Advertisement

ಗುಂಪು ಥಳಿತ ಕೃತ್ಯ ತಡೆಗೆ ಕಾನೂನು?

06:00 AM Aug 21, 2018 | Team Udayavani |

ನವದೆಹಲಿ: ವದಂತಿಗಳನ್ನು ನಂಬಿ ನಡೆಸಲಾಗುವ ಗುಂಪು ಥಳಿತ ತಡೆಗಟ್ಟುವ ನಿಟ್ಟಿನಲ್ಲಿ ಕಾನೂನು ಬದಲಾವಣೆಗೆ ಕೇಂದ್ರ ಮುಂದಾಗಿದೆ. ಅದಕ್ಕಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ)ಗೆ ಬದಲಾವಣೆ ತರಲು ಯೋಚಿಸುತ್ತಿದೆ. ಅಂಥ ಪ್ರಕರಣಗಳನ್ನು ತ್ವರಿತಗತಿ ವಿಚಾರಣೆ ನಡೆಸಲು ವಿಶೇಷ ಕೋರ್ಟ್‌ಗಳ ಸ್ಥಾಪನೆ, ಕೃತ್ಯ ಎಸಗಿದವರಿಗೆ ಜಾಮೀನು ನೀಡದೇ ಇರುವುದು,  ಸಾವನ್ನಪ್ಪಿದವರಿಗೆ ಕೇಂದ್ರದ ವತಿಯಿಂದ ಪರಿಹಾರ ನೀಡುವ ಕ್ರಮಗಳನ್ನೂ ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ ರಚಿಸಿರುವ ಸಮಿತಿಯ ಕರಡು ಶಿಫಾರಸುಗಳಲ್ಲಿ ಉಲ್ಲೇಖೀಸಲಾಗಿದೆ. ಆ.23ರಂದು ಈ ವರದಿಯನ್ನು ರಾಜೀವ್‌ ಗೌಬಾ ಅವರಿಗೆ ಸಲ್ಲಿಸಲಾಗುತ್ತದೆ ಎಂದು ಹೇಳಲಾಗಿದೆ. ಐಪಿಸಿ, ಸಿಆರ್‌ಪಿಸಿಗೆ ತಿದ್ದುಪಡಿ ತಂದಲ್ಲಿ, ಪೊಲೀಸರಿಗೆ ಥಳಿತ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಸಿಕ್ಕಿದಂತಾಗುತ್ತದೆ.

Advertisement

ಮೂವರು ಸದಸ್ಯರಿರುವ ಸಮಿತಿ ಅನೌಪಚಾರಿಕ ಚರ್ಚೆ ನಡೆಸಿ ಈ ಅಂಶಗಳ ಬಗ್ಗೆ ಕರಡು ವರದಿ ಸಿದ್ಧಪಡಿಸಿದೆ. ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಗಳಾದ ಎಸ್‌.ಸಿ.ಎಲ್‌. ದಾಸ್‌ ಮತ್ತು ಪ್ರವೀಣ್‌ ವಸಿಷ್ಟ, ರಾಷ್ಟ್ರೀಯ ಮಾದಕ ದ್ರವ್ಯ ತಡೆ ವಿಭಾಗ (ಎನ್‌ಸಿಬಿ)ದ ಮಹಾ ನಿರ್ದೇಶಕ ಅಭಯ್‌ ಸದಸ್ಯರಾಗಿದ್ದಾರೆ. 

ಕಾನೂನು ಮತ್ತು ನ್ಯಾಯ ಖಾತೆ ಕಾರ್ಯದರ್ಶಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕಾರ್ಯದರ್ಶಿಗಳ ಜತೆ ಚರ್ಚಿಸಿ ಕೆಲವೇ ದಿನಗಳಲ್ಲಿ ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next