Advertisement

ನಾಯಿ ದಾಳಿ ತಪ್ಪಿಸಲು ಕಾನೂನು ಮೊರೆ

01:19 AM Jun 27, 2019 | Lakshmi GovindaRaj |

ಬೆಂಗಳೂರು: ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಂತರ ನಾಯಿಗಳನ್ನು 72 ಗಂಟೆಗಳಿಗಿಂತ ಹೆಚ್ಚು ಕಾಲ ಕೂಡಿಹಾಕುವಂತಿಲ್ಲ. ಹೀಗಾಗಿ, ಕಾನೂನಿನ ಮೂಲಕವೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ತಿಳಿಸಿದರು.

Advertisement

ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಬಿಬಿಎಂಪಿ ಪಶುಸಂಗೋಪನೆ ವಿಭಾಗದ ಅಧಿಕಾರಿಗಳೊಂದಿಗೆ ನೀಲಸಂದ್ರದ ರೋಸ್‌ಗಾರ್ಡ್‌ನ್‌ ಮತ್ತು ಆಸ್ಟಿಂಗ್‌ಟೌನ್‌ನ ಬಿಬಿಎಂಪಿ ಬಾಲಕರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಅವರು ಮಾತನಾಡಿದರು.

ನೀಲಸಂದ್ರದ ರೋಸ್‌ಗಾರ್ಡನಲ್ಲಿ ನಾಯಿಗಳ ದಾಳಿಗೆ ತುತ್ತಾದ 4 ವರ್ಷದ ಹೆಣ್ಣು ಮಗು ಅನುಕೃಪ ಮನೆಗೆ ಭೇಟಿ ನೀಡಿದ ಮೇಯರ್‌, ಮಗುವಿನ ಆರೋಗ್ಯ ವಿಚಾರಿಸಿ, ಚಿಕಿತ್ಸಾ ವೆಚ್ಚವನ್ನು ಮೇಯರ್‌ ನಿಧಿಯಿಂದಲೇ ಭರಿಸುವುದಾಗಿ ಭರವಸೆ ನೀಡಿದರು.

ಅನುಕೃಪ ಮೇಲೆ ಶನಿವಾರ ನಾಯಿಗಳು ದಾಳಿ ಮಾಡಿದ್ದರಿಂದ ಮಗುವಿನ ಕಣ್ಣು ಮತ್ತು ಕೆನ್ನಯ ಭಾಗದಲ್ಲಿ ಗಾಯಗಳಾಗಿದ್ದವು. ಇಲ್ಲಿ ಶ್ವಾನಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಸರಿಯಾಗಿ ಆಗದೆ ಇರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದರು.

ಈ ವೇಳೆ ಮಾತನಾಡಿದ ಮೇಯರ್‌, ನೀಲಸಂದ್ರದ ಸುತ್ತಮುತ್ತಲಿನ ಪ್ರದೇಶದಲ್ಲಿ ಅನುಮತಿ ಪಡೆಯದೆ ಮಾಂಸ ಮಾರಾಟ ಮಾಡುತ್ತಿರುವ ಮತ್ತು ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡದ ಮಾಂಸದ ಅಂಗಡಿಗಳನ್ನು ಮುಚ್ಚಿಸುವಂತೆ ಆದೇಶಿಸಿದರು.

Advertisement

ಆಸ್ಟಿಂಗ್‌ಟೌನ್‌ನ ಬಿಬಿಎಂಪಿ ಬಾಲಕರ ಶಾಲೆಯ ಆವರಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದರಿಂದ ಮೇಯರ್‌ ಪರಿಶೀಲನೆ ನಡೆಸಿದರು. ಈ ವೇಳೆ ಶಾಲೆಯ ಆವರಣದಲ್ಲಿ 30ಕ್ಕೂ ಹೆಚ್ಚು ನಾಯಿಗಳು ಇರುವುದು ಕಂಡುಬಂತು.

ನಾಯಿಗಳು ಶಾಲೆಯ ಒಳಗೆ ಬರದಂತೆ ತಡೆಯಲು ಕಾಂಪೌಂಡ್‌ ಸರಿಪಡಿಸುವಂತೆ ಹಾಗೂ ತ್ಯಾಜ್ಯ ವಿಲೇವಾರಿ ವಾಹನವನ್ನು ಶಾಲೆಯ ಸಮೀಪ ನಿಲ್ಲಿಸದಂತೆ ಅಧಿಕಾರಿಗಳಿಗೆ ಮೇಯರ್‌ ಸೂಚಿಸಿದರು.ಈ ವರ್ಷ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಟೆಂಡರ್‌ ತಡವಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು,

“ಈ ಬಾರಿ ಕೆಲವು ಅಡೆತಡೆಗಳಿಂದ ಟೆಂಡರ್‌ ಪ್ರಕ್ರಿಯೆ ತಡವಾಗಿದ್ದು, ಇನ್ನೊಂದು ವಾರದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಸರ್ಮಪಕವಾಗಿ ಕೆಲಸ ಮಾಡಿಲ್ಲ. ಸರ್ಮಪಕವಾಗಿ ನಡೆದಿದ್ದರೆ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರಲಿಲ್ಲ. ಹೀಗಾಗಿ, ಕೆಲಸ ಮಾಡದ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಎಬಿಸಿ ಹಗರಣದ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ಇದನ್ನು ಪರಿಶೀಲಿಸಿ ಮುಂದಿನ ಕ್ರಮಗಳ ಬಗ್ಗೆ ಚಿಂತಿಸಲಾಗುವುದು ಮತ್ತು ಎಲ್ಲ ಪ್ರದೇಶಗಳಲ್ಲಿ ನಾಯಿಗಳಿಗೆ ಕಡ್ಡಾಯವಾಗಿ ಎಬಿಸಿ ಮಾಡುವಂತೆ ಪಶುಸಂಗೋಪನೆ ಇಲಾಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next