ಬೆಂಗಳೂರು: ‘ಕೆಎಸ್ಆರ್ ಟಿಸಿ’ ಪದ ಬಳಕೆಯ ಬಗ್ಗೆ ಏಳು ವರ್ಷಗಳ ಕಾನೂನು ಹೋರಾಟಕ್ಕೆ ಕರ್ನಾಟಕಕ್ಕೆ ಸೋಲಾಗಿರುವ ಬಗ್ಗೆರಾಜ್ಯ ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೇರಳವು ಕೆಎಸ್ಆರ್ ಟಿಸಿ ಎಂಬ ಶಬ್ದವನ್ನು ತಾವೇ ಮೊದಲು ಬಳಸಿದ್ದರಿಂದ ಕರ್ನಾಟಕವು ಈ ಶಬ್ದವನ್ನು ಬಳಸಬಾರದು ಎಂದು ತಕರಾರು ತೆಗೆದ ಬಗ್ಗೆ ಈಗ ಟ್ರೇಡ್ಮಾರ್ಕ್ ರಿಜಿಸ್ಟ್ರಿಯು ತೀರ್ಪು ನೀಡಿದೆ ಎಂದು ಮಾಹಿತಿ ಬಂದಿದೆ. ಆದರೆ ಈ ತೀರ್ಪಿನಲ್ಲಿ ಏನಿದೆ ಎಂಬ ಅಂಶವು ನಮಗೆ ಅಧಿಕೃತವಾಗಿ ಇನ್ನೂ ಬಂದಿಲ್ಲ, ಅದು ಲಭ್ಯವಾದ ನಂತರ ಕರ್ನಾಟಕ ರಾಜ್ಯದ ಮುಂದಿನ ನಿಲುವು ಮತ್ತು ಕಾನೂನು ಹೋರಾಟ ಏನು ಎಂಬುದರ ಬಗ್ಗೆ ತೀರ್ಮಾನಿಸಲಾಗುವುದು ಎಂದಿದ್ದಾರೆ.
ನಮ್ಮದು ಒಕ್ಕೂಟ ವ್ಯವಸ್ಥೆ. ಒಂದು ರಾಜ್ಯವು ಮತ್ತೊಂದು ರಾಜ್ಯದ ಜೊತೆಗೆ ಯಾವುದೇ ಸಂಘರ್ಷವಿಲ್ಲದೆ ಸೌಹಾರ್ದಯುತವಾಗಿ ಸಂಬಂಧವನ್ನು ಇಟ್ಟುಕೊಂಡು ಹೋಗಬೇಕೆಂದು ಈ ವ್ಯವಸ್ತೆ ಹೇಳುತ್ತದೆ. ಆದರೆ ದುರದೃಷ್ಟವಶಾತ್ ಈ ವಿವಾದ ಅನಗತ್ಯವಾಗಿ ಎದ್ದಿದೆ. ಏಕೆಂದರೆ ಖಾಸಗಿ ಸಂಸ್ಥೆಗಳಲ್ಲಾದರೆ ಈ ರೀತಿಯ ಹೆಸರು ಅಥವಾ ಟ್ರೇಡ್ಮಾರ್ಕ್ ಗಳಿಂದ ಅವರ ವ್ಯವಹಾರ ಮತ್ತು ಲಾಭಗಳ ಮೇಲೆ ಪ್ರಭಾವ ಬೀಳುತ್ತದೆ. ಆದರೆ ಸರ್ಕಾರಿ ಸಂಸ್ಥೆಗಳು ಹಾಗಲ್ಲ. ಇಲ್ಲಿ ಜನರ ಸೇವೆಯ ಮುಖ್ಯ. ಕರ್ನಾಟಕವಾಗಲಿ ಕೇರಳವಾಗಲಿ ಪರಸ್ಪರ ಸಾರಿಗೆ ಕ್ಷೇತ್ರದಲ್ಲಿ ಲಾಭಗಳಿಸುವ ಮೇಲಾಟಕ್ಕೆ ಅಥವಾ ಸ್ಪರ್ಧೆಗೆ ಮುಂದಾಗದೆ ಸಾರ್ವಜನಿಕರ ಹಿತಾಸಕ್ತಿ ಮತ್ತು ಸೇವೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿವೆ. ಹೀಗಾಗಿ ಈ ವಿಷಯವನ್ನು ಯಾವುದೇ ರಾಜ್ಯಗಳು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಳ್ಳಬಾರದು ಎಂದು ಸವದಿ ಹೇಳಿದ್ದಾರೆ.
ಇದು ಕೇರಳಕ್ಕೆ ಸಂಭ್ರಮಪಡುವಂತಹ ವಿಚಾರವೇನಲ್ಲ. ಕರ್ನಾಟಕದಲ್ಲಿ ಕೆಎಸ್ಆರ್ ಟಿಸಿ ಎಂಬ ಹೆಸರಿದ್ದರೆ, ಅದರಿಂದ ಕೇರಳ ರಾಜ್ಯದ ಕೆಎಸ್ಆರ್ ಟಿಸಿ ಸಂಸ್ಥೆಗೆ ಯಾವುದೇ ನಷ್ಟವೇನಿಲ್ಲ. ಕರ್ನಾಟಕವು ಕೇರಳದ ಸಾರಿಗೆ ಸಂಸ್ಥೆಗಳೊಂದಿಗೆ ಯಾವತ್ತೂ ಪೈಪೋಟಿಗೆ ಇಳಿದಿದ್ದಿಲ್ಲ ಎಂಬುದನ್ನು ಕೇರಳ ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ.
ಇಂತಹ ವಿಷಯಗಳಲ್ಲಿ ಅನಗತ್ಯವಾಗಿ ವಿವಾದಗಳನ್ನು ಹೆಚ್ಚು ಮಾಡುತ್ತಾ ಪರಸ್ಪರ ರಾಜ್ಯಗಳಲ್ಲಿ ವಿವಾದಗಳನ್ನು ಬೆಳೆಸುವ ಪರಿಪಾಠಕ್ಕೆ ನಾವೆಲ್ಲರೂ ಅಂತ್ಯ ಹಾಡಬೇಕು. ದೇಶದ ಹಿತದೃಷ್ಟಿಯಿಂದ ರಾಜ್ಯ ರಾಜ್ಯಗಳ ನಡುವಿನ ಬಾಂಧವ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾದ ವಿಷಯ ಎಂದು ಸವದಿ ತನ್ನ ಪ್ರಕಟಣೆಯಲ್ಲಿ ಹೇಳಿದ್ದಾರೆ.