ಸುಬ್ರಹ್ಮಣ್ಯ: ಅವರೆಲ್ಲ ದೀಪಾವಳಿ ಸಂಭ್ರಮದಲ್ಲಿದ್ದರು. ಏಕಾಏಕಿ ಉಸಿರಾಡಲು ಸಾದ್ಯವಾಗದ ಸ್ಥಿತಿ. ಉಸಿರಾಟದಲ್ಲಿ ತೊಂದರೆಯ ಅನುಭವ. ದೀಪಾವಳಿ ಸಡಗರದ ಸಿದ್ಧತೆಯಲ್ಲಿದ್ದವರೆಲ್ಲರೂ ರಾತ್ರಿ ಮನೆ ತೊರೆದು ಓಡಿ ಹೋದರು. ಇಷ್ಟಕ್ಕೂ ಇದಕೆಲ್ಲ ಕಾರಣ ಸುಬ್ರಹ್ಮಣ್ಯ ಕಲ್ಲಪಣೆಯಲ್ಲಿರುವ ಕುಡಿಯುವ ನೀರು ಶುದ್ಧೀಕರಣ ಘಟಕದಿಂದ ಕ್ಲೋರಿನ್ ಸೋರಿಕೆಯಾಗಿದ್ದು.
ಘಟಕದಲ್ಲಿ ಸೋಮವಾರ ತಡರಾತ್ರಿ ಏಕಾಏಕಿ ದುರ್ವಾಸನೆ ಹೊರಬಂದಿತ್ತು.
ಪರಿಣಾಮ ಗ್ಯಾಸ್ ಸೋರಿಕೆಯಾಗಿರಬಹುದೆಂಬ ಸಂಶಯದಿಂದ ಪರಿಸರದ ಮನೆಯವರು ತಡರಾತ್ರಿ ಹೊರ ನಡೆದರು. ರಾತ್ರಿ ಒಂದು ಗಂಟೆ ವೇಳೆಗೆ ಘಟಕದ ಸುತ್ತಲಿನ ವ್ಯಾಪ್ತಿಯಲ್ಲಿ ದುರ್ವಾಸನೆ ಆರಂಭಗೊಂಡಿತು. ತೀವ್ರತೆಗೆ ಆಸುಪಾಸಿನಲ್ಲಿ ವಾಸಿಸುವ ಕುಟುಂಬಗಳ ಮನೆಯವರಿಗೆ ಉಸಿರಾಡಲು ಸಾದ್ಯವಾಗುತಿರಲಿಲ್ಲ.
ದುರ್ವಾಸನೆಯ ಮೂಲ ನೀರು ಶುದ್ಧೀಕರಣ ಘಟಕದಲ್ಲಿ ಇದ್ದಿದ್ದರಿಂದ ಘಟಕದ ಗ್ಯಾಸ್ ಸಿಲಿಂಡರ್ ಗಳಿಂದ ಗ್ಯಾಸ್ ಸೋರಿಕೆಯಾಗಿರಬಹುದೆಂಬ ಶಂಕೆ ಅವರನ್ನು ಕಾಡಿತ್ತು. ಬಳಿಕ ದೇವಸ್ಥಾನದವರಿಗೆ, ಪೋಲೀಸರಿಗೆ ವಿಷಯ ತಿಳಿಸಲಾಯಿತು.ಭೀತ ನಿವಾಸಿಗಳನ್ನು ಬೇರೆಡೆಗೆ ಕಡೆ ತೆರಳಲು ಸೂಚಿಸಲಾಯಿತು. ಅನೇಕರು ಸ್ವಲ್ಪ ದೂರದಲ್ಲಿರುವ ತಮ್ಮ ಬಂಧುಗಳ ಹಾಗೂ ಪರಿಚಯಸ್ಥರ ಮನೆಗಳಲ್ಲಿ ಆಶ್ರಯ ಪಡೆದರು. ಬಳಿಕ ಸುಳ್ಯದಿಂದ ಅಗ್ನಿಶಾಮಕ ದವರು ಬಂದು ಪರಿಶೀಲಿಸಿದರು.
ಶುದ್ಧೀಕರಣ ಘಟಕದ ಟ್ಯಾಂಕ್ ನ ಒಳಗಡೆಯಲ್ಲಿ ತುಂಬಿಸಿಟ್ಟಿದ್ದ ಕ್ಲೋರಿನ್ ಸೋರಿಕೆಯಾಗಿರುವುದು ಕಂಡುಬಂತು. ಬಳಿಕ ದುರಸ್ತಿಗೊಳಿಸಲಾಯಿತು. ಆತಂಕ ತಿಳಿಯಾಯಿತು. ಕಾರ್ಯಾಚರಣೆ ಮುಗಿಯುವ ಹೊತ್ತಿಗೆ ಬೆಳಗ್ಗೆ 5ರ ತಾಸು ಆಗಿತ್ತು. ಬಳಿಕ ಮನೆ ಬಿಟ್ಟ ಕಲ್ಲಪಣೆ ಪರಿಸರ ವಾಸಿಗಳು ಮತ್ತೆ ತಮ್ಮ ಮನೆಗಳಿಗೆ ತೆರಳಿದರು. ಅಂತೂ ದೀಪಾವಳಿ ಇಲ್ಲದೆ ದಿನ ಕಳೆಯುವಂತಾಯಿತು.