ತಿ. ನರಸೀಪುರ: ಪಟ್ಟಣದ ಲಿಂಕ್ ರಸ್ತೆಯಲ್ಲಿರುವ ಶ್ರೀ ಶನೈಶ್ಚರ ಸೇವಾ ಸಮಿತಿ ವತಿಯಿಂದ ಪಟ್ಟಣದ ಶನೈಶ್ಚರ ಸ್ವಾಮಿಯ 19 ನೇ ವರ್ಷದ ಪೂಜಾ ಮಹೋತ್ಸವಕ್ಕೆ ಪಟ್ಟಣದ ಶ್ರೀಗುಂಜಾನರಸಿಂಹಸ್ವಾಮಿ ದೇವಾಲಯದ ಮುಂಭಾಗದಲ್ಲಿ ವಾಟಾಳು ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕಳೆದ ಅನೇಕ ವರ್ಷಗಳಿಂದ ಶನೈಶ್ಚರ ಸ್ವಾಮಿ ಸೇವಾ ಸಮಿತಿಯವರು ಜನರ ಕಲ್ಯಾಣಕ್ಕೆ ಪ್ರಾರ್ಥಿಸಿ ಸ್ವಾಮಿಯವರ ಉತ್ಸವ, ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಅಭಿನಂದನೀಯ. ಇದಲ್ಲದೇ ಪ್ರತಿ ವರ್ಷ ಸಹಸ್ರಾರು ಭಕ್ತರಿಗೆ ಅನ್ನ ದಾಸೋಹ ನಡೆಸಿಕೊಂಡು ಬರುತ್ತಿರುವುದು ಕೂಡ ಒಳ್ಳೆಯ ಕೆಲಸ. ಜನತೆಗೆ ಭಗವಂತ ಸಕಲ ಸಂಒತ್ತು ಕರುಣಿಸಲಿ ಎಂದು ಶುಭ ಹಾರೈಸಿದರು.
ನಂತರ ಸ್ವಾಮಿಯ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿರಿಸಿ ಆರಂಭಗೊಂಡ ಮೆರವಣಿಗೆಯಲ್ಲಿ ಡೋಲು ಕುಣಿತ, ನಂದಿ ಕಂಬ, ಕಂಸಾಳೆ ಕುಣಿತ ಹಾಗೂ ಪೂಜಾ ಕುಣಿತದ ಕಲಾ ತಂಡಗಳೊಂದಿಗೆ ಮಂಡ್ಯ ಜಿಲ್ಲೆಯ ದೊಡ್ಡರಸಿನಕರೆ ಬಸಪ್ಪನವರ ಮೆರವಣಿಗೆ ವಿಜೃಂಭಣೆ ಜರುಗಿತು.
ಉತ್ಸವದ ಅಂಗವಾಗಿ ಲಿಂಕ್ ರಸ್ತೆಯಲ್ಲಿ ಶನೈಶ್ಚರ ಸ್ವಾಮಿ ಭಾವಚಿತ್ರಕ್ಕೆ ಹೂವಿನ ಅಲಂಕಾರದೊಂದಿಗೆ ಅಭಿಷೇಕ, ವಿಶೇಷ ಪೂಜೆಗಳು ಜರುಗಿದವು. ಶನಿವಾರ ರಾತ್ರಿ ಸಂಜೆ ಟಿ. ಶಿವಕುಮಾರಶಾಸ್ತ್ರಿಗಳಿಂದ ಶನಿದೇವರ ಕಥೆ ಕೀರ್ತನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸೇವಾ ಸಮಿತಿ ಮುಖಂಡರಾದ ಸುಭಾಷ್, ಕೃಷ್ಣಪ್ಪ, ಕೆ.ಜಿ.ನಾಗೇಶ್, ಗೋವಿಂದ ಶಾಂತರಾಜು, ಕೆಂಪಣ್ಣ, ಶಿವಣ್ಣ, ಪುರಸಭಾ ಸದಸ್ಯ ಟಿ.ಎಂ.ನಂಜುಂಡಸ್ವಾಮಿ, ಮರಿಸ್ವಾಮಿ, ಅಕ್ಕಿ ನಾಗಪ್ಪ, ತೋಟಿ ಇತರರು ಇದ್ದರು.