Advertisement

ಎಲೆಮಚ್ಚೆ ರೋಗ; ಬೆಲೆ ಕಳೆದುಕೊಂಡ ಉಳ್ಳಾಗಡ್ಡಿ

06:15 PM Sep 21, 2021 | Nagendra Trasi |

ವಿಜಯಪುರ: ಕಳೆದ ನಾಲ್ಕು ತಿಂಗಳಿಂದ ಮಾರುಕಟ್ಟೆಯಲ್ಲಿ ಸಾಮಾನ್ಯ ಬೆಲೆ ಹೊಂದಿದ್ದ ಈರುಳ್ಳಿ ಪ್ರಕೃತಿ ವೈಪರಿತ್ಯದ ಪರಿಣಾಮ ಇದೀಗ ಏಕಾಏಕಿ ಬೆಲೆ ಕುಸಿಯುವಂತೆ ಮಾಡಿದೆ. ಅತಿವೃಷ್ಟಿ ಹಾಗೂ ವಾತಾವರಣ ಬದಲಾವಣೆಯ ಕಾರಣದಿಂದ ತಿರುಗುಣಿ, ಎಲೆಮಚ್ಚೆ ರೋಗಕ್ಕೆ ಸಿಲುಕಿದ್ದು, ಗಾತ್ರದ ಬೆಳವಣಿಗೆಯಲ್ಲಿ ಕುಂಠಿತವಾಗಿದೆ. ವಿಜ್ಞಾನಿಗಳು ಕೂಡ ಅಧ್ಯಯನ ನಡೆಸಿದ್ದು, ಪರಿಹಾರ ಸೂಚಿದ್ದಾರೆ.

Advertisement

ವಿಜಯಪುರ ಜಿಲ್ಲೆಯಲ್ಲಿ ಸಾಮಾನ್ಯವಾಗಿ 20-24 ಸಾವಿರ ಹೆಕ್ಟೇರ್‌ ಪ್ರದೇಶದ ವರೆಗೆ ಈರುಳ್ಳಿ ಬೆಳೆಯಲಾಗುತ್ತದೆ. ಈ ಬಾರಿ 33 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಇಂಡಿ, ಸಿಂದಗಿ, ಮುದ್ದೇಬಿಹಾಳ, ವಿಜಯಪುರ ತಾಲೂಕಿನಲ್ಲಿ ಹೆಚ್ಚಿನ ಈರುಳ್ಳಿ ಬೆಳೆಯಲಾಗುತ್ತದೆ.

ಆದರೆ ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ಭಾಗದ ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಗುಣಮಟ್ಟದಲ್ಲಿ ಬೆಳೆಯುವ ಈರುಳ್ಳಿ ಹೆಚ್ಚು ಗರಿಷ್ಟ ಗುಣಮಟ್ಟ ಹೊಂದಿದೆ. ಪರಿಣಾಮ ಜಿಲ್ಲೆಯಿಂದ ಸಗಟು ವ್ಯಾಪಾರಿಗಳ ಮೂಲಕ ತೆಲಂಗಾಣ, ಸೀಮಾಂಧ್ರ, ಕೇಳರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಗೆ ವಿಜಯಪುರ ಜಿಲ್ಲೆಯ ರವಾನೆ ಆಗುತ್ತದೆ. ಆದರೆ ಅತಿವೃಷ್ಟಿ, ವಾತಾವರಣದಲ್ಲಿ ಕಂಡುಬಂದ ದಿಢೀರ ಬದಲಾವಣೆಯಿಂದಾಗಿ ಗಾತ್ರ ಹಾಗೂ ಗುಣಮಟ್ಟದಲ್ಲಿ ಕುಸಿತವಾಗಿರುವ ಈರುಳ್ಳಿಯನ್ನು ಇದೀಗ ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲವಾಗಿದೆ.

ಜಿಲ್ಲೆಯಲ್ಲಿ ವಿಜಯಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ರವಿವಾರ ಹಾಗೂ ಬುಧವಾರ ಎರಡು ದಿನ ಈರುಳ್ಳಿ ಮಾರುಕಟ್ಟೆ ನಡೆಯುತ್ತದೆ. ಕಳೆದ ಮೇ ತಿಂಗಳಿಂದ ಆಗಸ್ಟವರೆಗೆ ವಿಜಯಪುರ ಮಾರುಕಟ್ಟೆಗೆ 36,625 ಕ್ವಿಂಟಲ್‌ ಈರುಳ್ಳಿ ಆವಕವಾಗಿದೆ. ಈ ಅವ ಕಯಲ್ಲಿ ಗುಣಮಟ್ಟಕ್ಕೆ ತಕ್ಕಂತೆ 200-2000 ರೂ. ಬೆಲೆ ಸಿಕ್ಕಿದೆ.

ಬಸವನ ಬಾಗೇವಾಡಿ ಹಾಗೂ ಕೂಡಗಿ ಭಾಗದಲ್ಲೂ ಈರುಳ್ಳಿ ಮಾರುಕಟ್ಟೆ ನಡೆಯುತ್ತದೆ. ಆದರೆ ಈಚೆಗೆ ಪ್ರಕೃತಿ ವಿಕೋಪದಿಂದಾಗಿ ಈರುಳ್ಳಿ ಗುಣಮಟ್ಟ ಕಳೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲವಾಗಿದೆ. ಇದರಿಂದಾಗಿ ಜಿಲ್ಲೆಯ ರೈತರು ವಿಜಯಪುರ ಮಾರುಕಟ್ಟೆ ಹೊರತಾಗಿ ಹೊರಗಿನ ಮಾರುಕಟ್ಟೆಗೆ ಕೊಂಡೊಯ್ದ ಈರುಳ್ಳಿಗೆ ಸಾಗಾಣಿಕೆ ವೆಚ್ಚವೂ ಸಿಗದಂತೆ ಬೆಲೆ ಕುಸಿತ ಅನುಭವಿಸಿದ್ದಾರೆ.

Advertisement

ಈ ಮಧ್ಯೆ ಜಿಲ್ಲೆಯ ಈರುಳ್ಳಿ ಬೆಳೆಯಲ್ಲಿ ಕಾಣಿಸಿಕೊಂಡ ರೋಗದ ಕುರಿತು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ರೋಗತಜ್ಞರಾದ ರಮೇಶ ರಾಠೊಡ, ಕೀಟತಜ್ಞರಾದ ಸತ್ಯನಾರಾಯಣ ನೇತೃತ್ವದಲ್ಲಿ ಸೆ. 17ರಂದು ತಳೆವಾಡ, ಬಳೂತಿ ಕೊಲ್ಹಾರ ಭಾಗದ ರೈತರ ಈರುಳ್ಳಿ ತೋಟಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಸ್‌.ಎಂ. ಬರಗಿಮಠ, ಎಸ್‌ಎಡಿಎಚ್‌ಒ ಸಿ.ಬಿ. ಪಾಟೀಲ, ಪ್ರಗತಿಪರ ರೈತರಾದ ನಂದಬಸಪ್ಪ ಚೌಧರಿ, ಯಶವಂತ ದಳವಾಯಿ, ಪುಂಡಲೀಕ ಛಬ್ಬಿ ಅವರ ಜೊತೆ ಭೇಟಿ ನೀಡಿ, ರೈತರೊಂದಿಗೆ ಚರ್ಚಿಸಿ, ಈ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತೂ ಸಲಹೆ ನೀಡಿದ್ದಾರೆ.

ಜಿಲ್ಲೆಯ ಈರುಳ್ಳಿಗೆ ಹೊರ ರಾಜ್ಯದಲ್ಲಿ ಭಾರಿ ಬೇಡಿಕೆ ಇದೆ. ಆದರೆ ಈ ಬಾರಿ ಗಾತ್ರ, ಗುಣಮಟ್ಟದಲ್ಲಿ ಕುಸಿತದಿಂದಾಗಿ ಸಹಜವಾಗಿ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಕುಸಿತವಾಗಿದೆ. ಖರೀದಿಸಿದ ಈರುಳ್ಳಿ ಕೂಡ ಕೊಳೆಯುತ್ತಿದ್ದು, ನಮಗೂ ನಷ್ಟವಾಗುತ್ತಿದೆ.
ಗುರು ಶಿರೋಳಕರ, ಈರುಳ್ಳಿ ಸಗಟು
ವ್ಯಾಪಾರಿ, ಎಪಿಎಂಸಿ, ವಿಜಯಪುರ

ರೈತರು ಈರುಳ್ಳಿ ರೋಗದ ಕುರಿತು ನಮ್ಮ ಗಮನಕ್ಕೆ ತರುತ್ತಲೇ ವಿಜ್ಞಾನಿಗಳನ್ನು ಕರೆಸಿ ಅಧ್ಯಯನ ಮಾಡಿಸಿದ್ದೇವೆ. ಅಲ್ಲದೇ ಪ್ರಕೃತಿ ವೈಪರಿತ್ಯದಿಂದಾಗಿ ಕಂಡುಬಂದಿರುವ ಈ ರೋಗದ ಕುರಿತು ರೈತರು ಕೈಗೊಳ್ಳಬೇಕಾದ ಸಲಹೆಗಳನ್ನೂ ನೀಡಿದ್ದೇವೆ.
ಎಸ್‌.ಎಂ.ಬರಗೀಮಠ
ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next