Advertisement

ಎಂ.ಬಿ.ಪಾಟೀಲ್‌ ವಿರುದ್ಧ ಲಕ್ಷ್ಮಣ ಸವದಿ ಸ್ಪರ್ಧೆ ?

11:46 AM Apr 20, 2022 | Team Udayavani |

ವಿಜಯಪುರ: ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದ್ದರೂ ಜಿಲ್ಲೆಯಲ್ಲಿ ಈಗಾಗಲೇ ಚುನಾವಣೆ ಸಿದ್ಧತೆ ಆರಂಭಗೊಂಡಿವೆ. ನಾಯಕರ ಹೇಳಿಕೆಗಳು, ವರ್ತನೆಗಳು ಚುನಾವಣೆ ತಂತ್ರಗಾರಿಕೆ ಸಿದ್ಧತೆಗೆ ಪುಷ್ಟಿ ನೀಡಿವೆ.

Advertisement

ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರ ಈ ಬಾರಿ ರಾಜಕೀಯ ವರ್ಣರಂಜಿತ ರಣರಂಗಕ್ಕೆ ಸಾಕ್ಷಿಯಾಗುವ ಮುನ್ಸೂಚನೆ ಇದೆ. ಇವರ ವಿರುದ್ಧ ಜೆಡಿಎಸ್‌ನಿಂದ 2 ಬಾರಿ, ಬಿಜೆಪಿಯಿಂದ ಒಂದು ಬಾರಿ ಸೋತಿರುವ ವಿಜುಗೌಡ ಅವರಿಗಿಂತ ಬಲಿಷ್ಠ ಹೊಸ ಮುಖದ ಹುಡುಕಾಟ ನಡೆಸಿದೆ ಬಿಜೆಪಿ. ಆಪರೇಷನ್‌ ಕಮಲದಿಂದ ಅಥಣಿ ಕ್ಷೇತ್ರ ಕಳೆದುಕೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಣ್ಣು ಇದೇ ಕ್ಷೇತ್ರದ ಮೇಲಿದೆ. ಎಂ.ಬಿ. ಪಾಟೀಲ ಅವರನ್ನು ಹೇಗಾದರೂ ಮಾಡಿ ಸೋಲಿ ಸಲು ಕಮಲ ಪಾಳೆಯ ಅದಾಗಲೇ ಆಂತರಿಕ ರಣತಂತ್ರ ರೂಪಿಸಿದೆ.

ಇನ್ನು ಆಡಳಿತಾರೂಢ ಬಿಜೆಪಿ ಬಂಡುಕೋರ ಎಂದೇ ಕರೆಸಿಕೊಂಡಿರುವ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸೋಲಿಸಲೂ ತಂತ್ರಗಾರಿಕೆ ನಡೆದಿದೆ. ಮುಸ್ಲಿಂರು ಹೆಚ್ಚಿದ್ದಾರೆಂಬ ಕಾರಣಕ್ಕೆ ವಿಜಯಪುರ ಕ್ಷೇತ್ರವನ್ನು ಕಾಂಗ್ರೆಸ್‌ ಅಘೋಷಿತ ಮೀಸಲಿನಂತೆ ಇದೇ ಸಮುದಾಯಕ್ಕೆ ಟಿಕೆಟ್‌ ನೀಡುತ್ತಿದೆ. ಆದರೆ ಕಳೆದ ಎರಡೂವರೆ ದಶಕದಲ್ಲಿ ಕಾಂಗ್ರೆಸ್‌ ಒಂದು ಬಾರಿ ಮಾತ್ರ ಡಾ| ಎಂ.ಎಸ್‌.ಬಾಗವಾನ ಮೂಲಕ ಗೆಲ್ಲಲು ಸಾಧ್ಯವಾಗಿದೆ. ಹೀಗಾಗಿ ಯತ್ನಾಳ ಸೋಲಿಸಲು ಮುಸ್ಲಿಮೇತರ ಸಮುದಾಯದ ಸಮರ್ಥ ವ್ಯಕ್ತಿಯನ್ನು ಕಣಕ್ಕಿಳಿಸಬೇಕು. ಇದರಿಂದ ರಾಜಕೀಯ ಅವಕಾಶ ವಂಚಿತ ತಮ್ಮ ಸಮುದಾಯಕ್ಕೆ ರಾಜಕೀಯ ಅಧಿಕಾರದ ಪರ್ಯಾಯ ಅವಕಾಶ ಕಲ್ಪಿಸುವಂತೆ ಅಂತರಿಕ ಸಭೆಗಳನ್ನೂ ನಡೆಸಲಾಗಿದೆ.

ರವಿಕಾಂತ ಪಾಟೀಲ ದುಂಬಾಲು: ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಇಂಡಿ ಕ್ಷೇತ್ರದಲ್ಲಿ ನನಗೆ ಬಿಜೆಪಿ ಟಿಕೆಟ್‌ ನೀಡಿದರೆ ಗೆದ್ದು ತೋರಿಸು ತ್ತೇನೆ ಎಂದು ಸತತ ಮೂರು ಬಾರಿ ಇದೇ ಕ್ಷೇತ್ರ ದಿಂದ ಪಕ್ಷೇತರರಾಗಿ ಗೆದ್ದಿದ್ದ ರವಿಕಾಂತ ಪಾಟೀಲ ಬಹಿರಂಗ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಕಳೆದ ಬಾರಿಯ ಪರಾಜಿತ ದಯಾಸಾಗರ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಸೇರಿದಂತೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ದಿಗಿಲುಗೊಳ್ಳುವಂತೆ ಮಾಡಿದ್ದಾರೆ. ಬಸವನಬಾಗೇವಾಡಿ ಕ್ಷೇತ್ರಕ್ಕೆ ಈರಣ್ಣ ಪಟ್ಟಣಶೆಟ್ಟಿ ಮುಂದಿನ ಶಾಸಕ ಎಂದು ಕೆಲ ಯುವಕರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್‌ ಶಾಸಕ ಶಿವಾನಂದ ಪಾಟೀಲ ಬೆಂಬಲಿಗರನ್ನು ಕೆರಳಿಸಿದೆ. ಇದರಿಂದ ಬೆಚ್ಚಿದ ಪಟ್ಟಣಶೆಟ್ಟಿ ನಾನು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಲ್ಲ, ಅವರಿಗೆ ದ್ರೋಹ ಬಗೆಯಲಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಈ ಬೆಳವಣಿಗೆ ಹಿಂದೆ ಪಕ್ಷ ದಲ್ಲೇ ಇರುವ ಕೆಲವು ನಾಯಕರು ನಡೆಸುತ್ತಿರುವ ಪಿತೂರಿ ಎಂಬ ಗುಮಾನಿಯೂ ಇದೆ.

ಇನ್ನು ಇದೇ ಕ್ಷೇತ್ರದಲ್ಲಿ ಶಿವಾನಂದ ಪಾಟೀಲರನ್ನು ಸೋಲಿಸಬೇಕೆಂದು ಜೆಡಿಎಸ್‌ ಪಕ್ಷದಿಂದ ಹ್ಯಾಟ್ರಿಕ್‌ ಸೋಲು ಕಂಡಿರುವ ಸೋಮನಗೌಡ ಪಾಟೀಲ ಮನಗೂಳಿ ಅವರನ್ನು ಬಿಜೆಪಿ ತನ್ನತ್ತ ಸೆಳೆದಿದೆ. ಟಿಕೆಟ್‌ ನೀಡಿಕೆ ಭರವಸೆ ಇದೆ ಎಂಬ ಮಾತಿದೆ. ಕಳೆದ ಬಾರಿ ಸಂಗರಾಜ ದೇಸಾಯಿಗೆ ಬಿಜೆಪಿ ಮಣೆ ಹಾಕಿದ್ದರಿಂದ ಟಿಕೆಟ್‌ ವಂಚಿತರಾಗಿದ್ದ ಬೆಳ್ಳುಬ್ಬಿ ವಿಜಯಪುರ ಕ್ಷೇತ್ರದಲ್ಲಿ ಜೆಡಿಎಸ್‌ ಟಿಕೆಟ್‌ ಪಡೆದು ಹೀನಾಯ ಸೋಲು ಅನುಭವಿಸಿದ್ದರು. ಮತ್ತೆ ಬಿಜೆಪಿ ಸೇರಿರುವ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಪಾಳೆಯದಲ್ಲಿ ಇದೀಗ ಮತ್ತೆ ಅಸಮಾಧಾನ ಹೊಗೆಯಾಡುತ್ತಿದೆ.

Advertisement

ರಾಜ್ಯ ರಾಜಕಾರಣಕ್ಕೆ ಸಂಸದ ಜಿಗಜಿಣಗಿ?

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಾಗಠಾಣ ಕ್ಷೇತ್ರದಲ್ಲಿ ಸದ್ಯಕ್ಕೆ ಜೆಡಿಎಸ್‌ನ ದೇವಾನಂದ ಚವ್ಹಾಣ ಶಾಸಕರಾಗಿದ್ದು, ಬಿಜೆಪಿಯಿಂದ ಸ್ಪರ್ದಿಸಲು ಕೇಂದ್ರದ ಮಾಜಿ ಸಚಿವ-ಹಾಲಿ ಸಂಸದ ರಮೇಶ ಜಿಗಜಿಣಗಿ ಸಿದ್ಧತೆ ನಡೆಸಿದ್ದಾರೆ. ಕಾಂಗ್ರೆಸ್‌ ಪಕ್ಷ ಮಾಜಿ ಶಾಸಕ ವಿಠ್ಠಲ ಕಟಕದೊಂಡ ಬದಲಿಗೆ ಹೊಸ ಮುಖದ ಹುಡುಕಾಟದಲ್ಲಿದೆ. ಬಿಜೆಪಿ ಶಾಸಕ ಸೋಮನಗೌಡ ಸಾಸನೂರು ದೇವರಹಿಪ್ಪರಗಿ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿ ಹೊಸ ಮುಖದ ಹುಡುಕಾಟದಲ್ಲಿದೆ. ಸಿಂದಗಿ, ಮುದ್ದೇಬಿಹಾಳ, ದೇವರಹಿಪ್ಪರಗಿ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ನಿಂದ ಸದ್ಯಕ್ಕೆ ಕಳೆದ ಬಾರಿಯ ಸಾಂಪ್ರದಾಯಿಕ ಎದುರಾಳಿಗಳೇ ಮತ್ತೆ ಮುಖಾಮುಖೀಯಾಗುವ ಸಾಧ್ಯತೆ ಇದೆ. ಸಂಘಟನೆ ದೃಷ್ಟಿಯಿಂದ ಜೆಡಿಎಸ್‌ ಜಿಲ್ಲೆಯಲ್ಲಿ ದುರ್ಬಲವಾಗಿದೆ, ಚುನಾವಣೆ ವೇಳೆಗೆ ಅನ್ಯ ಪಕ್ಷಗಳ ಟಿಕೆಟ್‌ ವಂಚಿತರು ಈ ಪಕ್ಷದತ್ತ ಜಿಗಿಯುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಆಮ್‌ ಆದ್ಮಿ ಪಕ್ಷದಿಂದಲೂ ಅನ್ಯ ಪಕ್ಷಗಳ ಅಸಮಾಧಾನಿತರು ಸ್ಪರ್ಧಿಸುವ ನಿರೀಕ್ಷೆ ಇದೆ.

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next