Advertisement

ಕಾನೂನಿಗಿದೆ ನೆಮ್ಮದಿಯ ಬದುಕು ನೀಡುವ ಸಾಮರ್ಥ್ಯ

04:44 PM Nov 24, 2018 | Team Udayavani |

ಚಳ್ಳಕೆರೆ: ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ನೆಮ್ಮದಿಯ ಬದುಕನ್ನು ನೀಡುವ ಸಾಮರ್ಥ್ಯ ಮತ್ತು ಶಕ್ತಿ ಕೇವಲ ಕಾನೂನಿಗೆ ಮಾತ್ರ ಇದೆ ಎಂದು ಸಿವಿಲ್‌ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ದೇವೇಂದ್ರ ಪಂಡಿತ್‌ ಹೇಳಿದರು.

Advertisement

ಇಲ್ಲಿನ ಗಿರಿಯಮ್ಮ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಗಿರಿಯಮ್ಮ ಮಹಿಳಾ ಕಾಲೇಜಿನ ಆಡಳಿತ ಮಂಡಳಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
 ನಮ್ಮ ರಾಷ್ಟ್ರದಲ್ಲಿ ರೂಪಿತವಾಗಿರುವ ಎಲ್ಲ ಕಾನೂನುಗಳು ಮೌಲ್ಯಯುತ ಬದುಕನ್ನು ನೀಡುವ ಸಾಧನವಾಗಿದ್ದು, ಕಾನೂನನ್ನು ಗೌರವಿಸುವ ವ್ಯಕ್ತಿ ಮಾತ್ರ ಬದುಕಿನಲ್ಲಿ ಗುರಿಮುಟ್ಟಲು ಸಾಧ್ಯ ಎಂದರು. 

ರಾಜ್ಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸಹ ಸಮಾಜದಲ್ಲಿ ಉತ್ತಮ ಬದುಕನ್ನು ಕಂಡುಕೊಳ್ಳಲು ಆರ್ಹನಿದ್ದಾನೆ. ಅವರ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಉಂಟಾಗಬಾರದು. ಯಾವುದೇ ಶಕ್ತಿಗಳು ಬದುಕನ್ನು ಅಸ್ಥಿರಗೊಳಿಸುವ ಯತ್ನ ಮಾಡಬಾರದು. ಈ ಹಿನ್ನೆಲೆಯಲ್ಲಿ ಕಾನೂನುಗಳು ರೂಪಿತವಾಗಿವೆ ಎಂದರು.

ಪ್ರಸ್ತುತ 3625 ಕಾನೂನುಗಳು ಜಾರಿಯಲ್ಲಿವೆ. ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸುವ ಮೂಲ ಉದ್ದೇಶ ಹೊಂದಲಾಗಿದೆ. ವಿದ್ಯಾರ್ಥಿಗಳು ಸಹ ತಮ್ಮ ವಿದ್ಯಾರ್ಥಿ ಜೀವನದ ಸುಂದರ ದಿನಗಳನ್ನು ಕಳೆದ ನಂತರ ಬದುಕನ್ನು ರೂಪಿಸಿಕೊಳ್ಳಲು ಕಾನೂನಿನ ಸಹಕಾರವನ್ನು ಪಡೆಯಬೇಕು ಎಂದು ಹೇಳಿದರು. 

ಕೋಟೆಪ್ಪ ಕಾಂಬ್ಳೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಾಲಕಿಯರು, ಯುವತಿಯರು ಮತ್ತು ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ನಿಯಂತ್ರಿಸಲು ಪೋಕ್ಸೋ ಕಾನೂನನ್ನು ಜಾರಿಗೆ ತರಲಾಗಿದೆ. ಇದರಿಂದ ದೌರ್ಜನ್ಯಗಳು ನಿಯಂತ್ರಣಗೊಂಡಿದ್ದರೂ ಇನ್ನೂ ಮಹಿಳಾ ಸಮುದಾಯದ ಮೇಲೆ ನಡೆಯುವ ಕ್ರೌರ್ಯಗಳು ಸಂಪೂರ್ಣವಾಗಿ ನಿಂತಿಲ್ಲ
ಎಂದರು. ಪ್ರತಿಯೊಂದು ಹಂತದಲ್ಲೂ ಕಾನೂನಿನ ಸಹಕಾರವಿದ್ದರೂ ಸಹ ಬಹುತೇಕ ಪ್ರಕರಣಗಳಲ್ಲಿ ಮಹಿಳೆಯರು ಮಾಹಿತಿ ನೀಡುವಲ್ಲಿ ಹಿಂದೇಟು ಹಾಕುತ್ತಾರೆ. ನ್ಯಾಯಾಂಗ ಇಲಾಖೆ ಮಹಿಳೆಯ ಸಂರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದೆ. ವಿದ್ಯಾರ್ಥಿನಿಯರು ತಮ್ಮ ಭವಿಷ್ಯದ ದಿನಗಳನ್ನು ಉಜ್ವಲಗೊಳಿಸಲು ಶ್ರಮವರಿತು ಅಭ್ಯಾಸ ಮಾಡಬೇಕು. ಲೈಂಗಿಕ ವಿಷಯಗಳಿಂದ ದೂರವಿರಬೇಕು ಎಂದರು.

Advertisement

ನ್ಯಾಯಾಧಿಧೀಶರಾದ ಜನಾರ್ಧನ್‌ ಮಾತನಾಡಿ, ಕಾನೂನಿನ ಪರಿಕಲ್ಪನೆಯ ಬಗ್ಗೆ  ಜನಸಾಮಾನ್ಯರಿಗೆ ಹೆಚ್ಚು ಅರಿವು ಇರದು. ಈ ನಿಟ್ಟಿನಲ್ಲಿ ರಾಜ್ಯ ನ್ಯಾಯಾಂಗ ಪ್ರಾಧಿಕಾರ ಪ್ರತಿ ಗ್ರಾಮದಲ್ಲೂ ಕಾನೂನು ಅರಿಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇವು ಪ್ರತಿಯೊಬ್ಬರ ಬದುಕಿಗೆ ಉತ್ತಮ ಆಸರೆಯಾಗಲಿವೆ ಎಂದು ಹೇಳಿದರು. 

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು ಮಾತನಾಡಿ, ಸಾರ್ವಜನಿಕರ ಬದುಕಿನಲ್ಲಿ ಉಂಟಾಗಬಹುದಾದ ತೊಡಕುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿಯೇ ಕಾನೂನುಗಳು ಜಾರಿಯಲ್ಲಿವೆ. ಪ್ರತಿಯೊಂದು ಕಾನೂನು ಸಹ ಜನರ ರಕ್ಷಣೆಗೆ ಇದ್ದು, ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ವಕೀಲರ ಸಂಘದ ಉಪಾಧ್ಯಕ್ಷ ಜಿ.ಬಿ. ಬೋರಯ್ಯ, ಕಾರ್ಯದರ್ಶಿ ಕೆ. ಹನುಮಂತಪ್ಪ, ಸೇವಾ ಸಮಿತಿ ಸಲಹೆಗಾರ ಕುರುಡಿಹಳ್ಳಿ ಶ್ರೀನಿವಾಸ್‌ ಮಾತನಾಡಿದರು. ಪ್ರಾಂಶುಪಾಲ ಮಂಜುನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಮೋಹನ್‌, ತ್ರೀವೇಣಿ, ಪುಷ್ಪಾಲತಾ, ಸೌಮ್ಯಾ, ಭುವನೇಶ್ವರಿ, ಶೈಲಜಾ, ಮಲ್ಲಿಕಾರ್ಜುನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next