ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಬದಿನಡೆ, ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದಲ್ಲಿ ವಿಷು ಸಂಕ್ರಮಣದಂದು ಶ್ರೀ ದೇಗುಲದ ಸಭಾಭವನಕ್ಕೆ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿದರು.
ಉಜಿರೆಯ ಉದ್ಯಮಿ ಗಿರಿರಾಜ ಬಾರಿತ್ತಾಯ ತೀರ್ಥಕೆರೆಯ ಶಿಲಾನ್ಯಾಸ ನೆರವೇರಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ವೆ| ಮೂ| ಅಶೋಕ್ ಕುಮಾರ್ ವೈದಿಕತ್ವ ವಹಿಸಿದ್ದರು. ಬೆಳ್ತಂಗಡಿಯ ಉದ್ಯಮಿ ರಮಾನಂದ ಸಾಲ್ಯಾನ್ ಸಭಾ ಕಾರ್ಯಕ್ರಮ ಉದ್ಘಾಟಿಸಿ, ನಮ್ಮ ಎಲ್ಲ ವ್ಯವಹಾರಗಳಲ್ಲಿ ದೇವರ ಅನುಗ್ರಹವಿದ್ದರೆ ಯಶಸ್ಸು ಸಾಧ್ಯ. ದೇವಸ್ಥಾನ ನಿರ್ಮಾಣ ಪುಣ್ಯದ ಕಾರ್ಯವಾಗಿದೆ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಕೃಷಿ ವಿಭಾಗದ ಮೆನೇಜರ್ ಬಾಲಕೃಷ್ಣ ಪೂಜಾರಿ ಪ್ರಸ್ತಾವಿಸಿ, ಸಮಾಜದಲ್ಲಿ ನಮ್ಮ ಮೇಲೆ ಬಹಳ ಋಣಗಳಿವೆ. ಹಿರಿಯರು ನಿರ್ಮಿ ಸಿದ ದೇವಸ್ಥಾನಗಳಲ್ಲಿ ಸೇವೆ ಮಾಡುವ ಅವಕಾಶ ನಮ್ಮ ಪಾಲಿಗೆ ಬಂದಿದೆ. ಆದ್ದರಿಂದ ಈ ಬ್ರಹ್ಮಕಲಶೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ವನದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಾಂತಾಜೆ ಈಶ್ವರ ಭಟ್ ಮಾತನಾಡಿ, ತೀರ್ಥಕೆರೆ, ಸಭಾಭವನ ಅಂಗಣಕ್ಕೆ ಇಂಟರ್‌ಲಾಕ್ ಹಾಗೂ ಇತರ ಕೆಲಸಗಳು ಆಗಬೇಕಿದೆ. ಸುಮಾರು 1.25 ಕೋಟಿ ರೂ. ಅಂದಾಜು ಖರ್ಚು ಬರಬಹುದು. ಇದಕ್ಕಾಗಿ ಎಲ್ಲರು ಸಹಕಾರ ನೀಡುವಂತೆ ತಿಳಿಸಿದರು. ಶರಣ್ಯ ಕಾಂತಾಜೆ ಪ್ರಾರ್ಥಿಸಿ, ರವೀಂದ್ರನಾಥ ಪೆರ್ಮುದೆ ಸ್ವಾಗತಿಸಿ, ಉಪನ್ಯಾಸಕ ಮೋಹನ್ ನಿರೂಪಿಸಿ, ಗಣೇಶ್ ಕಾಂತಾಜೆ ವಂದಿಸಿದರು.
ಕ್ಷೇತ್ರಕ್ಕೆ ರಕ್ಷೆ
ಹಿರಿಯರು ದೇವಸ್ಥಾನವನ್ನು ಬಹಳ ಉದ್ದೇಶವಿಟ್ಟು ನಿರ್ಮಿಸಿದ್ದಾರೆ. ಕ್ಷೇತ್ರದ ಸಾನ್ನಿಧ್ಯವೃದ್ಧಿಗಾಗಿ 12 ವರ್ಷಗಳಿಗೊಮ್ಮೆ ಬ್ರಹ್ಮಕಲಶ ಮಾಡಿದರೆ ಕ್ಷೇತ್ರದಲ್ಲಿ ಜ್ಞಾನ ಮತ್ತು ಆರೋಗ್ಯ ಪೂರಕ ಕೆಲಸವಾಗುತ್ತದೆ. ತೀರ್ಥಕೆರೆಯ ತೀರ್ಥದಿಂದ ಆರೋಗ್ಯ ನೆಮ್ಮದಿ ಪ್ರಾಪ್ತಿಯಾಗುವುದು ಎಂದು ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ನಂದಕುಮಾರ್ ಹೇಳಿದರು.