ಗದಗ: ಜಿಲ್ಲಾದ್ಯಂತ ಹೆಚ್ಚುತ್ತಿರುವ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದೆ. ಅದರೊಂದಿಗೆ ಗದಗ ತಾಲೂಕಿನ ಕೊರೊನಾ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುವುದರೊಂದಿಗೆ ಕಾಲಕಾಲಕ್ಕೆ ಅಧಿಕಾರಿಗಳ ಸಭೆ ನಡೆಸಿದ್ದ ಸ್ಥಳೀಯ ಶಾಸಕ ಎಚ್.ಕೆ.ಪಾಟೀಲ ಅವರು ಇದೀಗ ತಮ್ಮದೇ ಆದ ಕೆ.ಎಚ್.ಪಾಟೀಲ ಪ್ರತಿಷ್ಠಾನದಿಂದ ಕೋವಿಡ್ ಕೇರ್ ಆಸ್ಪತ್ರೆ ಆರಂಭಿಸಿದ್ದಾರೆ. ಈ ಮೂಲಕ ಕೋವಿಡ್ ವಿರುದ್ಧದ ಸಮರದಲ್ಲಿ ಸರಕಾರದೊಂದಿಗೆ ಕೈಜೋಡಿಸಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚು ಕಂಡು ಬರುತ್ತಿದ್ದಂತೆ ಸರಕಾರವನ್ನು ನಿರಂತರ ಎಚ್ಚರಿಸುವ ಕೆಲಸ ಮಾಡುವುದರೊಂದಿಗೆ ಸೋಂಕು ನಿವಾರಣೆಗೆ ವಿವಿಧ ವಿಶೇಷ ಉಪಕ್ರಮ ಕೈಗೊಂಡಿದ್ದಾರೆ.
ಸೋಂಕಿತರೊಂದಿಗೆ ಸಂವಾದ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಏ.29ರಿಂದ ಹೋಂ ಐಸೋಲೇಷನ್‌ನಲ್ಲಿರುವ ನೂರಾರು ಸೋಂಕಿತರೊಂದಿಗೆ ನಿರಂತರ ಸಂವಾದ ನಡೆಸುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ 10 ರಿಂದ 12 ಗಂಟೆವರೆಗೆ ಸತತ ಎರಡು ಗಂಟೆಗಳ ಕಾಲ ಸಂವಾದ ನಡೆಸುತ್ತಿದ್ದಾರೆ. ಸೋಂಕಿತರಿಗೆ ಧೈರ್ಯ ತುಂಬುವುದರ ಜತೆಗೆ ಅಗತ್ಯವಿದ್ದವರಿಗೆ ತಜ್ಞ ವೈದ್ಯರಿಂದ ಆರೋಗ್ಯಕ್ಕೆ ಸಂಬಂಧಿ ಸಿದ ಸಲಹೆ-ಸೂಚನೆ-ಮಾರ್ಗದರ್ಶನ ಕಲ್ಪಿಸುತ್ತಿದ್ದಾರೆ.
ಸಹಾಯವಾಣಿ, ಆಂಬ್ಯುಲೆನ್ಸ್ ಸೇವೆ: ಸೋಂಕಿತರ ಬೇಕು-ಬೇಡಿಕೆಗಳನ್ನು ಪೂರೈಸಲು ಎಚ್. ಕೆ.ಪಾಟೀಲ ಗದಗ ತಾಲೂಕು ಕೊರೊನಾ ಸೇವಾ ತಂಡ ಮತ್ತು ಸಹಾಯವಾಣಿ ರಚಿಸಿದ್ದಾರೆ. ಪ್ರಮುಖ ನಾಲ್ವರ ಮೊಬೈಲ್‌ಗಳನ್ನು ಸಹಾಯವಾಣಿಗೆ ನೀಡಿದ್ದು, ಅವರ ಮೂಲಕ 52 ಜನರ ಯುವ ಪಡೆ ಕಾರ್ಯ ನಿರ್ವಹಿಸುವಂತೆ ಮಾಡಿದ್ದಾರೆ. ಇದರಲ್ಲಿ ವೈದ್ಯರು, ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರಿದ್ದು, ಅಗತ್ಯವಿರುವ ಸೋಂಕಿತರ ಮನೆಗೆ ಆಹಾರ, ಆಹಾರ ಧಾನ್ಯ, ಔಷಧ, ಓದುವ ಅಭಿರುಚಿಯಿರುವವರಿಗೆ ಬಯಸಿದ ಪುಸ್ತಕಗಳನ್ನೂ ಒದಗಿಸುವ ಮೂಲಕ ಸೋಂಕಿತರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಸೇವಾಕರ್ತರು ಪ್ರಚಾರಕ್ಕಾಗಿ ಸೋಂಕಿತರೊಂದಿಗೆ ಫೋಟೋ ತೆಗೆದುಕೊಳ್ಳುವುದು, ಸಾಮಾಜಿಕ ತಾಣದಲ್ಲಿ ಹರಿಬಿಡದಂತೆ ಸೂಚಿಸಿರುವುದು ಗಮನಾರ್ಹ.
ಅಧಿಕಾರಿಗಳ ಜತೆ ಶಾಸಕರ ಸಭೆ: ಜಿಲ್ಲೆಯ ಮುಂಡರಗಿಯಲ್ಲಿ ವೆಂಟಿಲೇಟರ್ ಸಿಗದೇ ಮೂವರು ಸಾಯುತ್ತಿದ್ದಂತೆ ಶಾಸಕ ಎಚ್. ಕೆ.ಪಾಟೀಲ, ರೋಣ ಮಾಜಿ ಶಾಸಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗದೊಂದಿಗೆ ಜಿಲ್ಲಾ ಧಿಕಾರಿಗಳನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ವೈದ್ಯಕೀಯ ಸೇವೆಯಲ್ಲಿ ಕೊರತೆಯಾಗದಂತೆ ಕ್ರಮ ವಹಿಸಲು ಮನವಿ ಮಾಡಿದ್ದಾರೆ.
ಜಿಮ್ಸ್‌ಗೆ ಅನುದಾನ ಬಿಡುಗಡೆ: ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 20 ಕೆಎಲ್ ಸಾಮರ್ಥ್ಯದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್ ಸ್ಥಾಪನೆಗಾಗಿ ಶಾಸಕ ಎಚ್.ಕೆ.ಪಾಟೀಲ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಯಡಿ 42ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಜತೆಗೆ ಶಾಸಕರ ನಿಧಿಯಡಿ ಖರೀದಿಸಿದ 10 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಹಸ್ತಾಂತರಿಸಿದ್ದಾರೆ. ಈ ನಡುವೆ ಜಿಮ್ಸ್‌ಗೆ ಭೇಟಿ ನೀಡಿದ್ದ ಅವರು ಆಕ್ಸಿಜನ್ ಸಂಗ್ರಹಣ ಘಟಕ ಪರಿಶೀಲಿಸಿ, ಆಸ್ಪತ್ರೆಯಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.