ರಾಮನಗರ: ಸಮಾಜದ ರಕ್ಷಣೆಗೆ ದಿನದ 24 ಗಂಟೆಯೂ ದುಡಿಯುವ ಪೊಲೀಸರು ಕಾನೂನು ಜಾರಿಯಂತಹ ಹೊಣೆಯನ್ನು ಹೊತ್ತಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಇಕ್ರಂ ಹೇಳಿದರು.
ಜಿಲ್ಲೆಯ ಚನ್ನಪಟ್ಟಣದಲ್ಲಿರುವ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶದ ಅಭಿ ವೃದ್ಧಿ ಪಥದಲ್ಲಿ ಸಾಗಲು ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದು ಕಾರಣ ಎಂದರು.
ಸರ್ಕಾರ ರೂಪಿಸುವ ನಿಯಮಗಳನ್ನು ಸಾರ್ವ ಜನಿಕರು ಪಾಲಿಸುವಂತೆ ಮಾಡಲು ಹಲವಾರು ರೀತಿಯಲ್ಲಿ ಜಾಗೃತಿ, ವಿವಿಧ ಮಾಸಾಚರಣೆ ಮಾಡಿ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಾರೆ. ಕೋವಿಡ್ ನಂತಹ ಸಂದರ್ಭದಲ್ಲಿ ಯೋಧರಾಗಿ ಕಾರ್ಯನಿರ್ವಹಿಸಿದ ಪೊಲೀಸರ ಪಾತ್ರ ಶ್ಲಾಘನೀಯ ಎಂದು ಅವರು ಹೇಳಿದರು. ನಿವೃತ್ತ ಹಾಗೂ ಹುತಾತ್ಮ ಪೊಲೀಸರ ಕುಟುಂಬ ಗಳಿಗೆ ನೆರವು ನೀಡುವ ಉದ್ದೇಶದಿಂದ ಪೊಲೀಸ್ ಧ್ವಜ ದಿನಾಚರಣೆ ಹಮ್ಮಿಕೊಂಡು ಹಣ ಸಂಗ್ರಹ ಮಾಡಲಾಗುತ್ತಿದೆ. ಹೀಗೆ ಸದುದ್ದೇಶ ಹೊಂದಿರುವ ಪೊಲೀಸ್ ಧ್ವಜ ದಿನಾಚರಣೆಗೆ ನಾಗರಿಕರ ಸಹಕಾರ ಬೇಕು ಎಂದರು. ಗ್ರಾಮೀಣ ಭಾಗದಲ್ಲಿ ಯಾವುದೇ ರೀತಿ ಮೂಲಭೂತ ವ್ಯವಸ್ಥೆಗಳ ಸಮಸ್ಯೆಗಳಿದ್ದಲ್ಲಿ, ಜಿಲ್ಲಾ ಪಂಚಾಯ್ತಿ ಗಮನಕ್ಕೆ ತನ್ನಿ ಎಂದು ಪೊಲೀಸ್ ಸಿಬ್ಬಂದಿಗೆ ಕರೆ ನೀಡಿದ ಅವರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮಾತನಾಡಿ, 30 ರಿಂದ 35 ವರ್ಷಗಳ ಕಾಲ ನಿರಂತರ ಪೊಲೀಸ್ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸಿ ಇಲಾಖೆ ವತಿಯಿಂದ ನಿವೃತ್ತರಾದವರನ್ನು ಸ್ಮರಿಸಿ ಗೌರವಿಸುವ ಕೆಲಸವನ್ನು ಪ್ರತಿ ವರ್ಷ ಏಪ್ರಿಲ್ 2 ರಂದು ನಡೆಯುವ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮಾಡಲಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಪೊಲೀಸ್ ಧ್ವಜಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ಸಂಗ್ರಹದ ಹಣದಲ್ಲಿ ಶೇ.25 ರಷ್ಟು ಹಣವನ್ನು ಸೇವಾ ನಿರತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಲ್ಯಾಣ ನಿಧಿಗೆ, ಶೇ.50 ರಷ್ಟು ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಲ್ಯಾಣ ನಿಧಿಗೆ ಹಾಗೂ ಬಾಕಿ ಉಳಿದ ಶೇ.25 ರಷ್ಟು ಹಣವನ್ನು ಕೇಂದ್ರ ನಿವೃತ್ತ ಪೊಲೀಸ್ ಕಲ್ಯಾಣ ನಿಧಿಗೆ ಉಪಯೋಗಿಸಲಾಗುತ್ತಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ 2022 ಪೋಲಿಸ್ ಧ್ವಜ ಅನಾವರಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಪಿಎಸ್‌ಐ ಎಂ.ವಿ. ವೆಂಕಟೇಶ್ ವಂದನೆ ಸ್ವೀಕರಿಸಿದರು. ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ನಡೆದ ಪಥ ಸಂಚಲನದಲ್ಲಿ ಆರು ತುಕಡಿ ನಾಯಕತ್ವ ತಂಡಗಳು ಭಾಗವಹಿಸಿದ್ದು, ತಂಡಗಳ ನೇತೃತ್ವವವನ್ನು ರವಿ ಅವರು ವಹಿಸಿದ್ದರು.
ಭಾಗವಹಿಸಿದ ತಂಡಗಳು: ಒಂದನೇ ತುಕಡಿಯ ನಾಯಕತ್ವ – ಮನೋಹರ್ ಬಿ, ಎರಡನೇ ತುಕಡಿಯ ನಾಯಕತ್ವ- ಪರಮೇಶ್ ಈ. ವೈ., ಮೂರನೇ ತುಕಡಿಯ ನಾಯಕತ್ವ – ರತ್ನಮ್ನ ಪಿ., ನಾಲ್ಕನೇ ತುಕಡಿಯ ನಾಯಕತ್ವ – ಮಂಜುನಾಥ್ ಬಿ., ಐದನೇ ತುಕಡಿಯ ನಾಯಕತ್ವ – ಮಮತಾ ಎಚ್. ಎಂ., ಆರನೇ ತುಕಡಿಯ ನಾಯಕತ್ವ – ಶುಭಾಂಬಿಕಾ, ಹಾಗೂ ರಾಮನಗರ ಜಿಲ್ಲಾ ಪೊಲೀಸ್ ವಾದ್ಯ ವೃಂದ ತಂಡಗಳು ಭಾಗಿಯಾಗಿ ಪಥಸಂಚಲನ ನಡೆಸಿ ಅತಿಥಿಗಳಿಗೆ ಗೌರವ ಸಲ್ಲಿಸಿದರು.
ಸಾರ್ವಜನಿಕರ ಸಹಕಾರ ಮುಖ್ಯ : ಸಾರ್ವಜನಿಕರ ಮತ್ತು ಸರ್ಕಾರದ ಆಸ್ತಿ ರಕ್ಷಣೆ ಮಾಡುವುದು, ಕಾನೂನು ಮತ್ತು ಸುವ್ಯವಸ್ಥೆ ಯನ್ನು ಕಾಪಾಡುವ ಹೊಣೆಗಾರಿಕೆಯನ್ನು ಪೊಲೀಸ್ ಇಲಾಖೆಯು ಹೊಂದಿದ್ದು, ದಿನದ 24 ಗಂಟೆಗಳ ಕಾಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಅವಿಶ್ರಾಂತವಾಗಿ ಕರ್ತವ್ಯ ನಿರ್ವಹಿಸಬೇಕಾಗಿರುತ್ತದೆ. ಸಾರ್ವಜನಿಕರು ನಿಯಮಗಳನ್ನು ಪಾಲಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮನವಿ ಮಾಡಿದರು.