ನವದೆಹಲಿ: ಗಾಯಕ ಸಿಧು ಮೂಸೆವಾಲ ಹತ್ಯೆ ಹಿನ್ನೆಲೆಯಲ್ಲಿ, ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಸೂಕ್ತ ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು; ಪಾತಕಿ ಲಾರೆನ್ಸ್ ಬಿಷ್ಣೋಯಿ ಹಿಂಪೆಡಿದ್ದಾರೆ.
ತಾನು ಇದೇ ಅರ್ಜಿಯನ್ನು ಪಂಜಾಬ್‌ನ ಚಂಡೀಗಢ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲು ಬಯಸುವುದಾಗಿ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ, ಗಾಯಕ ಸಿಧು ಮೂಸೆವಾಲ ಅಥವಾ ಶುಭದೀಪ್ ಸಿಂಗ್ ಸಿಧುವನ್ನು ಮೇ 29ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಕುಖ್ಯಾತ ಪಾತಕಿ ಬಿಷ್ಣೋಯಿ ಕೈವಾಡವಿರುವ ಶಂಕೆಯನ್ನು ಪಂಜಾಬ್ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಕೆನಡಾ ಮೂಲದ ಪಾತಕಿ ಗೋಲ್ಡಿ ಬ್ರಾರ್, ಸಿಧು ಹತ್ಯೆಯನ್ನು ತನ್ನ ಮತ್ತು ಲಾರೆನ್ಸ್ ಗುಂಪು ಒಗ್ಗೂಡಿಯೇ ಮಾಡಿದೆ ಎಂದು ಹೇಳಿಕೊಂಡಿದ್ದಾರೆ! ಈ ಹಿನ್ನೆಲೆಯಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿರುವ ಲಾರೆನ್ಸ್‌ರನ್ನು ಪಂಜಾಬ್ ಪೊಲೀಸರ ವಶಕ್ಕೆ ಕೊಡುವ ಸಾಧ್ಯತೆಯಿದೆ.
ಇದೇ ಭೀತಿಯಲ್ಲಿ ಲಾರೆನ್ಸ್ ತನ್ನನ್ನು ಪೊಲೀಸರು ನಕಲಿ ಎನ್‌ಕೌಂಟರ್‌ಗೊಳಪಡಿಸುವ ಭೀತಿಯಿದೆ ಎಂದಿದ್ದಾರೆ. ತನ್ನನ್ನು ಯಾವುದೇ ರಾಜ್ಯದ ಪೊಲೀಸರಿಗೆ ಹಸ್ತಾಂತರಿಸುವಾಗ ಸೂಕ್ತ ಭದ್ರತೆ ನೀಡಬೇಕು, ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡಬೇಕು ಎಂದು ದೆಹಲಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಅನ್ನ ತಿನ್ನುತ್ತಿಲ್ಲ ಸಿಧು ನಾಯಿಗಳು!
ಕೃತಜ್ಞತೆ, ನಂಬಿಕೆಗೆ ಇನ್ನೊಂದು ಹೆಸರೇ ನಾಯಿಗಳು ಎಂಬ ಮಾತೊಂದು ಎಲ್ಲ ಕಡೆ ಚಾಲ್ತಿಯಲ್ಲಿದೆ. ಅದಕ್ಕೊಂದು ನಿದರ್ಶನ ಸಿಕ್ಕಿದೆ. ಮೊನ್ನೆ ಸಿಧು ಹತ್ಯೆಯಾದ ಮೇಲೆ ಅವರ ಎರಡು ನಾಯಿಗಳಾದ ಶೇರಾ ಮತ್ತು ಬಘೇರಾ ಆಹಾರವನ್ನೇ ಸೇವಿಸಿಲ್ಲ. ತಮ್ಮ ಪ್ರೀತಿಯ ಯಜಮಾನ ಮತ್ತೆ ಯಾವಾಗ ಬರುತ್ತಾನೋ ಎಂಬ ಕಾತುರ ಅವುಗಳ ಕಣ್ಣಲ್ಲಿ ಕಾಣುತ್ತಿದೆ. ಸಣ್ಣ ಸದ್ದಾದರೂ ಕುತೂಹಲದಿಂದ ಎದ್ದೇಳುತ್ತವೆ ಎಂದು ಸಿಧು ಅವರ ಊರಾದ ಮೂಸಾ (ಮಾನ್ಸಾ ಜಿಲ್ಲೆ) ನಿವಾಸಿಗಳು ಹೇಳಿಕೊಂಡಿದ್ದಾರೆ.