Advertisement

ಗಲ್ಲು ಪ್ರಕ್ರಿಯೆ ತೆರೆದಿಟ್ಟ ಲಾರೆನ್ಸ್‌ ಡಿ’ಸೋಜಾ

09:52 AM Mar 20, 2020 | mahesh |

ಮಂಗಳೂರು: ದೇಶದ ಗಮನ ಸೆಳೆದ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವುದಕ್ಕೆ ಒಂದು ದಿನವಷ್ಟೇ ಬಾಕಿಯಿದ್ದು, ದಿಲ್ಲಿಯ ತಿಹಾರ್‌ ಜೈಲಿನಲ್ಲಿ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ.

Advertisement

ತಿಹಾರ್‌ ಜೈಲಿನಲ್ಲಿ ಈ ಹಿಂದೆ ನಡೆದ ಮೂವರು ಅಪರಾಧಿಗಳ ಗಲ್ಲಿಗೇರಿ ಸುವ ಪ್ರಕ್ರಿಯೆಯಲ್ಲಿ ಮಂಗಳೂರಿನ ರೆಕ್ಸ್‌ ಥಾಮಸ್‌ ಲಾರೆನ್ಸ್‌ ಡಿ’ಸೋಜಾ ಮುಂಚೂಣಿಯಲ್ಲಿದ್ದರು. 1982ರಿಂದ 88ರ ವರೆಗೆ
ತಿಹಾರ್‌ ಜೈಲಿನ ಉಪ ಅಧೀಕ್ಷರಾಗಿದ್ದ ಅವರು ಈಗ ಬಜಪೆಯಲ್ಲಿ ನೆಲೆಸಿದ್ದಾರೆ.

ಲಾರೆನ್ಸ್‌ ಡಿ’ಸೋಜಾ ಉಪ ಅಧೀಕ್ಷಕರಾಗಿದ್ದಾಗ ಮೂವರನ್ನು ಗಲ್ಲಿಗೇರಿಸಲಾಗಿತ್ತು. ಇದೀಗ ನಿರ್ಭಯಾ ಪ್ರಕರಣದಲ್ಲಿ ಒಟ್ಟಿಗೆ ನಾಲ್ವರು ಅಪರಾಧಿಗಳ ಕೊರಳಿಗೆ ಕುಣಿಗೆ ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡಿ’ಸೋಜಾ ಅವರು ತಿಹಾರ್‌ ಜೈಲಿನಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸುವ ಪ್ರಕ್ರಿಯೆಗಳನ್ನು “ಉದಯವಾಣಿ’ ಜತೆ ಹಂಚಿಕೊಂಡಿದ್ದಾರೆ.

“ತಿಹಾರ್‌ ಜೈಲಿನಲ್ಲಿ ಉಪ ಜೈಲು ಅಧೀಕ್ಷನಾಗಿದ್ದಾಗ, ಮೂವರನ್ನು ಗಲ್ಲಿಗೇರಿಸುವ ಕಾರ್ಯ ನೆರವೇರಿಸಿದ್ದೆ. ನನ್ನ ಪ್ರಕಾರ ನಾಲ್ವರು ಅಪರಾಧಿಗಳನ್ನು ಒಟ್ಟಿಗೆ ನೇಣಿಗೇರಿಸುವುದು ಇದೇ ಮೊದಲ ಬಾರಿ. ಜೈಲಿಗೆ ಡೆತ್‌ ವಾರೆಂಟ್‌ ತಲುಪಿದ ಕೂಡಲೇ ಉಳಿದ ಕೈದಿಗಳಿಂದ ಪ್ರತ್ಯೇಕಿಸಿ ನೇಣಿಗೆ ಹಾಕುವ ಕೈದಿಗಳನ್ನು ಇರಿಸುವ ವಾರ್ಡ್‌-3ರಲ್ಲಿ ಹಾಕುತ್ತಾರೆ. ಅಲ್ಲಿ ಒಟ್ಟು 8ರಿಂದ 10 ಪ್ರತ್ಯೇಕ ಸಿಂಗಲ್‌ ಸೆಲ್‌ಗ‌ಳಿವೆ. ನೇಣುಗಂಬಕ್ಕೆ ಹಾಕಲು ದಿನಗಳಷ್ಟೇ ಬಾಕಿ ಇದ್ದಾಗ, ಅಪರಾಧಿಗಳು ತಮ್ಮ ಕೊನೆ ಕೋರಿಕೆ ಸಲ್ಲಿಸಬಹುದು.

ಗಲ್ಲಿಗೆ ಹಾಕುವುದಕ್ಕೆ ಕೆಲ ಹೊತ್ತು ಬಾಕಿಯಿದ್ದಾಗ ಜೈಲು ಅಧೀಕ್ಷಕರು-ಉಪ ಅಧೀಕ್ಷಕರು ಕೈದಿಗಳನ್ನು ತಪಾಸಣೆ ನಡೆಸಬೇಕು. ಆಗ ಕೂಡ, ಡೆತ್‌ ವಾರೆಂಟ್‌ ಅನ್ನು ಓದಿ ಹೇಳಲಾಗುತ್ತದೆ. ಅನಂತರ ಕೈದಿಗಳ ಕೈಗಳನ್ನು ಹಿಂದಕ್ಕೆ ಕಟ್ಟಿ ನೇಣು ಕಂಬದ ಬಳಿಗೆ ಕರೆದೊಯ್ಯಲಾಗುತ್ತದೆ. ಈ ವೇಳೆ ಹೆಡ್‌ ವಾರ್ಡರ್‌ ಮುಂಭಾಗದಲ್ಲಿದ್ದು, ಒಟ್ಟು 6 ಮಂದಿ ವಾರ್ಡರ್‌ ಜತೆಗಿರುತ್ತಾರೆ. ಆ ಪೈಕಿ ಮುಂಭಾಗ-ಹಿಂಭಾಗದಲ್ಲಿ ತಲಾ ಇಬ್ಬರು ವಾರ್ಡರ್‌ ಹಾಗೂ ಎಡ-ಬಲಕ್ಕೆ ಒಬ್ಬೊಬ್ಬ ವಾರ್ಡರ್‌ ಕೈದಿಯ ಕೈಗಳನ್ನು ಹಿಡಿದುಕೊಂಡು ನೇಣು ಕಂಬದ ಬಳಿಗೆ ಕರೆತರಬೇಕು. ನಂತರ ಕಾಲುಗಳನ್ನು ಕೂಡ ಕಟ್ಟಬೇಕು. ಆ ಬಳಿಕ, ಹ್ಯಾಂಗ್‌ಮೆನ್‌ ಕೈಗೆ ಅವರೆಲ್ಲರನ್ನು ಒಪ್ಪಿಸಲಾಗುತ್ತದೆ. ಕುತ್ತಿಗೆಗೆ ಹಗ್ಗ ಹಾಕಿದ ಮೇಲೆ ಮುಖವನ್ನು ಕೂಡ ಕಪ್ಪು ಬಟ್ಟೆಯಿಂದ ಮುಚ್ಚಲಾಗುತ್ತದೆ. ಬಳಿಕ ಅವರೆಲ್ಲ ಅಲ್ಲಿಂದ ನಿರ್ಗಮಿಸ‌ಬೇಕು. ಕೂಡಲೇ ಫಾಶೀದಾರ ನೇಣುಗಂಬದ ಬೋಲ್ಟ್ ಎಳೆಯುವುದರೊಂದಿಗೆ ಅಪರಾಧಿಯನ್ನು ಮರಣದಂಡನೆಗೆ ಒಳಪಡಿಸಲಾಗುತ್ತದೆ. ಸುಮಾರು ಅರ್ಧಗಂಟೆ ದೇಹವನ್ನು ಹಾಗೆಯೇ ಬಿಟ್ಟ ನಂತರ ವೈದ್ಯಾಧಿಕಾರಿ ಬಂದು ಅಪರಾಧಿ ಮೃತಪಟ್ಟಿರುವುದನ್ನು ದೃಢಪಡಿಸಲಾಗುತ್ತದೆ. ಈ ಪ್ರಕರಣದಲ್ಲಿ ನಾಲ್ವರನ್ನು ಒಟ್ಟಿಗೆ ಏಕಕಾಲಕ್ಕೆ ಅಥವಾ ಒಬ್ಬೊಬ್ಬರನ್ನೇ ಕರೆದೊಯ್ದು ಗಲ್ಲಿಗೇರಿಸುವ ಸಾಧ್ಯತೆಯಿದೆ’.

Advertisement

“ಈ ಅಪರಾಧಿಗಳ ಮೇಲೆ 24 ಗಂಟೆಯೂ ನಿಗಾ ವಹಿಸಲಾಗುತ್ತದೆ. ಬೆಡ್‌ಶೀಟ್‌ ಮಾತ್ರ ನೀಡಲಾಗುತ್ತದೆ. ಪ್ರಾಮಾಣಿಕ ಜೈಲು ಸಿಬಂದಿಯನ್ನಷ್ಟೇ ಕಾವಲಿಗೆ ನಿಯೋಜಿಸಲಾಗುತ್ತದೆ. ಪ್ರತಿ ದಿನವೂ 8 ತಾಸಿನಂತೆ ತಲಾ ಮೂವರು ವಾರ್ಡರ್‌ಗಳು ಒಬ್ಬ ಅಪರಾಧಿ ಮೇಲೆ ನಿಗಾ ವಹಿಸಿರುತ್ತಾರೆ. ಈ ವಾರ್ಡರ್‌ಗಳು ಕೈಯಲ್ಲಿ ಸದ್ದು ಮಾಡುವ ಮಣಿ ಮತ್ತು ಬೆತ್ತ ಹಿಡಿದುಕೊಂಡು ಕೈದಿಗಳನ್ನು ಎಚ್ಚರಿಸುತ್ತ ಕೊಠಡಿ ಮುಂದೆ ರೌಂಡ್‌ ಹಾಕುತ್ತಿರುತ್ತಾರೆ. ಈ ಕೈದಿಗಳನ್ನು ದಿನಪೂರ್ತಿ ಕೋಣೆ ಒಳಗೆಯೇ ಕೂಡಿ ಹಾಕಲಾಗವುದಿಲ್ಲ. ಬದಲಿಗೆ, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹೊತ್ತು ಸುಮಾರು ಅರ್ಧಗಂಟೆ ಈ ರೀತಿ ಸೆಲ್‌ ಯಾರ್ಡ್‌ನಲ್ಲಿ ವಾಕಿಂಗ್‌, ವ್ಯಾಯಾಮ ಮಾಡಿಸಲಾಗುತ್ತದೆ.’

“ಇನ್ನು ಗಲ್ಲು ವಾರಂಟ್‌ ಬಂದ ಕೂಡಲೇ ಸಮೀಪದ ಯಾವ ಜೈಲಿನಲ್ಲಿ ಗಲ್ಲಿಗೇರಿಸುವ ಫಾಶೀದಾರರು ಇರುತ್ತಾರೋ ಆ ಜೈಲಿಗೆ ಹೋಗಿ ಆವರನ್ನು ಕಳುಹಿಸಿಕೊಡುವಂತೆ ತಿಳಿಸಲಾಗುತ್ತದೆ. ಆದರೆ, ಅವರನ್ನು ಯಾರೂ ಖುದ್ದು ಕರೆದುಕೊಂಡು ಬರುವಂತಿಲ್ಲ. ಆವರು ಯಾರಿಗೂ ಗೊತ್ತಾಗದ ರೀತಿ ನೇಣಿಗೇರಿಸುವುದಕ್ಕಿಂತ ಎರಡು ದಿನ ಮೊದಲು ತಿಹಾರ್‌ ಜೈಲಿನಲ್ಲಿ ವಾಸ್ತವ್ಯ ಹೂಡಬೇಕು. ಅದೇ ರೀತಿ, ಕೈದಿಗಳಿಗೆ ನೀಡುವ ಆಹಾರದ ಬಗ್ಗೆಯೂ ಹೆಚ್ಚು ಗಮನಹರಿಸಲಾಗುತ್ತದೆ. ಜೈಲಿನ ಹೆಡ್‌ ವಾರ್ಡರ್‌ ಖುದ್ದು ಎಲ್ಲ ಕೈದಿಗಳಿಗೆ ತಯಾರಿಸಿಟ್ಟ ಆಹಾರದಿಂದ ಒಟ್ಟಾಗಿ ಆಯ್ಕೆ ಮಾಡಿ ನೀಡಲಾಗುತ್ತದೆ.

ಸಂದರ್ಶನಕ್ಕೆ ಅವಕಾಶ
“ನೇಣುಗಂಬದತ್ತ ಕರೆದೊಯ್ಯುವುದಕ್ಕೂ ಮೊದಲು ಆ ಕೈದಿಗಳು ಧೂಮಪಾನ ಮಾಡಲು ಬಯಸಿದರೆ ಅದನ್ನು ಸರಕಾರದ ಖರ್ಚಿನಲ್ಲಿ ನೆರವೇರಿಸಲಾಗುತ್ತದೆ. ಅಲ್ಲದೆ, ಪುಸ್ತಕ ಓದುವುದಕ್ಕೂ ಅವಕಾಶವಿದೆ. ಕೊನೆ ಕ್ಷಣದಲ್ಲಿ ಬಹಳ ಹತ್ತಿರದ ಸಂಬಂಧಿಕರು, ವಕೀಲರು, ಸಮುದಾಯದ ಧರ್ಮ ಗುರುಗಳಿಗೆ ಈ ಕೈದಿಗಳನ್ನು ಸಂದರ್ಶಿಸುವುದಕ್ಕೆ ಅವಕಾಶವಿದೆ. ನೇಣಿಗೆ ಹಾಕುವ ವಿಶೇಷ ಹಗ್ಗವನ್ನು ವಾರದ ಮೊದಲೇ ಪರಿಶೀಲನೆಗೆ ಒಳಪಡಿಸಿ ಪ್ರತ್ಯೇಕ ಪೆಟ್ಟಿಗೆಯಲ್ಲಿ ಭದ್ರವಾಗಿಡಲಾಗುತ್ತದೆ. ಗಲ್ಲಿಗೇರಿಸುವ ಮುನ್ನಾ ದಿನ ರಾತ್ರಿ ಮತ್ತೆ ಪೆಟ್ಟಿಗೆ ತೆರೆದು ಮತ್ತೆ ತಪಾಸಣೆ ಮಾಡಲಾಗುತ್ತದೆ.

– ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next