Advertisement

Lawyer’s protest: ಗುಲ್ಬರ್ಗದಲ್ಲಿ ವಕೀಲರ ಹತ್ಯೆ; ಸಾಗರದಲ್ಲಿ ಖಂಡನೆ

03:41 PM Dec 08, 2023 | Kavyashree |

ಸಾಗರ: ಗುಲ್ಬರ್ಗದಲ್ಲಿ ಹಾಡುಹಗಲೇ ವಕೀಲರೊಬ್ಬರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ, ಬೆಳಗಾವಿ ಅಧಿವೇಶನದಲ್ಲಿ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿ ಡಿ.8ರ ಶುಕ್ರವಾರ ವಕೀಲರ ಸಂಘದ ವತಿಯಿಂದ ನ್ಯಾಯಾಲಯ ಕಲಾಪದಿಂದ ಹೊರಗೆ ಉಳಿದು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಪ್ರಮುಖರು, ನ್ಯಾಯಾಲಯಗಳಲ್ಲಿ ಕಕ್ಷಿದಾರರಿಗೆ ನ್ಯಾಯದಾನ ಮಾಡುವ ಮೂಲಕ ಕಾನೂನುಸೇವೆ ಮಾಡುತ್ತಿರುವ ವಕೀಲರು ನಿರ್ಭೀತಿಯಿಂದ ತಮ್ಮ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗುತ್ತಿದ್ದು ವಕೀಲರು ಜೀವಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ನ್ಯಾಯಾಲಯದ ಭಾಗವಾಗಿರುವ ವಕೀಲರು ತಮ್ಮ ಕಕ್ಷಿಗಾರರ ಪರ ನಿರ್ಭಯವಾಗಿ ಕೆಲಸ ಮಾಡದಂತೆ ಒತ್ತಡ ಹಾಕುತ್ತಾ ಭಯಭೀತರನ್ನಾಗಿಸಲಾಗುತ್ತಿದೆ ಎಂದು ದೂರಿದರು.

ಚಿಕ್ಕಮಗಳೂರಿನಲ್ಲಿ ವಕೀಲರೊಬ್ಬರ ಮೇಲೆ ಪೊಲೀಸ್ ಠಾಣೆಯಲ್ಲಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದ ಬೆನ್ನಲ್ಲಿಯೆ ಡಿ. ೭ರಂದು ಗುಲ್ಬರ್ಗದಲ್ಲಿ ಹಾಡುಹಗಲೇ ನ್ಯಾಯಾಲಯಕ್ಕೆ ತೆರಳುತ್ತಿದ್ದ ವಕೀಲರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇಂತಹ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ ಎಂದರು.

ಹಿಂದಿನಿಂದಲೂ ವಕೀಲರ ಸಂಘ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿ ಹೋರಾಟ ನಡೆಸಲಾಗಿದೆ. ಆದರೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸದ ಕ್ರಮ ಸರಿಯಲ್ಲ. ಬೆಳಗಾವಿ ಅಧಿವೇಶನದಲ್ಲಿ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ತರದೆ ಹೋದಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಘದ ಎಂ.ರಾಘವೇಂದ್ರ, ವಿ.ಶಂಕರ್, ಎಸ್.ಎಲ್.ಮಂಜುನಾಥ್, ರವೀಶ್, ಕೆ.ವಿ.ಪ್ರವೀಣಕುಮಾರ್, ಜಯಪ್ಪ, ಎಚ್.ಎನ್.ದಿವಾಕರ್, ಜ್ಯೋತಿ, ಮರಿದಾಸ್, ವಿನಯಕುಮಾರ್, ಉಲ್ಲಾಸ್, ಗಣಪತಿ, ಪ್ರೇಮ್ ಸಿಂಗ್, ಪರಿಮಳ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next