Advertisement

ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ಬೊಂಬೆ ನುಡಿಯಿತು ಭವಿಷ್ಯ!

10:27 PM Mar 22, 2023 | Team Udayavani |

ಧಾರವಾಡ: ರಾಜ್ಯ ರಾಜಕಾರಣದಲ್ಲಿ ನಾಯಕತ್ವದ ಬದಲಾವಣೆಯಾಗಲಿದೆ ಎಂಬ ಭವಿಷ್ಯವನ್ನು ಮಣ್ಣಿನ ಬೊಂಬೆಯು ನುಡಿದಿದೆ.

Advertisement

ಪೂರ್ವಜರ ಕಾಲದಿಂದಲೂ ಈ ಭವಿಷ್ಯ ನಿಜವಾಗುತ್ತಲೇ‌ ಇದೆ. ಈ ಬಾರಿ ರಾಜ್ಯ ರಾಜಕಾರಣದಲ್ಲಿ ಕೂಡ ದೊಡ್ಡ ಬದಲಾವಣೆ ಆಗಲಿದೆ ಎಂಬ ಭವಿಷ್ಯವನ್ನು ಈ ಬೊಂಬೆ ಹೇಳಿದೆ.

ಇದು ಚುನಾವಣೆ ವರ್ಷ. ಈ ಬಾರಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಆಗಲಿದೆಯಂತೆ.‌ ಹೀಗಂತಾ ನಾವು ಹೇಳ್ತಿಲ್ಲ. ಬೊಂಬೆಯೊಂದು ಹೇಳಿದೆ.‌ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡಿರುವ ಹನುಮನಕೊಪ್ಪ ಗ್ರಾಮಸ್ಥರು ಪ್ರತಿವರ್ಷ ಯುಗಾದಿಯಂದು ಒಂದು ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ. ಯುಗಾದಿ ಅಮವಾಸ್ಯೆಯಂದು ತಮ್ಮ ಗ್ರಾಮದ ತುಪ್ಪರಿ ಹಳ್ಳದ ದಂಡೆಯ ಮೇಲೆ ಒಂದು ಸಮತಟ್ಟಾದ ಕಲಾಕೃತಿ ಮಾಡಿ, ಅದರ ನಾಲ್ಕೂ ದಿಕ್ಕಿಗೆ ರಾಜಕಾರಣದ ಬೊಂಬೆಗಳನ್ನು ಮಾಡಿಡುತ್ತಾರೆ. ಒಳಗಡೆ ರೈತರು, ಸೈನಿಕರು, ಕಾಳುಗಳನ್ನು ಇಡುತ್ತಾರೆ. ಅಮವಾಸ್ಯೆ ದಿನ ಈ ಆಕೃತಿ ಮಾಡಿಟ್ಟು, ಮಾರನೆ ದಿನ ಬೆಳಿಗ್ಗೆ ಅದನ್ನು ನೋಡಲು ಹೋಗುತ್ತಾರೆ. ಈ ಆಕೃತಿಯ ಯಾವ್ಯಾವ ಭಾಗಕ್ಕೆ ಪೆಟ್ಟಾಗಿದೆ ಎಂಬುದನ್ನು ನೋಡಿ ಅದರ ಮೇಲೆ ಆ ಭಾಗದ ಭವಿಷ್ಯವನ್ನು ಇವರು ನಿರ್ಧರಿಸುತ್ತಾರೆ.

ಪ್ರಸಕ್ತ ವರ್ಷ ಕರ್ನಾಟಕ ದಿಕ್ಕಿನ ರಾಜಕೀಯ ಬೊಂಬೆಯ ಬಲಗಾಲಿಗೆ ಪೆಟ್ಟಾಗಿದ್ದು, ನಮ್ಮ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬಹುದು ಎಂದು ಊಹಿಸಲಾಗಿದೆ. ಸದ್ಯ ಬಸವರಾಜ ಬೊಮ್ಮಾಯಿ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಈ ಬೊಂಬೆ ಭವಿಷ್ಯದ ಪ್ರಕಾರ ನಾಯಕತ್ವ ಬದಲಾಗಬಹುದು ಎಂದು ಬೊಂಬೆ ಭವಿಷ್ಯ ನುಡಿದಿದೆ.

ನಿಜವಾಗಿತ್ತು ಭವಿಷ್ಯ
ಇನ್ನು ಯಡಿಯೂರಪ್ಪನವರು ಸಿಎಂ ಆಗಿದ್ದ ಸಂದರ್ಭದಲ್ಲಿ ನಮ್ಮ ರಾಜ್ಯದ ನಾಯಕತ್ವ ಬದಲಾಗಬಹುದು ಎಂಬುದನ್ನು ಈ ಬೊಂಬೆ ಭವಿಷ್ಯ ನುಡಿದಿತ್ತು. ಆ ಪ್ರಕಾರ ಯಡಿಯೂರಪ್ಪನವರು ಕೆಳಗಿಳಿದ ಪ್ರಸಂಗ ಎಲ್ಲರಿಗೂ ಗೊತ್ತೇ ಇದೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ, ಹನುಮನಕೊಪ್ಪ ಗ್ರಾಮಸ್ಥರು ಮಾಡಿದ್ದ ಈ ಆಚರಣೆಯಲ್ಲಿ ರಾಷ್ಟ್ರನಾಯಕರ ಬೊಂಬೆಯೊಂದು ಉರುಳಿ ಬಿದ್ದಿತ್ತು. ರಾಷ್ಟ್ರನಾಯಕರಿಗೆ ಆಪತ್ತು ಎದುರಾಗಬಹದು ಎಂಬುದನ್ನು ಆ ಮೂಲಕ ಬೊಂಬೆ ಹೇಳಿತ್ತು. ಇದಾದ ಬಳಿಕ ಇಂದಿರಾಗಾಂಧಿ ಹತ್ಯೆ ಕೂಡ ಆಗಿತ್ತು ಎಂಬುದಾಗಿ ಗ್ರಾಮಸ್ಥರು ಹೇಳುತ್ತಾರೆ.

Advertisement

ಸದ್ಯ ರಾಜ್ಯ ರಾಜಕಾರಣದ ಬೊಂಬೆಯ ಬಲಗಾಲಿಗೆ ಪೆಟ್ಟಾಗಿದ್ದು, ಇದು ನಾಯಕತ್ವ ಬದಲಾವಣೆಯ ಮುನ್ಸೂಚನೆಯನ್ನು ನೀಡಿದೆ. ಈ ಗ್ರಾಮಸ್ಥರು ಅನೇಕ ವರ್ಷಗಳಿಂದ ಈ ಆಚರಣೆ ಮಾಡುತ್ತ ಬಂದಿದ್ದು, ಅನೇಕ ಸಂಗತಿಗಳು ನಿಜ ಕೂಡ ಆಗಿವೆ. ಇದಲ್ಲದೇ ಈ‌ ವರ್ಷ ಮಳೆ ಎಷ್ಟು ಇದೆ, ಬೆಳೆ ಎಷ್ಟು ಬರಬಹುದು ಎಂಬುದನ್ನು ಕೂಡ ಈ ಬೊಂಬೆ ಹೇಳುತ್ತದೆ.

ಒಟ್ಟಿನಲ್ಲಿ ಈ ಬಾರಿ‌ ಚುನಾವಣೆಯಲ್ಲಿ ಏನಾಗಲಿದೆಯೋ ಗೊತ್ತಿಲ್ಲ.‌ ಆದರೆ ಈ ಬೊಂಬೆಯ ಫಲ ಭವಿಷ್ಯವಂತೂ ರಾಜ್ಯ ರಾಜಕಾರಣದಲ್ಲಿ ದೊಡ್ಡ‌ ಬದಲಾವಣೆಯಾಗಲಿದೆ ಎಂಬ ಮುನ್ಸೂಚನೆ ನೀಡಿದೆ. ಯಡಿಯೂರಪ್ಪನವರು ಸಿಎಂ ಖುರ್ಚಿಯಿಂದ ಇಳಿಯಬೇಕಾದರೆ ಮೂರ್ತಿಗೆ ಪೆಟ್ಟಾಗಿತ್ತು. ಆಗಲೂ ಕೂಡ ಈ ಬೊಂಬೆ ರಾಜಕೀಯ ಬದಲಾವಣೆ ಮುನ್ಸೂಚನೆ ನೀಡಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯಾಗುವ ಮುನ್ನ ಈ ಆಕೃತಿಯಲ್ಲಿದ್ದ ಕೇಂದ್ರ ಸ್ಥಾನದ ಮೂರ್ತಿ ಉರುಳಿ ಬಿದ್ದಿತ್ತು. ಇದರಿಂದ ರಾಷ್ಟ್ರ ನಾಯಕರಿಗೆ ತೊಂದರೆಯಾಗಬಹುದು ಎಂಬುದನ್ನು ಈ ಬೊಂಬೆ ಹೇಳಿತ್ತು. ಆ ಪ್ರಕಾರ ಸಂಗತಿಗಳು ನಡೆದಿರುವುದು ಗಮನಾರ್ಹ ವಿಷಯ. ಒಟ್ಟಿನಲ್ಲಿ ಈ ಭಾಗದ ಜನ ಈ ಬೊಂಬೆ ಭವಿಷ್ಯದ ಮೇಲೆ ಅಚಲ ನಂಬಿಕೆ ಇಟ್ಟಿರುವುದಂತೂ ಸುಳ್ಳಲ್ಲ.

Advertisement

Udayavani is now on Telegram. Click here to join our channel and stay updated with the latest news.

Next