Advertisement

ಸೈಕಲ್‌ನಲ್ಲೇ ಸುತ್ತಿ ಪಕ್ಷ ಸಂಘಟಿಸಿದ ನೇತಾರ

02:24 PM Nov 25, 2018 | |

ದಾವಣಗೆರೆ: ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್‌ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿದ್ದರಲ್ಲದೆ, ಅಪ್ರತಿಮ ನಾಯಕರಾಗಿದ್ದರು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಸ್ಮರಿಸಿದ್ದಾರೆ. ಶನಿವಾರ, ಪಿ.ಬಿ. ರಸ್ತೆಯ ಅಭಿನವ ರೇಣುಕಾ ಮಂದಿರದಲ್ಲಿ ಅನಂತಕುಮಾರ್‌ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 35 ವರ್ಷಗಳ ಕಾಲ ಎಬಿವಿಪಿ ಕಾರ್ಯಕರ್ತನಾಗಿ ಎಲ್ಲಾ ಕಾರ್ಯಕರ್ತರನ್ನು ಪ್ರೀತಿಪೂರ್ವಕವಾಗಿ ಕಾಣುವ ಮೂಲಕ ಸಂಘಟನಾತ್ಮಕವಾಗಿ ಸಾಕಷ್ಟು ಕೆಲಸ ಮಾಡಿದ ಅನಂತ್‌ಕುಮಾರ್‌, ಬರೀ ಸೈಕಲ್‌ನಲ್ಲಿ ಸುತ್ತಿ ಬಿಜೆಪಿ ಕಟ್ಟಿ ಬೆಳೆಸಿದವರು. ಬಿ.ಎಸ್‌. ಯಡಿಯೂರಪ್ಪ ಮತ್ತು ಅನಂತಕುಮಾರ್‌ ಜೋಡೆತ್ತುಗಳಂತೆ ಪಕ್ಷದ ಸಂಘಟನೆಗೆ ಶ್ರಮಿಸಿದ್ದಾರೆ ಎಂದರು.

Advertisement

ಲೋಕಸಭೆಯ ನಡವಳಿಕೆ ಬಗ್ಗೆ ಸವಿಸ್ತಾರವಾಗಿ ತಿಳಿಸುವ ಜೊತೆಗೆ, ನಮ್ಮ ನಡವಳಿಕೆ ಹೇಗೆ ಇರಬೇಕೆಂಬುದರ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದ ನಾಯಕ ಅನಂತಕುಮಾರ್‌ ಅಕಾಲಿಕ ಮರಣ ಇಡೀ ದೇಶಕ್ಕೆ ತುಂಬಲಾರದ ನಷ್ಟ ಎಂದು ಬಣ್ಣಿಸಿದರು. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ನಾನು ಬಿಜೆಪಿಗೆ ಬಂದಾಗಿನಿಂದಲೂ ಅನಂತಕುಮಾರ್‌ ಜೊತೆ ಉತ್ತಮ ಒಟನಾಟ ಇಟ್ಟುಕೊಂಡಿದ್ದೆ. ಅವರಿಗೆ ಪಕ್ಷದ ಬಗ್ಗೆ ಸಾಕಷ್ಟು ನಿಷ್ಠೆ, ಬಾಂಧವ್ಯವಿತ್ತು. ಕೆಲವರು ಪಕ್ಷದೊಳಗೆ ಉನ್ನತ ಅಧಿಕಾರಕ್ಕೇರಿದ ಬಳಿಕ ಹಿಂದಿನ ವ್ಯಕ್ತಿಗಳ ಸಂಪರ್ಕಕ್ಕೆ ಸಿಗುವುದಿಲ್ಲ. ಆದರೆ, ಅನಂತಕುಮಾರ್‌ ಎಲ್ಲರ ಜೊತೆ ಪ್ರೀತಿಯಿಂದ ಹತ್ತಿರವಿದ್ದುಕೊಂಡೇ ಕೆಲಸ ಮಾಡಿದವರು ಎಂದು ಹೇಳಿದರು.

ಚಿಕ್ಕಂದಿನಿಂದಲೇ ಪಕ್ಷದ ಸಂಘಟನೆಗೆ ಸಾಕಷ್ಟು ಶ್ರಮಿಸಿ ಬಹುಬೇಗ ಅತ್ಯಂತ ಉನ್ನತ ಸ್ಥಾನಗಳನ್ನು ಅಲಂಕರಿಸಿ ಜವಾಬ್ದಾರಿಯುತವಾಗಿ ನಿರ್ವಹಿಸಿದ ಮೇರು ವ್ಯಕ್ತಿತ್ವ ಅವರದ್ದು. ಅವರು ತಮ್ಮ ಅಲ್ಪ ಕಾಲದಲ್ಲೇ ಪಕ್ಷದ ಎಲ್ಲಾ ರೀತಿಯ ಋಣ ತೀರಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗ, ಪಕ್ಷದ ಬಗ್ಗೆ ಹೊಂದಿದ್ದ ಕಲ್ಪನೆಯನ್ನು ಎಲ್ಲರೂ ನನಸಾಗಿಸೋಣ ಎಂದರು. 

ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಎ.ಎಚ್‌. ಶಿವಯೋಗಿ ಮಾತನಾಡಿ, ಸಾಮಾನ್ಯ ಕಾರ್ಯಕರ್ತನಾಗಿ ಕಷ್ಟಪಟ್ಟು ಮೆಲ್ಮಟ್ಟಕ್ಕೆ ಬಂದ ದಕ್ಷ ಆಡಳಿತಗಾರ ಅನಂತಕುಮಾರ್‌ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದರು. ಮುಖಂಡ ಎಚ್‌.ಎಸ್‌. ನಾಗರಾಜ್‌ ಮಾತನಾಡಿ, ಬಿಜೆಪಿ ಎಂದರೆ ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ, ಅನಂತಕುಮಾರ್‌, ಈಶ್ವರಪ್ಪ ಎಂಬುದಾಗಿ ಈ ಮೂವರ ಹೆಸರು ಜನರಲ್ಲಿ ಅಚ್ಚಳಿಯದೇ ಉಳಿದಿತ್ತು. ಏಕೆಂದರೆ ಈ ನಾಯಕರು ಅಷ್ಟೊಂದು ಸಮರ್ಥ, ಪ್ರಾಮಾಣಿಕವಾಗಿ ಪಕ್ಷ ಕಟ್ಟಿ ಬೆಳೆಸಿದವರು. 

ಅಂತಹವರಲ್ಲಿ ಅನಂತಕುಮಾರ್‌ ಅವರನ್ನು ಕಳೆದುಕೊಂಡಿರುವುದು ಪಕ್ಷಕ್ಕೆ ಅಪಾರ ನಷ್ಟವಾಗಿದೆ. ಅವರು ಮುಂದೆ ಪ್ರಧಾನ ಮಂತ್ರಿ ಸ್ಥಾನ ಅಲಂಕರಿಸುವ ಸಾಧ್ಯತೆ ಇತ್ತು ಎಂದು ಹೇಳಿದರು.

Advertisement

ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಮಾತನಾಡಿ, ಒಂದು ವರ್ಷದ ಹಿಂದೆ ಅನಂತಕುಮಾರ್‌ ದಾವಣಗೆರೆಯಲ್ಲಿ ಭೇಟಿಯಾದಾಗ ಪಕ್ಷದ ಚಟುವಟಿಕೆ ಬಗ್ಗೆ ಸುದೀರ್ಘ‌ವಾಗಿ ಚರ್ಚಿಸಿದ್ದರು. ಅವರು ರಸಗೊಬ್ಬರ ಖಾತೆ ವಹಿಸಿಕೊಂಡಾಗ ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಈ ಹಿಂದೆ ಅಟಲ್‌ ಬಿಹಾರಿ ವಾಜಪೇಯಿಯವರು ಕೂಡ ಇದೇ ಖಾತೆ ಹೊಂದಿದ್ದರು. ಇಲ್ಲಿ ಯಾವ ಖಾತೆಯೂ ಕೀಳಲ್ಲ ಎಂದು ಉತ್ತರಿಸಿದ್ದರು. ನಮಗೆ ಯಾವುದೇ ವ್ಯಕ್ತಿ ಹಾಗೂ ವಸ್ತು ಕಳೆದುಕೊಂಡಾಗ ಅದರ ಬೆಲೆ ಗೊತ್ತಾಗೋದು ಅವರು ಮಾಡಿದ ಕಾರ್ಯಗಳಿಂದ ಮಾತ್ರ ಎಂದು ಹೇಳಿದರು.
 
ಕೆ.ಬಿ. ಶಂಕರನಾರಾಯಣ, ರೈತ ಮುಖಂಡ ಬಿ.ಎಂ. ಷಣ್ಮುಖಯ್ಯ, ವಕೀಲ ಮಂಜಪ್ಪ, ಕಲ್ಲೇಶ್‌, ಸರೋಜಮ್ಮ ದೀಕ್ಷಿತ್‌, ಬಿ.ಎಸ್‌. ಜಗದೀಶ್‌, ಅಣಬೇರು ಜೀವನಮೂರ್ತಿ, ಕೆ.ಎನ್‌. ಓಂಕಾರಪ್ಪ ಅನಂತಕುಮಾರ್‌ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಪಿ.ಸಿ. ಶ್ರೀನಿವಾಸ್‌, ರಾಜನಹಳ್ಳಿ ಶಿವಕುಮಾರ್‌ ಇತರೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ವೇಳೆ ಜಿಲ್ಲಾ ಬಿಜೆಪಿ ವತಿಯಿಂದ ಕಾರ್ಯಾಂಜಲಿ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.

ಸ್ಫೂರ್ತಿಯ ಸೆಲೆ
ಸಾಮಾನ್ಯ ಕಾರ್ಯಕರ್ತರ ಜತೆ ಕೆಲಸ ಮಾಡಿದ ಅನಂತಕುಮಾರ್‌ ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಸ್ಫೂರ್ತಿಯ ಸೆಲೆ ಆಗಿದ್ದಾರೆ. ಕೇಂದ್ರ ಸಚಿವರಾಗಿದ್ದಾಗ ಅವರ
ಕಚೇರಿ ಉದ್ಘಾಟನೆಗೆಂದು ನಾವು ದೆಹಲಿಗೆ ಹೋದಾಗ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡು, ಪ್ರೀತಿಯಿಂದ ಎಲ್ಲರನ್ನೂ ಅವರು ಕಂಡ ರೀತಿ ಮರೆಯಲಾಗದ್ದು. ಕೇಂದ್ರದ ರಸಗೊಬ್ಬರ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಜೊತೆಗೆ ರಾಷ್ಟ್ರದಾದ್ಯಂತ ಜನರಿಕ್‌ ಔಷಧಿ ಕೇಂದ್ರ ಪ್ರಾರಂಭಿಸಿ, ಬಡ ವರ್ಗದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕರ್ನಾಟಕ ಒಳಗೊಂಡಂತೆ ಇಡೀ ದೇಶವನ್ನು ತಿರುಗಿದವರಲ್ಲಿ ದೇವೇಗೌಡರನ್ನು ಬಿಟ್ಟರೇ ಇವರೇ ಮೊದಲಿಗರು. ಇಂತಹ ದಕ್ಷ ಸಂಘಟನಾ ಚತುರ ನಾಯಕನ ಅಗಲಿಕೆ ಎಲ್ಲಾ ವರ್ಗದ ಜನರಿಗೆ ತುಂಬಲಾರದ ನಷ್ಟ ಉಂಟು ಮಾಡಿದೆ.
 ಎಂ.ಪಿ. ರೇಣುಕಾಚಾರ್ಯ, ಹೊನ್ನಾಳಿ ಶಾಸಕ.

ಉತ್ತಮ ಸಂಘಟಕ
ಬಿಜೆಪಿಗೆ ಬಿ.ಎಸ್‌. ಯಡಿಯೂರಪ್ಪ ಹಾಗೂ ಅನಂತಕುಮಾರ್‌ ಎರಡು ಕಣ್ಣುಗಳಿದ್ದಂತಿದ್ದರು. ಅನಂತಕುಮಾರ್‌ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದು, ತಾವು ಸಹ ಕೇಂದ್ರದಲ್ಲಿ ಉನ್ನತ ಅಧಿಕಾರ ಪಡೆದು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ದುಡಿದಿದ್ದಾರೆ. ಈ ಹಿಂದೆ ಚನ್ನಗಿರಿ ತಾಲೂಕಿನ ಎಲ್ಲಾ ಕಡೆ ಭೇಟಿ ನೀಡಿ ಚುನಾವಣಾ ಪ್ರಚಾರ ಮಾಡಿ ಪಕ್ಷದ ಬಲವರ್ಧನೆಗೆ ಶ್ರಮಿಸಿದ್ದಾರೆ. ಈ ದೇಶದ ಕೆಲವೇ ಬುದ್ಧಿವಂತರಲ್ಲಿ ಅನಂತಕುಮಾರ್‌ ಕೂಡ ಒಬ್ಬರು. ಅವರಿಗೆ ರಾಜ್ಯದ ಮುಖ್ಯಮಂತ್ರಿ, ಪ್ರಧಾನಿಮಂತ್ರಿ ಆಗುವ ಅವಕಾಶ ಮುಂದಿನ ದಿನಗಳಲ್ಲಿ ಇತ್ತು.
 ಮಾಡಾಳ್‌ ವಿರೂಪಾಕ್ಷಪ್ಪ, ಚನ್ನಗಿರಿ ಶಾಸಕ.

Advertisement

Udayavani is now on Telegram. Click here to join our channel and stay updated with the latest news.

Next