ಕನಕಪುರ: 1909ರಲ್ಲಿ ಅಮೇರಿಕಾದಲ್ಲಿ ನಡೆಯುತ್ತಿದ್ದ ಮಹಿಳಾ ದೌರ್ಜನ್ಯ ತಡೆಯಲು ಅಲ್ಲಿನ ಮಹಿಳೆಯರು ಪ್ರತಿಭಟನೆಗೆ ಮುಂದಾದಗ ಜಾರಿಗೆ ಬಂದ ಕಾನೂನು ಮಹಿಳೆ ಸಂರಕ್ಷಣಾ ಕಾಯ್ದೆಯಾಗಿದೆ. ಇಂದು ಸಮಾಜದಲ್ಲಿನ ಅಸಮತೋಲನವನ್ನು ತಡೆಗೆ ಉಪಯುಕ್ತವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ. ವೇಣುಗೋಪಾಲ್ ಹೇಳಿದರು.
ನಗರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮಲ್ಲಿರುವ ಮಹಿಳೆಯರು ಎಲ್ಲಾ ಕಾನೂನುಗಳನ್ನು ತಿಳಿಯಲು ಸಾಧ್ಯವಿಲ್ಲ. ಮಹಿಳೆಯರು ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು.
ನಮ್ಮ ಸಮಾಜದಲ್ಲಿ ಎಷ್ಟೇ ಕಾನೂನುಗಳನ್ನು ಜಾರಿಗೆ ತಂದರೂ ಸಹ ಮಹಿಳೆಯರ ಮೇಲಿನ ದೌರ್ಜನ್ಯ, ಭ್ರೂಣ ಹತ್ಯೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಮಹಿಳೆಯರು ತಮ್ಮ ಹಕ್ಕುಗಳನ್ನು ಕಾನೂನಿನ ಮೂಲಕ ರಕ್ಷಣೆ ಮಾಡಿಕೊಳ್ಳಬೇಕು. ಮಹಿಳೆಯರಿಗಾಗಿ ನೀಡಿದ ಆಸ್ತಿಯ ಹಕ್ಕು, ಸಮಾನತೆ ಹಕ್ಕು ಸೇರಿದಂತೆ ಇನ್ನಿತರೆ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದರು.
ವರದಕ್ಷಣೆ ಸಾಮಾಜಿಕ ಪಿಡುಗು: ವಕೀಲೆ ವಿಮಲ ಮಾತನಾಡಿ, ವರದಕ್ಷಣೆ ಸಾಮಾಜಿಕ ಪಿಡುಗಾಗಿದೆ. ಅಂದು ಉಡುಗೊರೆಯಾಗಿ ನೀಡುತ್ತಿದ್ದದನ್ನು ಇಂದು ವದು ವರನಿಗೆ ದಕ್ಷಿಣೆಯನ್ನಾಗಿ ನೋಡಬೇಕಿದೆ. ಇದರಿಂದ ಅನೇಕ ಮಹಿಳೆಯರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ನಂತರ ಈ ಕಾಯ್ದೆಗೆ ತಿದ್ದುಪಡಿ ತಂದು ಮಹಿಳೆಯರಿಗೆ ರಕ್ಷಣೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಾಚೀನ ಕಾಲದಲ್ಲಿ ಮಹಿಳೆಗೆ ಗೌರವ: ವಕೀಲೆ ಅನಿತಾ ಮಾತನಾಡಿ, ನಮ್ಮ ಪುರಾತನ ಗ್ರಂಥಗಳಾದ ರಾಮಾಯಣ, ಮಹಾಭಾರತದ ಕಾಲದಲ್ಲಿ ಮಹಿಳೆಯರಿಗೆ ಇದ್ದಷ್ಟು ಗೌರವ ಇಂದು ಸಿಗುತ್ತಿಲ್ಲ. ಇಂದು ನಮ್ಮ ಸಮಾಜದಲ್ಲಿ ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ಪಡೆದುಕೊಳ್ಳಲು ಶಿಕ್ಷಣದ ಅವಶ್ಯವಿದೆ.
ಅದನ್ನು ಸರ್ಕಾರ ಮಹಿಳೆಯರಿಗೆ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ತಂದು ಮಹಿಳೆಯರನ್ನು ತಿರಸ್ಕಾರದಿಂದ ನೋಡುವುದನ್ನು ತಪ್ಪಿಸಿದಂತಾಗಿದೆ. ಯಾವುದೇ ಮಹಿಳೆ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ಪಡೆದ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮಾತ್ರ ಕಾನೂನು ಬಳಸಿಕೊಳ್ಳಬೇಕು. ಅವುಗಳನ್ನು ದುರ್ಬಳಕೆ ಮಾಡಬಾರದು ಎಂದರು.
ಈ ವೇಳೆ ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ಜೆ. ಹನುಮಂತ, ವಕೀಲ ಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಗಿರಿಧರ, ಕಾರ್ಯದರ್ಶಿ ದೇವೂರಾವ್‌ಜಾಧವ್, ಹಿರಿಯ ವಕೀಲರಾದ ರಾಮಚಂದ್ರು, ಕಾಮೇಶ್, ದೇವದಾಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸುರೇಂದ್ರ ಸೇರಿದಂತೆ ಅಂಗನವಾಡಿ ಶಿಕ್ಷಕಿಯರು ಹಾಜರಿದ್ದರು.