ಆಳಂದ: ಕನ್ನಡ ನಾಡು, ನುಡಿ ವಿಶೇಷವಾಗಿ ಗಡಿನಾಡಿನಲ್ಲಿ ಕನ್ನಡ ಭಾಷೆ ಕನ್ನಡಿಗರ ಹಿತರಕ್ಷಣೆಗಾಗಿ ಸಾಮೂಹಿಕ ನಾಯಕತ್ವ ಅಗತ್ಯವಾಗಿದೆ ಎಂದು ಖಜೂರಿ ಕೋರಣೇಶ್ವರ ಮಠದ ಪೀಠಾಧಿಪತಿ ಶ್ರೀ ಮುರುಘೇಂದ್ರ ಮಹಾ ಸ್ವಾಮೀಜಿ ಹೇಳಿದರು.
ತಾಲೂಕಿನ ಖಜೂರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಮ್ಮ ಕರುನಾಡು ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ 63ನೇ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕನ್ನಡ ಉಳಿಸಿ ಬೆಳೆಸುವ ಕೆಲಸ ಸಂಘಟನೆಗಳ ಜವಾಬ್ದಾರಿ ಅಷ್ಟೆ ಅಲ್ಲ, ಕನ್ನಡಿಗರೆಲ್ಲ ಸೇರಿ ಕನ್ನಡ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡರಂಗಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ನಡೆಯುತ್ತಿದೆ. ಗಡಿನಾಡಿನಲ್ಲಿ ಅಗತ್ಯ ಕ್ರಮ ಕೈಗೊಂಡು ಇಲಾಖೆ ಸೌಲಭ್ಯ ನೀಡಲಾಗುವುದು ಎಂದರು. ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ| ಸಂಜಯ ರೆಡ್ಡಿ ಪೂಜೆ ಕೈಗೊಂಡು, ರಕ್ಷಣಾ ವೇದಿಕೆ ಗಡಿ ಭಾಗದ ಮಕ್ಕಳನ್ನು ಪೋತ್ಸಾಹಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ನಮ್ಮ ಕರುನಾಡು ರಕ್ಷಣಾ ವೇದಿಯ ಸಂಸ್ಥಾಪಕ ಜಿಲ್ಲಾ ಅಧ್ಯಕ್ಷ ಗಂಗಾಧರ ಕುಂಬಾರ ಮಾತನಾಡಿ, ವೇದಿಕೆಯಿಂದ 6ರಿಂದ 10ನೇ ತರಗತಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಲಾಗುತ್ತಿದೆ ಎಂದರು.
ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಶ್ರೀಮಂತ ಜಿಡ್ಡೆ, ಇಂದಿರಾ ವಸತಿ ಶಾಲೆಯ ಪ್ರಾಚಾರ್ಯ ಸಿದ್ಧಪ್ಪ ಪೂಜಾರಿ, ಕಸಾಪ ಮಾಜಿ ಅಧ್ಯಕ್ಷ ಅಪ್ಪಾಸಾಬ ತೀರ್ಥೆ, ಕೋತನಹಿಪ್ಪರಗಾ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಮರೆಪ್ಪ ಶಿಂಧೆ, ಸಿಆರ್‌ಪಿ ವೆಂಕಟೇಶ ಚವ್ಹಾಣ, ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ, ಗ್ರಾಪಂ ಸದಸ್ಯ ರಾಜಶೇಖರ ಹರಿಹರ, ನಮ್ಮ ಕರುನಾಡು ತಾಲೂಕು ಅಧ್ಯಕ್ಷ ಅಭಿಷೇಕ ಪಾಟೀಲ, ಮುಖಂಡ ಪ್ರಾಣೇಶ ದೇಶಮುಖ, ಮಂಜನಾಥ ಕಂದಗುಳೆ, ಶಿವುಕುಮಾರ ಹಳ್ಳೆ, ಮಲ್ಲಿನಾಥ ತೋರಕಡೆ ಇದ್ದರು. ಇರ್ಷಾದ ಬೇಗಂ ನಿರೂಪಿಸಿದರು, ಶಿಕ್ಷಕ ಯೋಗಿರಾಜ ಮಾಡಿಯಾಳ ಸ್ವಾಗತಿಸಿದರು, ಶಿಕ್ಷಕ ಮಲ್ಲಿನಾಥ ಪಟ್ಟಣ ವಂದಿಸಿದರು.