬೀಳುತ್ತಿದೆ. ಕಬ್ಬಿಣದ ರಾಡುಗಳು ಹೊರಜಗತ್ತು ಇಣುಕಿ ನೋಡುತ್ತಿವೆ. ಗೋಡೆಗಳು ಭಾರೀ ಪ್ರಮಾಣದಲ್ಲಿ ಸೀಳಿ ನಿಂತಿದ್ದು, ಯಾವುದೇ ಕ್ಷಣದಲ್ಲಿ ಮಕ್ಕಳ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆಯಿದೆ. ಛಾವಣಿ ಮೇಲೆ ಅಲ್ಲಲ್ಲಿ ಹುಲ್ಲ ಕಡ್ಡಿ ಬೆಳೆದು ಹಾಳು ಕೊಂಪೆಯಂತಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಉರ್ದು ಶಾಲೆಗಳು ಇರುವುದೇ ಅಪರೂಪ. ಅಂತಹದರಲ್ಲಿ ಜಕ್ಕಲಿ ಗ್ರಾಮದಲ್ಲಿ ಉರ್ದು ಶಾಲೆಯಿದೆ. ಆದರೆ, ಕಟ್ಟಡ ಶಿಥಿಲಗೊಂಡಿರುವುದರಿಂದ ಮಕ್ಕಳು ಶಾಲೆಗೆ ಸರಿಯಾಗಿ ಬರುತ್ತಿಲ್ಲ. ಮಳೆಗಾಲದ ಸಮಯದಲ್ಲಿ ಮಕ್ಕಳ ಜೊತೆಗೆ ಪಾಲಕರು ಶಾಲೆಯಲ್ಲಿ ಕುಳಿತುಕೊಳ್ಳುವ ಪ್ರಸಂಗ ಬಂದಿದೆ.
-ನಜೀರಸಾಬ್ ಬಾಸಾಪುರ, ಎಸ್‌ಡಿಎಂಸಿ ಅಧ್ಯಕ್ಷ
-ಸಿಕಂದರ ಎಂ. ಆರಿ