ಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಸುಸಜ್ಜಿತವಾದ 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಜಿ+3 ಮಾದರಿಯ ವಕೀಲರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜ. 30ರಂದು ಬೆಳಗ್ಗೆ 9:30 ಗಂಟೆಗೆ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅಶೋಕ ಬಳಿಗಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಸಮಾರಂಭವನ್ನು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕ ಉದ್ಘಾಟಿಸಲಿದ್ದಾರೆ.
ಅತಿಥಿಗಳಾಗಿ ಸಚಿವರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ ಹಾಗೂ ನ್ಯಾಯಮೂರ್ತಿಗಳಾದ ಜಿ. ನರೇಂದರ, ಅಶೋಕನಿಜಗಣ್ಣವರ, ಶಿವಶಂಕರ ಅಮರಣ್ಣವರ, ಪದ್ಮರಾಜ ದೇಸಾಯಿ ಆಗಮಿಸಲಿದ್ದಾರೆ. ಆಡಳಿತಾತ್ಮಕ ನ್ಯಾಯಮೂರ್ತಿ ಶ್ರೀನಿವಾಸ ಹರೀಶ ಕುಮಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ನೂತನ ಕಟ್ಟಡದ ಮೊದಲ ಮಹಡಿಯಲ್ಲಿ ಅಧ್ಯಕ್ಷರ ಚೇಂಬರ್, ಸಹಕಾರ ಸಂಘ ಹಾಗೂ ಇತರೆ ಮೂಲಸೌಕರ್ಯಗಳು ಹಾಗೂ ಎರಡನೇ ಮಹಡಿಯಲ್ಲಿ ಗ್ರಂಥಾಲಯ, ಮಹಿಳಾ ವಕೀಲರ ಸಂಘ ಹಾಗೂ ಮೂರನೇ ಮಹಡಿಯಲ್ಲಿ ಸಭಾಭವನ, ಲಘು ಮನೋರಂಜನಾ ವ್ಯವಸ್ಥೆ,ಸದಸ್ಯರಿಗೆ 1200 ಲಾಕರ್ ಸೇರಿದಂತೆ ಇತರೆ ಸೌಕರ್ಯಗಳು ಇರಲಿವೆ.
ಇದನ್ನೂ ಓದಿ:ಕೇಂದ್ರ ಸರಕಾರದ ಕ್ರಮಕ್ಕೆ ರಾಷ್ಟ್ರಪತಿಮೆಚ್ಚುಗೆ ಪ್ರೇರಣಾದಾಯಕ: ಜೋಶಿ
ಉದ್ಘಾಟನಾ ಸಮಾರಂಭವನ್ನು ಕೋವಿಡ್-19 ನಿಯಮಾವಳಿ ಅನುಸಾರ ನೆರವೇರಿಸಲಾಗುವುದು. 200 ಜನರಿಗೆ ಮಾತ್ರ ಅವಕಾಶವಿದ್ದು, ಇನ್ನುಳಿದವರಿಗೆ ನ್ಯಾಯಾಲಯದ ಸಂಕೀರ್ಣದ ನೆಲಮಹಡಿಯಲ್ಲಿ ಡಿಜಿಟಲ್ ಸ್ಕ್ರೀನಿಂಗ್ ಅಳವಡಿಸಲಾಗಿದೆ ಎಂದರು. ಸಂಘದ ಕಾರ್ಯದರ್ಶಿ ಗುರು ಹಿರೇಮಠ, ಉಪಾಧ್ಯಕ್ಷ ಸುಧಿಧೀಂದ್ರ ಕೊಪ್ಪರ, ಖಜಾಂಚಿ ಜಯರಾಜ ಪಾಟೀಲ, ಸದಸ್ಯೆ ಶೋಭಾ ಪವಾರ, ಬಿ.ವಿ. ಕೋರಿಮಠ ಮೊದಲಾದವರಿದ್ದರು.