ಕ್ಯಾಲಿಫೋರ್ನಿಯಾ: ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಅವರ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ (Anmol Bishnoi) ಅವರನ್ನು ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಕಾನೂನು ಜಾರಿ ಅಧಿಕಾರಿಗಳು ಬಂಧಿಸಿದ್ದಾರೆ ವರದಿಯಾಗಿದೆ.
ಅನ್ಮೋಲ್ ಬಿಷ್ಣೋಯ್ ವಿರುದ್ದ 18 ಪ್ರಕರಣಗಳಿವೆ. ರಾಷ್ಟ್ರೀಯ ತನಿಖಾ ದಳ (NIA) ಅನ್ಮೋಲ್ ಬಿಷ್ಣೋಯ್ ವಿರುದ್ದ 10 ಲಕ್ಷ ರೂ ಘೋಷಿಸಿದೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿಯೂ ಅನ್ಮೋಲ್ ಬಿಷ್ಣೋಯ್ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಪೊಲೀಸರ ತನಿಖೆಯ ಪ್ರಕಾರ ಅನ್ಮೋಲ್ ಬಿಷ್ಣೋಯ್ ಹಂತಕರಿಗೆ ಹಣಕಾಸಿನ ವ್ಯವಸ್ಥೆ ರೂಪಿಸಿದ್ದ.
ಬಾಡಿಗೆ ಹಂತಕರಿಗೆ ಬಾಬಾ ಸಿದ್ದಿಕಿ ಮತ್ತು ಆತನ ಪುತ್ರ ಜೀಶಾನ್ ಫೋಟೊಗಳನ್ನು ಸ್ನಾಪ್ ಚಾಟ್ ಮೂಲಕ ರವಾನಿಸಿದ್ದ. ಹಂತಕರು ಒಂದು ತಿಂಗಳ ಕಾಲ ಯೋಜನೆ ರೂಪಿಸಿ ಸಿದ್ದಿಕಿ ಹತ್ಯೆ ಮಾಡಿದ್ದರು.
2022 ರಲ್ಲಿ ನಡೆದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಮತ್ತು ಈ ವರ್ಷದ ಜೂನ್ನಲ್ಲಿ ನಟ ಸಲ್ಮಾನ್ ಖಾನ್ ಅವರ ಮುಂಬೈ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೇಕಾಗಿರುವ ಆರೋಪಿಯನ್ನು ಯುನೈಟೆಡ್ ಸ್ಟೇಟ್ಸ್ನ ಕ್ಯಾಲಿಫೋರ್ನಿಯಾದಲ್ಲಿ ಸೋಮವಾರ (ನ.18) ಸಂಜೆ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ತಿಂಗಳ ಆರಂಭದಲ್ಲಿ ಮುಂಬೈ ಪೊಲೀಸರ ಅಪರಾಧ ವಿಭಾಗವು ಅವರನ್ನು ಯುಎಸ್ನಿಂದ ಮರಳಿ ಕರೆತರಲು ಹಸ್ತಾಂತರ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಆತನ ಬಂಧನಕ್ಕೆ ಮಹಾರಾಷ್ಟ್ರದ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಜಾಗತಿಕ ಕಾನೂನು ಜಾರಿ ಸಂಸ್ಥೆ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.