ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ, ಎನ್ ಆರ್‌ಸಿ, ಎನ್‌ಪಿಆರ್ ಜಾತ್ಯತೀತ ವಿರೋಧಿ ನಿಲುವಾಗಿದ್ದು, ಕೂಡಲೇ ಕೇಂದ್ರ ಸರ್ಕಾರ ಈ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾ ವಕೀಲರ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ನಗರದ ಡಾ| ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾ ಸಮಾವೇಶ ನಡೆಸಿದ ಸಮಿತಿ ಸದಸ್ಯರು, ಬಳಿಕ ಎಡಿಸಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರ ಇಂಥ ಕಾಯ್ದೆ ಜಾರಿಗೊಳಿಸುವ ಮುನ್ನ ಸೂಕ್ತ ಚರ್ಚೆ ನಡೆಸಬೇಕು. ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವುದರಿಂದ ಒಂದು ವರ್ಗದ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಗಳು ಸಂವಿಧಾನದ ಜಾತ್ಯತೀತ ಮೂಲತತ್ವಗಳು ಮತ್ತು ಪರಿಚ್ಛೇದ 14 ಸಮಾನತೆ ಆಶಯವನ್ನು ಉಲ್ಲಂಘಿಸಲಿದ್ದು, ನಾಗರಿಕರ ಮನಸ್ಸಿನಲ್ಲಿ ಕಳವಳ ಉಂಟು ಮಾಡಿದೆ. ಮುಸ್ಲಿಂ ದೇಶಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳ ಅನುಭವಿಸಿದ್ದಕ್ಕೆ ಅವರಿಗೆ ಪೌರತ್ವ ನೀಡಲಾಗುವುದು ಎನ್ನುವುದಕ್ಕೆ ಆಕ್ಷೇಪವಿಲ್ಲ.
ಅದರಲ್ಲಿ ಧರ್ಮದ ಆಧಾರದಡಿ ನೀಡುತ್ತೇವೆ ಎನ್ನುವುದಕ್ಕೆ ತೀವ್ರ ವಿರೋಧವಿದೆ. ಬಾಂಗ್ಲಾದೇಶ, ಪಾಕಿಸ್ತಾನ, ಅಫಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಗುರಿಯಾಗಿ 2014ರ ಡಿ.31ರ ಮುಂಚೆ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರಿಗೆ ಮಾತ್ರ ಪೌರತ್ವ ನೀಡುವುದು ತಾರತಮ್ಯ ತೋರಿದಂತಾಗಲಿದೆ. ಇದು ಸಮಾಜದ ಅಶಾಂತಿ ಕದಡಲಿದೆ ಎಂದರು.
ಕೇಂದ್ರ ಸರ್ಕಾರ ದೇಶದ ಆರ್ಥಿಕ ಪ್ರಗತಿ ವಿಚಾರದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಅದನ್ನು ಪ್ರಶ್ನಿಸಿದರೆ ಉತ್ತರಿಸಲಾಗದೆ ಇಂಥ ಕಾಯ್ದೆಗಳನ್ನು ಜಾರಿಗೊಳಿಸಿ ಗಲಭೆ ಸೃಷ್ಟಿಗೆ ಕಾರಣವಾಗುತ್ತಿದೆ. ಕೇಂದ್ರದ ಆರ್ಥಿಕ ನೀತಿಗಳಿಂದ ದೇಶ 40 ವರ್ಷ ಹಿಂದಕ್ಕೆ ಹೋದಂತಾಗಿದೆ ಎಂದು ದೂರಿದರು. ಯುವಕರನ್ನು ದೇಶಭಕ್ತಿ ಹೆಸರಿನಲ್ಲಿ ದಾರಿ ತಪ್ಪಿಸಲಾಗುತ್ತಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಿಎಎ, ಎನ್‌ಆರ್‌ಸಿ, ಎನ್ ಪಿಆರ್‌ಗಳಿಂದ ಯಾವುದೇ ಉಪಯೋಗವಿಲ್ಲ. ಕೂಡಲೇ ಅವುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ವಕೀಲರಾದ ಎಸ್.ಮಾರಪ್ಪ, ಗೌಸ್ ಪಾಷಾ, ಕೆ.ಕರುಣಾಕರ, ಎನ್.ವಾಹಿದ್ ಪಟೇಲ್, ಎ.ಎಂ. ಅಲಿಖಾನ್, ಮಹ್ಮದ ಅಬ್ದುಲ್ ವಾಜೀದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.