Advertisement

ಬೂತ್‌ ಮಟ್ಟದಲ್ಲಿ ಕೈ ಬಲವಾಗಬೇಕು

06:00 AM Jul 29, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌ ಪಕ್ಷವು ನೆಹರೂ, ಇಂದಿರಾಗಾಂಧಿ ಹೆಸರಿನಲ್ಲಿ ಹೆಚ್ಚು ದಿನ ಮತ ಪಡೆಯಲು ಸಾಧ್ಯವಿಲ್ಲ. ತಳಮಟ್ಟದಿಂದ ಪಕ್ಷ ಬಲಪಡಿಸಿದರೆ ಮಾತ್ರ ನಾವು ಯಶಸ್ವಿಯಾಗಲು ಸಾಧ್ಯ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

Advertisement

ಕಾಂಗ್ರೆಸ್‌ ಪಕ್ಷ  ಸಂಘಟನೆ ಹಾಗೂ ಕಾರ್ಯಕರ್ತರ ಜತೆ ನೇರ ಸಂಪರ್ಕ ಕಲ್ಪಿಸುವ “ಶಕ್ತಿ ‘ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದೆ ನೆಹರೂ ಹಾಗೂ ಇಂದಿರಾಗಾಂಧಿ ಹೆಸರು ಹೇಳಿದರೆ ಕಾಂಗ್ರೆಸ್‌ಗೆ ಮತಗಳು ಹರಿದು ಬರುತ್ತಿದ್ದವು. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ. ನಾವು ಬೂತ್‌ ಮಟ್ಟದಿಂದ ಬಲಿಷ್ಠವಾಗದಿದ್ದರೆ ನಮಗೆ 2019 ರ ಲೋಕಸಭೆ ಚುನಾವಣೆ ಎದುರಿಸುವುದು ಕಷ್ಟವಾಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಪಕ್ಷಕ್ಕೆ ಒಂದು ಕಾಲದಲ್ಲಿ ಸವಾಲೇ ಇರುತ್ತಿರಲಿಲ್ಲ. ಆದರೆ,  ಈಗ ಕೆಲವೆಡೆ ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷಗಳು ಶಕ್ತಿಯುತವಾಗಿವೆ.  ಈ ವಿಚಾರವನ್ನು ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಬಿಜೆಪಿಗಿಂತ ಹೆಚ್ಚು ಬಲಿಷ್ಠವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗಿಂತಲೂ  ಶೇ. 2 ರಷ್ಟು ಹೆಚ್ಚಿನ ಮತ ಗಳಿಸಿದ್ದರೂ, ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಅದಕ್ಕೆ ಎಲ್ಲ ಭಾಗದಲ್ಲಿಯೂ ನಮ್ಮ ಶಕ್ತಿ ಹಂಚಿಕೆಯಾಗದಿರುವುದು ಕಾರಣ ಎಂದು ತಿಳಿಸಿದರು.

ದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೇ ರಾಷ್ಟ್ರೀಯ ಪಕ್ಷಳಿದ್ದು, ಬಿಜೆಪಿ ಕಾಂಗ್ರೆಸ್‌ ಮುಕ್ತ ಭಾರತ ಮಾಡಲು ಹೊರಟಿದೆ.  ಈ ದೇಶದಲ್ಲಿ ಬಿಜೆಪಿ ಮುಕ್ತ ಮಾಡಬಹುದು. ಆದರೆ, ಕಾಂಗ್ರೆಸ್‌ ಮುಕ್ತ ಮಾಡಲು ಸಾಧ್ಯವಿಲ್ಲ. ಆದರೆ, ನಾವು ನಮ್ಮ ಪಕ್ಷವನ್ನು ಬಲಿಷ್ಠಗೊಳಿಸಬೇಕಾಗಿದೆ. ಬಿಜೆಪಿ ಅಜೆಂಡಾ ಜಾರಿಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

Advertisement

ಗುಜರಾತ್‌ನಲ್ಲಿ ಕಾಂಗ್ರೆಸ್‌ ಸೋಲು ಅನುಭವಿಸಿತು ಎಂದ ಮಾತ್ರಕ್ಕೆ ನಮ್ಮ ಅಸ್ತಿತ್ವ ಅಲ್ಲಿ ಇಲ್ಲ ಎಂದಲ್ಲ. ಕೆಲವೊಮ್ಮೆ ನಮ್ಮ ಅಸ್ತಿತ್ವ ಇದ್ದರೂ ಗುರಿ ತಲುಪಲು ಸಾಧ್ಯವಾಗುವುದಿಲ್ಲ.  ಹೆಚ್ಚು ಪರಿಶ್ರಮ ಹಾಗೂ ಪ್ರಯತ್ನ ಪಟ್ಟರೆ ಅದೂ ಸಾಧ್ಯವಾಗಲಿದೆ ಎಂದರು.

ಬಿಜೆಪಿ ಕರಾವಳಿ ಭಾಗದಲ್ಲಿ ಶೇ. 50 ರಷ್ಟು ಮತಗಳನ್ನು ಪಡೆದರೆ, ಹಳೆ ಮೈಸೂರು ಭಾಗದಲ್ಲಿ ಶೇ. 17 ರಷ್ಟು ಮಾತ್ರ ಮತ ಪಡೆದಿದೆ. ಪ್ರತಿಯೊಂದು ಚುನಾವಣೆಯಲ್ಲಿಯೂ ಗೆಲ್ಲಬೇಕಾದರೆ ಬೂತ್‌ ಮಟ್ಟದಲ್ಲಿ ಬಲಿಷ್ಠವಾಗಬೇಕು. ಪ್ರತಿ ಬೂತ್‌ನಲ್ಲಿ ನಮ್ಮ ಕಾರ್ಯಕರ್ತರ ಶಕ್ತಿ ಇದ್ದರೆ, ಮತ ಗಳಿಕೆ ಪ್ರಮಾಣ ಹೆಚ್ಚಾಗುತ್ತದೆ. ಅದು ಹೆಚ್ಚಿನ ಸಂಖ್ಯೆಯ ಸಂಸದರು ಆಯ್ಕೆಯಾಗಲು ಅನುಕೂಲವಾಗುತ್ತದೆ ಎಂದರು.

ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಿ ಕಾರ್ಯಕರ್ತರ ಜತೆ ನೇರ ಸಂಪರ್ಕ ಸಾಧಿಸುವ “ಶಕ್ತಿ’ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಬೇಕು. ಪ್ರತಿಯೊಬ್ಬ ಕಾರ್ಯಕರ್ತರು ಆಗಸ್ಟ್‌ 15 ರೊಳಗೆ ಶಕ್ತಿ ಯೋಜನೆಯ ಸದಸ್ಯರಾಗಬೇಕು. ಜತೆಗೆ ಜನ ಸಾಮಾನ್ಯರನ್ನೂ ಕಾಂಗ್ರೆಸ್‌ ಸದಸ್ಯತ್ವ ಪಡೆಯುವಂತೆ ಪ್ರೇರೆಪಿಸಬೇಕು ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಶಕ್ತಿ ಯೋಜನೆ ಅತ್ಯಂತ ಸರಳವಾಗಿದ್ದು, ಪಕ್ಷವನ್ನು ರಾಜ್ಯದ ಎಲ್ಲ ವಿಭಾಗದಲ್ಲಿಯೂ ಬಲಿಷ್ಠಗೊಳಿಸಲು ಹೆಚ್ಚು ಅನುಕೂಲವಾಗುತ್ತದೆ. ಕೆಪಿಸಿಸಿ ವತಿಯಿಂದ ಸಮರೋಪಾದಿಯಲ್ಲಿ ಶಕ್ತಿ ಯೋಜನೆ ಕೈಗೆತ್ತಿಕೊಂಡು ದೇಶದಲ್ಲಿಯೇ ನಂಬರ್‌ ಒನ್‌ ಸ್ಥಾನ ಪಡೆಯುವುದಾಗಿ ತಿಳಿಸಿದರು.

ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಮಾತನಾಡಿ, ಕಾಲೇಜು ಮಟ್ಟದಲ್ಲಿಯೇ ಪಕ್ಷದ ಸದಸ್ಯತ್ವವನ್ನು ಹೆಚ್ಚಿಸುವ ಪ್ರಯತ್ನ ಮಾಡಬೇಕು. ತಳ ಮಟ್ಟದಿಂದ ಪಕ್ಷದ ಕಾರ್ಯಕರ್ತರಾದವರು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಅಲ್ಲದೇ ಚುನಾವಣೆಗೆ ಸ್ಪರ್ಧಿಸ ಬಯಸುವ ಪ್ರತಿಯೊಬ್ಬರಿಗೂ ಶಕ್ತಿ ಸದಸ್ಯತ್ವ ಮಾಡಿಸಲು ಗುರಿ ನೀಡಬೇಕು ಎಂದು ಸಲಹೆ ನೀಡಿದರು.

ಏನಿದು ಶಕ್ತಿ ಪ್ರಾಜೆಕ್ಟ್ ?
ಕಾಂಗ್ರೆಸ್‌ ಕಾರ್ಯಕರ್ತರು ನೇರವಾಗಿ ಪಕ್ಷದ ಹೈ ಕಮಾಂಡ್‌ ಜೊತೆ ಸಂಪರ್ಕದಲ್ಲಿರಲು ಕರ್ನಾಟಕದ ಕಾರ್ಯಕರ್ತರು 7045006100 ಸಂಖ್ಯೆಗೆ ತಮ್ಮ ಓಟರ್‌ ಐಡಿ ನಂಬರನ್ನು ಮೆಸೆಜ್‌ ಮಾಡಿದರೆ. ಅದು ಕಾಂಗ್ರೆಸ್‌ ಸದಸ್ಯತ್ವ ಪಟ್ಟಿಗೆ ಸೇರ್ಪಡೆಯಾಗುತ್ತದೆ. ಕಾರ್ಯಕರ್ತರು ಕಳುಹಿಸಿದ ಮೆಸೇಜ್‌ಗೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯಿಂದ ವಾಯ್ಸ ಮೆಸೇಜ್‌ ಕೂಡ ಬರಲಿದೆ. ನಂತರ ಕಾರ್ಯಕರ್ತರು ಪಕ್ಷದ ಬಲವರ್ಧನೆಗೆ ತಮ್ಮ ಅಭಿಪ್ರಾಯವನ್ನು ನೇರವಾಗಿ ಹೈಕಮಾಂಡ್‌ಗೆ ಕಳುಹಿಸಲು ಈ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ರಾಜಸ್ಥಾನ, ಛತ್ತೀಸ್‌ಘಡ್‌, ತೆಲಂಗಾಣ, ಗುಜರಾತ್‌ ಹಾಗೂ ಮಹಾರಾಷ್ಟ್ರದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next