Advertisement

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

03:44 PM Apr 15, 2024 | ಸುಹಾನ್ ಶೇಕ್ |

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರಿಗೆ ಜೀವ ಬೆದರಿಕೆ ಹಾಗೂ ಪಂಜಾಬಿ ಗಾಯಕ ಸಿಧು ಮೂಸೆವಾಲ ಕೊಲೆ ಪ್ರಕರಣ ಸೇರಿದಂತೆ ಅಪರಾಧ ಜಗತ್ತಿನಲ್ಲಿ ಗ್ಯಾಂಗ್‌ ಸ್ಟರ್‌ ಆಗಿ ಗುರುತಿಸಿಕೊಂಡಿರುವ ಲಾರೆನ್ಸ್ ಬಿಷ್ಣೋಯಿ  ಅವರ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ.

Advertisement

ಭಾನುವಾರ(ಏ.14 ರಂದು) ಸಲ್ಮಾನ್‌ ಖಾನ್‌ ಅವರ ನಿವಾಸದ ಎದುರು ಗುಂಡಿನ ದಾಳಿ ನಡೆಸಿದ ಹಿಂದೆ ಲಾರೆನ್ಸ್ ಬಿಷ್ಣೋಯಿ ತಂಡದ ಹೆಸರು ಕೇಳಿ ಬಂದಿದೆ. ಜೈಲಿನಲ್ಲೇ ಇದ್ದುಕೊಂಡು ತನ್ನ ತಂಡದ ಮೂಲಕ ಪಂಜಾಬಿ ಗಾಯಕರು ಹಾಗೂ ಬಿಟೌನ್ ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕುತ್ತಿರುವ ಈ ಲಾರೆನ್ಸ್ ಬಿಷ್ಣೋಯಿ ಯಾರು? ಕಳೆದ 10 ವರ್ಷಗಳಿಂದ ಅಪರಾಧ ಜಗತ್ತಿನಲ್ಲಿ ಬೆಳೆದ ಲಾರೆನ್ಸ್ ಬಿಷ್ಣೋಯಿ  ಹಿನ್ನೆಲೆ ಏನು? ಎನ್ನುವುದರ ಬಗ್ಗೆ ಒಂದು ವರದಿ ಇಲ್ಲಿದೆ.

ಪೊಲೀಸ್‌ ಕಾನ್ಸ್‌ ಸ್ಟೇಬಲ್‌ ಮಗ: ಲಾರೆನ್ಸ್ ಬಿಷ್ಣೋಯಿಯದು ಮಧ್ಯಮ ವರ್ಗದ ಕುಟುಂಬದ. ಪೊಲೀಸ್‌ ಕಾನ್ಸ್‌ ಸ್ಟೇಬಲ್‌ ಆಗಿರುವ ತಂದೆಗೆ ಊರಿನವರ ಮುಂದೆ ನಾಲ್ಕು ಮಾತಿನ ಗೌರವ ಸಿಗುತ್ತಿತ್ತು. ತಂದೆ ಅಂದುಕೊಂಡಂತೆ ಆಗಿದ್ದರೆ ಮಗ ಲಾರೆನ್ಸ್‌ ಇಂದು ಒಳ್ಳೆಯ ಅಧಿಕಾರಿಯೊ, ಒಳ್ಳೆಯ ಕೆಲಸದಲ್ಲೋ ಇರುತ್ತಿದ್ದ ಆದರೆ ಆದದ್ದೇ ಬೇರೆ.

ಹರಿಯಾಣ ಪೊಲೀಸ್ ಪೇದೆಯ ಮಗನಾಗಿದ್ದ ಲಾರೆನ್ಸ್ ಪಂಜಾಬ್‌ನ ಫಿರೋಜ್‌ಪುರದಲ್ಲಿ ಜನಿಸಿ ಉನ್ನತ ಶಿಕ್ಷಣವನ್ನು ಪಡೆದು, ಪಂಜಾಬ್ ವಿಶ್ವವಿದ್ಯಾಲಯದಿಂದ ಎಲ್‌ ಎಲ್‌ ಬಿ ಪದವಿಯನ್ನು ಪಡೆದರು. ಶಿಕ್ಷಿತನಾಗಿದ್ದ ಮಗನನ್ನು ನೋಡಿ ಗೌರವ ಪಡುತ್ತಿದ್ದ ಕುಟುಂಬ, ಮಗನ ರಾಜಕೀಯ ಸೇರ್ಪಡೆಯಿಂದ ಗೌರವ ಕಳೆದುಕೊಳ್ಳುವಂತಾಗಿತ್ತು.

ಅದು ಲಾರೆನ್ಸ್‌ ಕಾಲೇಜಿನಲ್ಲಿದ್ದ ಸಮಯ. ಚಂಡೀಗಢದಲ್ಲಿ ನಡೆದ ಕಾಲೇಜು ಚುನಾವಣೆಗಳಲ್ಲಿ ವಿದ್ಯಾರ್ಥಿ ರಾಜಕೀಯಕ್ಕೆ ಮೊದಲ ಬಾರಿಗೆ ಲಾರೆನ್ಸ್‌ ಎಂಟ್ರಿ ಕೊಟ್ಟಿದ್ದ. ಇದು ಆತನ ಅಪರಾಧ ಜಗತ್ತಿನ ಪ್ರಾರಂಭಿಕ ಹೆಜ್ಜೆಗಳಾಗಿತ್ತು. ಶಿಕ್ಷಣ ಪಡೆದು ಒಳ್ಳೆಯ ದಾರಿಯಲ್ಲಿ ಸಾಗಬೇಕಿದ್ದ ಲಾರೆನ್ಸ್‌ ಕಾಲೇಜು ದಿನದಲ್ಲೇ ಕುಖ್ಯಾತ ದರೋಡೆಕೋರನಾಗಿದ್ದ ಜಗ್ಗು ಭಗವಾನ್‌ಪುರಿಯ ತಂಡದಲ್ಲಿ ಕಾಣಿಸಿಕೊಳ್ಳುತ್ತಾರೆ. ಸಣ್ಣಪುಟ್ಟ ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಾರೆ. 2013 ರಲ್ಲಿ ಕಾಲೇಜು ಚುನಾವಣೆಯ ವಿಜೇತ ಅಭ್ಯರ್ಥಿ ಮತ್ತು ಲುಧಿಯಾನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಸಮಯದಲ್ಲಿ ಪ್ರತಿಸ್ಪರ್ಧಿ ಅಭ್ಯರ್ಥಿ ಆಗಿದ್ದಾತನನ್ನು ಗುಂಡಿಕ್ಕಿ ಹತ್ಯೆಗೈಯುವ ಮೂಲಕ ಅಪರಾಧ ಜಗತ್ತಿನಲ್ಲಿ ಮೊದಲ ಕ್ರೂರ ಅಧ್ಯಾಯಕ್ಕೆ ಮುನ್ನುಡಿ ಬರೆದುಬಿಟ್ಟಿದ್ದ. ಇದಾದ ಬಳಿಕ 2014 ರಲ್ಲಿ ರಾಜಸ್ಥಾನ ಪೊಲೀಸರ ಎನ್‌ಕೌಂಟರ್‌ನಲ್ಲಿ ಗುಂಡೇಟು ತಿಂದು ಜೈಲುಪಾಲಾಗುತ್ತಾನೆ.

Advertisement

ಕೆಲ ಸಮಯದ ಬಳಿಕ ಜೈಲಿನಿಂದ ಜಾಮೀನು ಪಡೆದು ಹೊರಬಂದ ಬಿಷ್ಣೋಯಿ ಮತ್ತೆ ಅಪರಾಧ ಜಗತ್ತಿನಲ್ಲಿ ನಾನಾ ಕೃತ್ಯವನ್ನು ಎಸೆಗುತ್ತಾನೆ. ಈ ಕಾರಣದಿಂದ 2016 ರಲ್ಲಿ ಮತ್ತೆ ಬಂಧನಕ್ಕೊಳಾಗುತ್ತಾನೆ.  2021 ರವರೆಗೆ ರಾಜಸ್ಥಾನದ ಜೈಲಿನಲ್ಲಿದ್ದ ಬಿಷ್ಣೋಯಿಯನ್ನು ನಂತರ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ದೆಹಲಿಯ ತಿಹಾರ್ ಜೈಲಿಗೆ ವರ್ಗಾಯಿಸಲಾಗುತ್ತದೆ.

ಆದರೆ ಜೈಲಿನಲ್ಲಿದ್ದುಕೊಂಡೇ ಬಿಷ್ಣೋಯಿ  ತನ್ನ ಕ್ರಿಮಿನಲ್ ನೆಟ್‌ವರ್ಕ್ ನ್ನು  ಬೆಳೆಸುತ್ತಾನೆ. ಬಿಷ್ಣೋಯಿ ಭಾರತದಲ್ಲಿನ 5 ರಾಜ್ಯಗಳಲ್ಲಿ ಸುಮಾರು 700 ಶಾರ್ಪ್‌ಶೂಟರ್‌ಗಳ ಗ್ಯಾಂಗ್‌ಗೆ ಕಮಾಂಡರ್ ಆಗಿದ್ದು, ಈತನ ಸಂಪರ್ಕ ಕೆನಡಾದವರೆಗೂ ಇದೆ. ಈತನ ವಿರುದ್ಧ ಕೊಲೆ, ಕೊಲೆ ಯತ್ನ, ಬೆದರಿಕೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.

2018 ರಲ್ಲಿ ಬಿಷ್ಣೋಯಿ ಹೆಸರು ಭಾರತದಲ್ಲಿ ಸಂಚಲನ ಸೃಷ್ಟಿಸುತ್ತದೆ. ಅದಕ್ಕೆ ಕಾರಣ ಬಿಷ್ಣೋಯಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್ ಅವರಿಗೆ ಜೀವ ಬೆದರಿಕೆಯನ್ನು ಹಾಕಿದ್ದು!.

1998ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಶೂಟಿಂಗ್​ಗಾಗಿ ಸಲ್ಮಾನ್​ ಖಾನ್​ ರಾಜಸ್ಥಾನದ ಜೋಧ್‌ಪುರಕ್ಕೆ ತೆರಳಿದ್ದರು.  ಆ ಸಮಯದಲ್ಲಿ ಸಲ್ಮಾನ್ ಖಾನ್ ಒಂದು ಕೃಷ್ಣ ಮೃಗವನ್ನು ಬೇಟೆಯಾಡಿದ್ದರು.  ಬಿಷ್ಣೋಯಿ ಸಮುದಾಯದವರು ಪ್ರಕೃತಿ ಆರಾಧಕರು. ಬಿಷ್ಣೋಯಿಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ, ಈ ಪ್ರಾಣಿಯನ್ನು ಕೊಲ್ಲುವುದನ್ನು ಅಥವಾ ಮರವನ್ನು ಕಡಿಯುವುದನ್ನು ಬಿಷ್ಣೋಯಿಗಳು ಎಂದಿಗೂ ಸಹಿಸುವುದಿಲ್ಲ.

ಅಂದಿನಿಂದ ಇಂದಿನವರೆಗೆ ಸಲ್ಮಾನ್‌ ಖಾನ್‌ ಅವರಿಗೆ ಅನೇಕ ಬಾರಿ ಗ್ಯಾಂಗ್ ಸ್ಟರ್‌ ಲಾರೆನ್ಸ್‌ ಇ-ಮೇಲ್‌ ಮೂಲಕ ಬೆದರಿಕೆಯನ್ನು ಹಾಕುತ್ತಲೇ ಬಂದಿದ್ದ. ಇತ್ತೀಚೆಗೆ ಗುಂಡಿನ ದಾಳಿ ನಡೆಸಿ, ಮತ್ತೊಮ್ಮೆ ಸಲ್ಮಾನ್‌ ಖಾನ್‌ ಗೆ ಎಚ್ಚರಿಕೆಯನ್ನು ನೀಡಿದ್ದ. 2022 ಹಾಗೂ 2023 ರ ಅವಧಿಯಲ್ಲಿ ಬಿಷ್ಣೋಯಿ ಹಲವು ಬಾರಿ ಸಲ್ಮಾನ್‌ ಖಾನ್‌ ಗೆ ಬೆದರಿಕೆಯನ್ನು ಹಾಕಿದ್ದ.

-ಸುಹಾನ್‌ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next