Advertisement

ಪರಿಷತ್‌ ಚುನಾವಣೆ: ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಕೆ ಬಹುತೇಕ ಅವಿರೋಧ ಸಾಧ್ಯತೆ

09:18 AM Feb 06, 2020 | Sriram |

ಬೆಂಗಳೂರು: ರಾಜ್ಯ ವಿಧಾನ ಸಭೆಯಿಂದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬುಧವಾರ ನಾಮಪತ್ರ ಸಲ್ಲಿಸಿದರು.

Advertisement

ಲಕ್ಷ್ಮಣ ಸವದಿ ಅವರು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಉಪ ಮುಖ್ಯಮಂತ್ರಿ ಡಾ| ಸಿ.ಎನ್‌.ಅಶ್ವತ್ಥನಾರಾಯಣ್‌, ಸಚಿವರಾದ ಬಸವರಾಜ ಬೊಮ್ಮಾಯಿ, ಆರ್‌.ಅಶೋಕ್‌, ವಿ.ಸೋಮಣ್ಣ, ಸಿ.ಸಿ.ಪಾಟೀಲ್‌, ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ ಉಮೇಶ್‌ ಕತ್ತಿ, ಶಾಸಕ ಮಹೇಶ್‌ ಕುಮಟಳ್ಳಿ ಉಪಸ್ಥಿತರಿದ್ದರು.

ಲಕ್ಷ್ಮಣ ಸವದಿ ನಾಮಪತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಆರ್‌.ಅಶೋಕ್‌, ಸಿ.ಟಿ.ರವಿ, ಸಿ.ಸಿ.ಪಾಟೀಲ್‌, ಶಾಸಕರಾದ ಬೆಳ್ಳಿ ಪ್ರಕಾಶ್‌, ಜ್ಯೋತಿ ಗಣೇಶ್‌ ಸೂಚಕರಾಗಿ ಸಹಿ ಹಾಕಿದ್ದಾರೆ.ಎರಡು ಸೆಟ್‌ ನಾಮಪತ್ರ ಸಲ್ಲಿಸಲಾಗಿದೆ.

ಅವಿರೋಧ ಆಯ್ಕೆ ಸಾಧ್ಯತೆ
ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ ಲಕ್ಷ್ಮಣ ಸವದಿ ಬಹುತೇಕ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದ್ದು, ಅಗತ್ಯ ಬಿದ್ದರೆ ಫೆ. 17 ರಂದು ಚುನಾವಣೆ ನಡೆಯಲಿದೆ.

ಈಗಿರುವ ವಿಧಾನಸಭೆ ಬಲಾಬಲದ ಪ್ರಕಾರ ಆಡಳಿತಾರೂಢ ಬಿಜೆಪಿ 117 ಸಂಖ್ಯಾಬಲ ಹೊಂದಿದೆ. ಒಬ್ಬ ಅಭ್ಯರ್ಥಿ ಗೆಲ್ಲಲು 112 ಮತಗಳ ಅಗತ್ಯವಿದೆ. ಹೀಗಾಗಿ ಬಿಜೆಪಿಗೆ ಸಮಸ್ಯೆ ಇಲ್ಲ. ಕಾಂಗ್ರೆಸ್‌-ಜೆಡಿಎಸ್‌ ಸೇರಿದರೂ 105 ಸಂಖ್ಯೆ ಆಗಲಿದ್ದು ಗೆಲುವು ಕಷ್ಟ.

ಪಕ್ಷದ ನಾಯಕರಿಗೆ ಸವದಿ ಕೃತಜ್ಞತೆ

ವಿಧಾನಪರಿಷತ್‌ ಚುನಾವಣೆಗೆ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಕ್ಕೆ ಪಕ್ಷದ ಎಲ್ಲ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

Advertisement

ನಾಮಪತ್ರ ಸಲ್ಲಿಕೆ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಅವರು, ನಾನು ಕಳೆದ ಐದು ತಿಂಗಳುಗಳಿಂದ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದೆನೆ. ಮೇಲ್ಮನೆ ಅಥವಾ ಕೆಳಮನೆ ಸದಸ್ಯನಾಗುವ ಅನಿವಾರ್ಯತೆ ಇತ್ತು. ಪಕ್ಷ ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದು ನಾಮಪತ್ರ ಸಲ್ಲಿಸಿದ್ದೇನೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಬೆಂಬಲ ನೀಡಿ ಅವಿರೋಧ ಆಯ್ಕೆಗೆ ಸಹಕಾರ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಸಂಪುಟ ವಿಸ್ತರಣೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವುದೇ ಸಂಖ್ಯೆ ಹೇಳಿಲ್ಲ. ಸಂಪುಟ ವಿಸ್ತರಣೆ ಮಾತ್ರ ಎಂದು ಹೇಳಿದ್ದಾರೆ. ಎಲ್ಲದಕ್ಕೂ ಗುರುವಾರ ಬೆಳಗ್ಗೆ ಉತ್ತರ ಸಿಗುತ್ತದೆ ಎಂದು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next