ಸಾಗರ: ಮಾ. 13ರಂದು ಶಿಕಾರಿಪುರ ತಾಲೂಕಿನ ತೊಗರ್ಸಿ ಜಾತ್ರೆಯಲ್ಲಿ ಹಿರೇಕೆರೂರು ನ್ಯಾಯವಾದಿ ಜಯದೇವ ಕೆರೋಡಿ ಅವರ ಮೇಲೆ ದೌರ್ಜನ್ಯ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿ ಬುಧವಾರ ವಕೀಲರ ಸಂಘದ ವತಿಯಿಂದ ನ್ಯಾಯಾಲಯ ಕಲಾಪದಿಂದ ಹೊರಗುಳಿದು ಉಪವಿಭಾಗಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರವೀಶ್, ತೊಗರ್ಸಿ ಜಾತ್ರೆಯಲ್ಲಿ ನ್ಯಾಯವಾದಿ ಕೆರೋಡಿ ಅವರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತಿದೆ. ಭಕ್ತರನ್ನು ಸರದಿ ಸಾಲಿನಲ್ಲಿ ಬಿಡಿ ಎಂದು ಮನವಿ ಮಾಡಿದ್ದ ಜಯದೇವ ಅವರನ್ನು ಸಿಪಿಐ ಗುರುರಾಜ ಮೈಲಾರಿ ಮತ್ತು ಪೊಲೀಸ್ ಸಿಬ್ಬಂದಿಗಳು ಮನಸ್ಸೋ ಇಚ್ಛೆ ಲಾಠಿಬೂಟಿನಿಂದ ಹೊರಗೆ ಎಳೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ. ಜೊತೆಗೆ ಮಹಿಳಾ ಸಿಬ್ಬಂದಿ ಮೇಲೆ ಕೈ ಮಾಡಿದ್ದಾರೆಂದು ಸುಳ್ಳು ಆರೋಪ ಹೊರಿಸಿ ಕೈಗೆ ಕೋಳ ತೊಡಿಸಿ ಬಂಧಿಸಿ ಜೈಲಿಗೆ ಕಳಿಸಿರುವ ಕ್ರಮ ಅಮಾನವೀಯವಾಗಿದೆ ಎಂದರು.
ದೇವಸ್ಥಾನದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಈ ಎಲ್ಲ ದೃಶ್ಯಗಳು ಸೆರೆಯಾಗಿದ್ದು ವಕೀಲರು ಯಾವುದೇ ರೀತಿಯ ದುರ್ವತನೆ ತೋರಿಸಿರುವುದಿಲ್ಲ. ಆದರೆ ಕೆಲ ಪೊಲೀಸ್ ಅಧಿಕಾರಿಗಳು ದರ್ಪ ಮರೆದಿದ್ದು ದೃಶ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಮತ್ತು ಕಾನೂನು ರಕ್ಷಣೆ ಮಾಡುತ್ತಿರುವ ವಕೀಲರಿಗೆ ಇಂತಹ ಸ್ಥಿತಿಯಾದರೆ ಜನಸಾಮಾನ್ಯರ ಸ್ಥಿತಿ ಏನು ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಆದ್ದರಿಂದ ದೌಜನ್ಯ ನಡೆಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಪ್ರಕರಣ ನಿಷ್ಪಕ್ಷಪಾತ ತನಿಖೆ ನಡೆಯಬೇಕಾಗಿರುವುದರಿಂದ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಹಿರಿಯ ನ್ಯಾಯವಾದಿ ಮರಿದಾಸ್ ಮಾತನಾಡಿ, ನ್ಯಾಯವಾದಿ ಜಯದೇವ ಕೆರೋಡಿ ಮೇಲೆ ಪೊಲೀಸರು ನಡೆಸಿರುವ ಹಲ್ಲೆ ಅತ್ಯಂತ ಅಮಾನವೀಯವಾಗಿದೆ. ಈ ಹಿನ್ನೆಲೆಯಲ್ಲಿ ವಕೀಲರ ಸಂಘ ವಕೀಲರ ರಕ್ಷಣೆಗಾಗಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತನ್ನಿ ಎನ್ನುವ ಮನವಿಯನ್ನು ಸರ್ಕಾರ ತಕ್ಷಣ ಪುರಸ್ಕರಿಸಬೇಕು. ಜಯದೇವ ಅವರ ಮೇಲೆ ಹಲ್ಲೆ ನಡೆಸಿದವರಿಗೆ ತಕ್ಕಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ರಮೇಶ್ ಮರಸ, ಪ್ರಮುಖರಾದ ಕೆ.ವಿ.ಪ್ರವೀಣ್, ವಿನಯಕುಮಾರ್, ಪರಿಮಳ, ಕೆ.ಟಿ.ಆನಂದ್, ಜಾಹೀದ್ ಅಹ್ಮದ್, ಎಚ್.ಎನ್.ದಿವಾಕರ್, ಎಚ್.ಆರ್.ಶ್ರೀಧರ್, ನಾಗಭೂಷಣ್ ಇನ್ನಿತರರು ಹಾಜರಿದ್ದರು.