Advertisement

ಕಾನೂನು-ಸುವ್ಯವಸ್ಥೆ ಕುಸಿದಿದೆ!

02:04 AM Jun 27, 2019 | Sriram |

ಬೆಂಗಳೂರು: ‘ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಈ ರಾಜ್ಯದಲ್ಲಿ ಕಾನೂನಿನ ಆಡಳಿತದ ಬದಲು ಪೊಲೀಸ್‌ರಾಜ್‌’ ನಡೆಯುತ್ತಿದೆ.

Advertisement

ಹೀಗೆಂದು ಹೈಕೋರ್ಟ್‌ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಜೆಡಿಎಸ್‌ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ನಿಖೀಲ್ ಕುಮಾರಸ್ವಾಮಿ ಅವರ ಬಗ್ಗೆ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ಪ್ರಕಟಿಸಿದ್ದಕ್ಕೆ ‘ಟ್ರೋಲ್ ಮಗಾ’ ಫೇಸ್‌ಬುಕ್‌ನ ಅಡ್ಮಿನ್‌ ಜಯಕಾಂತ್‌ಗೆ ಅಧೀನ ನ್ಯಾಯಾಲಯ ನಿರೀಕ್ಷಣ ಜಾಮೀನು ಮಂಜೂರು ಮಾಡಿದ್ದರೂ ಆತನನ್ನು ಪೊಲೀಸ್‌ ಕಸ್ಟಡಿಯಲ್ಲಿಟ್ಟುಕೊಂಡಿರುವುದಕ್ಕೆ ಸರಕಾರದ ವಿರುದ್ಧ ಹೈಕೋರ್ಟ್‌ ಕೆಂಡ ಕಾರಿತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾ| ಪಿ.ಎಸ್‌. ದಿನೇಶ್‌ಕುಮಾರ್‌ ಅವರು, ಜಯಕಾಂತ್‌ನನ್ನು ಈ ಕೂಡಲೇ ಪೊಲೀಸ್‌ ಕಸ್ಟಡಿಯಿಂದ ಬಿಡುಗಡೆಗೊಳಿಸಬೇಕು. ಅಲ್ಲದೆ ಬಿಡುಗಡೆ ಪ್ರಕ್ರಿಯೆ ಮುಗಿದ ಬಳಿಕ ಹೈಕೋರ್ಟ್‌ ರಿಜಿಸ್ಟ್ರಾರ್‌ ಮೂಲಕ ಪಾಲನಾ ವರದಿ ಸಲ್ಲಿಸುವಂತೆ ತಾಕೀತು ಮಾಡಿದರು.

ತಮ್ಮ ವಿರುದ್ಧ ಶ್ರೀರಾಂಪುರ ಪೊಲೀಸರು ದಾಖಲಿಸಿಕೊಂಡ ಎರಡನೇ ಎಫ್ಐಆರ್‌ ರದ್ದುಗೊಳಿಸುವಂತೆ ಕೋರಿ ಜಯಕಾಂತ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಪೊಲೀಸರ ಕಾರ್ಯವೈಖರಿ, ಪ್ರಕರಣ ದಾಖಲಿಸಿಕೊಳ್ಳುವಾಗ ಎಸಗಿದ ಕಾನೂನು ಲೋಪಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಫೇಸ್‌ಬುಕ್‌ ಪ್ರಕರಣದಲ್ಲಿ ಅರ್ಜಿದಾರರಿಗೆ ಅಧೀನ ನ್ಯಾಯಾಲಯ ನಿರೀಕ್ಷಣ ಜಾಮೀನು ಮಂಜೂರು ಮಾಡಿರುವಾಗ ಅದರ ಮರುದಿನವೇ ಅಂತಹದ್ದೇ ಪ್ರಕರಣದಲ್ಲಿ ಎಫ್ಐಆರ್‌ ದಾಖಲಿಸಿಕೊಂಡು ಆತನನ್ನು ಬಂಧಿಸುವ ತುರ್ತು ಪೊಲೀಸರಿಗೇನಿತ್ತು. ಯಕಃಶ್ಚಿತ್‌ ಇದೊಂದು ಫೇಸ್‌ಬುಕ್‌ ಪ್ರಕರಣವಷ್ಟೇ ಅಲ್ಲವೇ? ಅಧೀನ ನ್ಯಾಯಾಲಯದ ಆದೇಶಕ್ಕೆ ಬೆಲೆ ಇಲ್ಲವೇ? ಇದು ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಇಲ್ಲ ಎಂಬ ಭಾವನೆ ಬರಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಈ ರಾಜ್ಯದಲ್ಲಿ ಕಾನೂನಿನ ಆಡಳಿತದ ಬದಲು ‘ಪೊಲೀಸ್‌ ರಾಜ್‌’ ಇರುವಂತಿದೆ. ಹೀಗಾದರೆ ಜನಸಾಮಾನ್ಯರು ರಸ್ತೆಯಲ್ಲಿ ಓಡಾಡುವುದಕ್ಕೂ ಕಷ್ಟವಾಗಲಿದೆ. ಇದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.

Advertisement

ಕಾನೂನು ಬಗ್ಗೆ ಗೌರವವಿದೆ
ಸರಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಉದಯಹೊಳ್ಳ, ನನ್ನ ಸರಕಾರ ಈ ನೆಲದ ಕಾನೂನಿಗೆ ಅತ್ಯುಚ್ಚ ಗೌರವ ಕೊಡಲಿದೆ. ಯಾವುದೇ ಕಾರಣಕ್ಕೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ. ಮುಖ್ಯಮಂತ್ರಿಯಾಗಲಿ, ಸರಕಾರವಾಗಲಿ ಅಥವಾ ಯಾರೇ ಆಗಲಿ ಯಾವುದೇ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಘನತೆಗೆ ಧಕ್ಕೆ ತರುವುದಿಲ್ಲ. ಈ ರೀತಿಯ ಸಂಗತಿಗಳು ಮುಂದೆ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next