Advertisement

ಯುವ ಕಾಂಗ್ರೆಸ್ಸಿಗರಿಗೆ ನಾಯಕತ್ವ ಪಾಠ

06:45 AM Jan 20, 2018 | |

ಬೆಂಗಳೂರು: ದೆಹಲಿಯ ಜವಾಹರಲಾಲ್‌ ನೆಹರು ನಾಯಕತ್ವ ತರಬೇತಿ ಕೇಂದ್ರದ ಸುರೇಶ್‌ ಶರ್ಮಾ ನೇತೃತ್ವದ 14 ಜನರ ತಂಡ ಕಾಂಗ್ರೆಸ್‌ನ ಯುವ ಘಟಕದ ಪದಾಧಿಕಾರಿಗಳಿಗೆ ರಾಜಕೀಯದಲ್ಲಿ ನಾಯಕತ್ವ ಬೆಳೆಸಿಕೊಳ್ಳುವ ಬಗ್ಗೆ ಉಪನ್ಯಾಸ ನೀಡಿದರು.

Advertisement

ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಯುವ ದೃಷ್ಟಿ ಹೆಸರಿನಲ್ಲಿ ಮೂರು ದಿನಗಳ ನಾಯಕತ್ವ ತರಬೇತಿ ಶಿಬಿರದಲ್ಲಿ ಸುರೇಶ್‌ ಶರ್ಮಾ ಮಾತನಾಡಿ, ಸಾಮಾಜಿಕ ಜಾಲ ತಾಣಗಳ ಮೂಲಕ ರಾಜ್ಯ ಸರ್ಕಾರಸಾಧನೆಗಳನ್ನು ಗುಜರಾತ್‌ ಚುನಾವಣೆಯಲ್ಲಿ ಬಳಸಿಕೊಂಡು ಮತದಾರರನ್ನು ಸೆಳೆಯುವ ಪ್ರಯತ್ನ
ನಡೆಸಲಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವೇ ಅಧಿಕಾರದಲ್ಲಿರುವುದರಿಂದ ಯುವ ಕಾಂಗ್ರೆಸ್‌ ಘಟಕ ಜನರಿಗೆ ನೇರವಾಗಿ ಯೋಜನೆಗಳ ಬಗ್ಗೆ ಪ್ರಚಾರ ಮಾಡುವ ಮೂಲಕ ಪಕ್ಷದಲ್ಲಿಯೂ ಗುರುತಿಸಿಕೊಳ್ಳಬಹುದು ಎಂದರು.

ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ,ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೋಶಿಯಲ್‌ ಮೀಡಿಯಾ ಬಳಕೆ ಮಾಡುತ್ತಿದ್ದಾರೆ ಆದರೆ, ಸರ್ಕಾರದ ಸಾಧನೆಗಳನ್ನು ಕೇವಲ ಸೋಶಿಯಲ್‌ ಮೀಡಿಯಾದಲ್ಲಷ್ಟೇ ಅಪ್‌ ಡೇಟ್‌ ಮಾಡಿದರೆ ಸಾಲದು. ಜನರ ಬಳಿಗೆ ತೆರಳಿ ತಿಳಿಸಬೇಕು. ಕಾಂಗ್ರೆಸ್‌ಗೆ ಆಚಾರ-ವಿಚಾರ ಇದೆ. ಆದರೆ, ಪ್ರಚಾರ ಇಲ್ಲ. ಬಿಜೆಪಿಯವರು ಕೆಲಸ ಮಾಡದೇ ಪ್ರಚಾರ ಪಡೆದುಕೊಳ್ಳುತ್ತಾರೆ. ಕಾಂಗ್ರೆಸ್‌ನವರಿಗೆ ಮಾಡಿದ ಕೆಲಸಕ್ಕೂ ಪ್ರಚಾರ
ದೊರೆಯುವುದಿಲ್ಲ. ಅದೂ ಕೂಡ ರಾಜಕಾರಣದಲ್ಲಿ ಮುಖ್ಯ ಎಂದು ತಿಳಿಸಿದರು.

ರಾಜಕೀಯದಲ್ಲಿ ಕೇವಲ ಆಡಳಿತ ಪಕ್ಷದ ಬಗ್ಗೆ ತಿಳಿದುಕೊಂಡರೆ ಸಾಲದು ಪ್ರತಿಪಕ್ಷಗಳ ಲೆಕ್ಕಾಚಾರವನ್ನೂ ಅರಿತುಕೊಳ್ಳುವುದು ಮುಖ್ಯ. ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷದ ನಿಲುವೇನು ? ಬಿಜೆಪಿಯ ನಿಲುವೇನು ? ಎಂಬುದನ್ನು ತಿಳಿದುಕೊಂಡು ಜನರಿಗೆ ಅರಿವು ಮೂಡಿಸಬೇಕು.ಜನರಿಗೆ ಸರ್ಕಾರದ ಯೋಜನೆಗಳನ್ನು ತಿಳಿಸುವ ಮೊದಲು ಯುವಕರು ತಿಳಿದುಕೊಳ್ಳಬೇಕು ಎಂದರು.

ಗುರುವಾರದಿಂದ ಆರಂಭವಾದ ಮೂರು ದಿನದ ಶಿಬಿರದಲ್ಲಿ ನಾಯಕತ್ವಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ಕಾಂಗ್ರೆಸ್‌ ಮುಖಂಡರಾದ ಬಿ.ಎಲ್‌. ಶಂಕರ್‌, ಸೂರಜ್‌ ಹೆಗಡೆ, ಸತೀಶ್‌ ಜಾರಕಿಹೊಳಿ ಸೇರಿದಂತೆ ಅನೇಕ ನಾಯಕರು ಬೋಧನೆ ಮಾಡಿದ್ದಾರೆ. ಶನಿವಾರ ಮುಖ್ಯಮಂತ್ರಿ ಕೂಡ ಯುವ ಮುಖಂಡರಿಗೆ ನಾಯಕತ್ವದ ಪಾಠ ಮಾಡಲಿದ್ದಾರೆ.

Advertisement

ಮೂರು ದಿನದ ತರಬೇತಿ ನಂತರ ತಿಂಗಳಾಂತ್ಯದಲ್ಲಿ ವಿಭಾಗ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಪಾಲ್ಗೊಂಡ ಯುವ ಘಟಕದ ಪದಾಧಿಕಾರಿಗಳು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಯುವಕರಿಗೆ ನಾಯಕತ್ವದ ತರಬೇತಿ ನೀಡಿ, ಅವರ ಮೂಲಕ ಪ್ರತಿ ಬೂತ್‌ ಮಟ್ಟದಲ್ಲೂ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನವನ್ನು ಈ ತರಬೇತಿ ಮೂಲಕ ನಡೆಸಲಾಗುತ್ತಿದೆ.
– ಬಸನಗೌಡ ಬಾದರ್ಲಿ, ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next